Thursday, August 2, 2018

ಇರಲಿ ಜಗಳ ವಾದ-ವಿವಾದ-ವಿಷಾದ

*ಇರಲಿ ಜಗಳ ವಾದ-ವಿವಾದ-ವಿಷಾದ*

ನಾ ಹಗುರಾದೆ ಭಾವತಿವ್ರತೆಯ
ಜಂಜಡದಿ ನಿನ್ನ ಸಮರ್ಪಣೆ
ನನ್ನ
ಹಪಾಹಪಿ ಫಲ ನೀಡಿದಾಳಕೆ

ವಾದ-ವಿವಾದ-ವಿಷಾದ
ದೂರ ದೂಡಿ
ಕೊನೆಯವರೆಗೆ ಕೂಡಿ
ನಲಿಯುತಲಿರೋಣ

ತಾಯಾಗಿ ಸಂಗಾತಿಯಾಗಿ ರಮಿಸುತ
ವಿರಮಿಸಿ ಬರೆದು ಧೇನಿಸಿ
ಮಿಲನ ಮಹೋತ್ಸವದ
ಸಡಗರವ ಸವಿಯುತಲೇ ಸಾಗೋಣ

ದೇವರ ಸಾನಿಧ್ಯದ ಕೃಪಾಶಿರ್ವಾದ
ವಾದದ ವಿಷಾದ ನಮ್ಮನು ಸೆಳೆದಿದೆ
ಹತ್ತಿರ ಇನ್ನೂ ಹತ್ತಿರ

ವ್ಯಾಮೋಹದಿಂದ
ನೀ
ವಿಮುಖಳಾಗಿ
ತಪ್ಪಿಸಿಕೊಂಡೆ
ನಾ
ಒದ್ದಾಡುತಿರುವ *ಇರುವೆ*
ಎಂಬ ಭಾವಕಿಲ್ಲ ಅಂತ್ಯ

ನೀ ನನ್ನ ಹಾಗೆ
ಒದ್ದಾಡಿದರೆ ನನಗೂ
ಅದೇ ಸಡಗರ

ಹುಡುಕುವುದ ನಿಲ್ಲಿಸಿದೆ ಎಲ್ಲಂದರಲಿ
ಕಂಡೆ ಎಲ್ಲ ಏನೆಲ್ಲಾ ಬರೀ ನಿನ್ನ
ಮೈಮನಗಳ ಹೊಳಪಲಿ‌‌

ಹುಸಿ ಕೋಪದಿ ದೂರ ದೂಡಿದ
ರಭಸಕೆ ಮೌನದಾಘಾತ

ಹೋಗು ಬೇಡ ದೂರ
ಹೋಗು ತೆಗೆದುಕೋ ಸನ್ಯಾಸ
ಬಿಟ್ಟು ಬಿಡು‌ ನನ್ನ
ನನ್ನ ಪಾಡಿಗೆಂಬ ಕೂಗ

ಮರೆಯಾಗದ ಹಳವಂಡ ಮರೆತು
ಬಿಡುವ ಮಾತ ಮರೆತೆನೆಂದರೂ
ಮರೆಸುವ ಹುನ್ನಾರ ಬೇಡ ಸಖೀ

ರೋಸಿ ಹೋದ ಜೀವಕೆ ಒಲವ
ಸವಿಜೇನು ವಿಷವಾಗದು

ವ್ಯಾಮೋಹದ ಹಂಗಿನರಮನೆಯ
ಬಂಧನದ ನೋವ ತಾಳಿಕೋ
ತಾಳಿಯ ಬಂಧ ಬಗೆದು

ಹೋಗುವುದಾದರೆ ಹೋಗಿ ಬಿಡೋಣ
ಬಾರದ ಅಮರ ಲೋಕದ ನಿಲುಕದ
ನಕ್ಷತ್ರಗಳಾಗಿ ಮಿಂಚಿ ಮರೆಯಾಗದಿರೋಣ

ಅಗಲಿದ ರೋಮಿಯೋ-ಜೂಲಿಯಟ್
ಇಂದಿಗೂ ಅಮರ ಅಜರಾಮರ ಬೇಡ
ಆ ವಿಷಾದದ ಸಾವಂಬ ವಿರಮಿಸುವ ಜಂಜಡ

ನಾವು ನಾವಾಗಿ ಇರುತ ವ್ಯಾಮೋಹದ
ವಿಷವರ್ತುಲದಿ ಗಿರ ಗಿರ ತಿರುಗಿ
ತಿರುಗಿ ಕಚ್ಚಿ ಗಾಯವಾದ ಮೈನೆಕ್ಕುತ
ಪರಸ್ಪರ ರೋಧಿಸಿ ಬಿಗಿದಪ್ಪಿ ಕಣ್ಣೀರ
ಧಾರೆಗೆ ಮೈಯೊಡ್ಡಿ ತೊಯ್ದು ತಪ್ಪಡಿಯಾಗಿ
ಒಲವ ಬಿಸಿಲಲಿ ಒಣಗಿ ತಣ್ಣಗಾಗೋಣ

ಅತ್ತರೆ ಸತ್ತರೆ ಮರುಗುವವರಿಲ್ಲ ಈ
ಅಸಹಾಯಕ ಜೀವಗಳ ತಲ್ಲಣಕೆ
ನಮಗೆ ನಾವೇ ನನಗೆ ನೀ
ನಮಗೆ ನಾವೇ ನಿನಗೆ ನಾ

ನಾನೀ ಸೂತ್ರ ಹಿಡಿದು ಹಾರುವ
ಗಾಳಿಪಟಕೆ ಜಗಳವೇ ಸೂತ್ರ
ಪ್ರೀತಿಯೇ ಬಾಲಂಗೋಸಿ
ಅಳೋಣ ನಗೋಣ ರಮಿಸೋಣ

ಬೇಕು ಬೇಡಗಳ ನಿರ್ಬಂಧ ಹೇರಿಕೊಂಡು
ಕೊರಗಿದರೂ ಕರಗುವ ಹಿಂಸೆಯನೂ
ಸಂಭ್ರಮಿಸಿ ನಲಿಯುತಲೇ ಇರೋಣ

ಒಲವ ಹೋಳಿಗೆಯ ಸಿಹಿ ಸವಿಗೆ
ಜಗಳವೆಂಬ ಕೋಸಂಬರಿ ಹಪ್ಪಳ
ಸಂಡಿಗೆ
ಬೇಕು ಎಲ್ಲ ಎಲ್ಲಾ ಸಹಿಸುವ
ಎದೆಗುಂಡಿಗೆ.

   ಸಿದ್ದು ಯಾಪಲಪರವಿ.‌

No comments:

Post a Comment