*ಒಲವ ಪಯಣದಿ ಬರೀ ಮುಳ್ಳುಗಳು...ಆದರೂ*
ಈ ಒಲವ ಪಯಣದಲಿ ಹೂಗಳ ಹುಡುಕಾಟ. ಕೈಗೆ ಚುಚ್ಚುವ ಮುಳ್ಳುಗಳ ಲೆಕ್ಕಿಸದೇ ಹೂ ಸ್ಪರ್ಶಿಸುವ ತವಕ.
ಭಾವುಕ ಮನಸಿಗೆ ಸಾವಿರದ ಹುಚ್ಚು ಮುಖಗಳು.
ಬರೀ ಮುದ್ದಿಸುವ ಅಹಮಿಕೆ.
ನನ್ನ ಸರಿಸಮ ಯಾರೂ ಇಲ್ಲವೆಂಬ ಭ್ರಾಂತು. ಕಳೆದುಕೊಂಡ ಲೆಕ್ಕ ಇಡದೇ ಕಳೆದುಕೊಳ್ಳುತ್ತಲೇ ಹೋಗುವ ಚಪಲ.
ಕಣ್ಣೀರು ಸಿಹಿ ಪನ್ನೀರಲ್ಲವಾದರೂ ಅಳುತಲೇ ಇರುವ ಹುಮ್ಮಸ್ಸು.
ಸೋತೆನೆನದೇ, ಸತ್ತೆನೆನದೇ ದಣಿವಾದರೂ ನಿಲ್ಲದೇ ಓಡುತ್ತ, ಓಡುತ್ತ ಒಲವ ಸಂಗಾತಿಯ ಹುಡುಕಾಟ.
ನಿಲ್ಲದ ಭರವಸೆ. ಇಂದಲ್ಲ ನಾಳೆಯಾದರೂ ಸಿಗಬಹುದು... ಮನದ ಮಾತು ಆಲಿಸುವ ಮನಸೆಂಬ ತುಂಬು ನಂಬಿಗೆ.
ನೋಡುವರ ಕಣ್ಣಿಗೆ ಹುಚ್ಚ ಆದರೂ ಜಾಣನೆಂಬ ಕನವರಿಕೆ. ಬುದ್ಧಿ ಮಾಯ, ಹೃದಯ ಸದಾ ಎಚ್ಚರ. ಮೆದುಳಿಗೆ ಕೆಲಸ ಕೊಡದೇ, ಅದರ ಮಾತನ್ನೂ ಕೇಳದೇ ಮನಸಿನ ಭಾವನೆಗಳ ಬೆಂಬಿದ್ದು ಓಡಿದ್ದೇ ಓಡಿದ್ದು. ದಣಿವೇ ಇಲ್ಲ.
ಹಗಲು ರಾತ್ರಿಯಾಗಿ, ರಾತ್ರಿ ಹಗಲಾಗಿ ಕಾರ್ಗತ್ತಲಲೂ ಬೆಳಕು ಕಾಣುವ ಸಡಗರ. ಸದಾ ಒಂದೇ ಧ್ಯಾನ ಒಲವು, ಬರೀ ಒಲವು…
ಒಲವಿನಿಂದ ಎಲ್ಲವನೂ ಒಲಿಸಿಕೊಳುವೆನೆಂಬ ಹಲುಬಾಟ.
ಒಮ್ಮೆ ಅಳು, ಮತ್ತೊಮ್ಮೆ ನಗು, ಏಕಾಂತದಲಿ ಕನಸುಗಳ ಮಾರಾಟ. ಕೊಂಡುಕೊಳ್ಳುವವರೇ ಇಲ್ಲ. ಆದರೂ ನಿರಾಶೆಯೆಂಬುದೇ ಇಲ್ಲ. ಇಂದಲ್ಲ ನಾಳೆ ಅರ್ಥ ಮಾಡಿಕೊಳ್ಳವ ಜೀವ ನನಗಾಗಿ ಎಲ್ಲೋ ಬಹು ದೂರದ ತೀರದಲಿ ಕಾಯುತ್ತಲೇ ಇದೆ ಎಂಬ ಅಚಲ ನಂಬಿಗೆಯ ನಿಲ್ಲದ ಹುಡುಕಾಟ.
ಸಿಗಬಹುದು, ಸಿಕ್ಕಾರು ಆದರೆ ಎಷ್ಟು ದಿನ ಇರಬಹುದೆಂಬ ಕನಿಷ್ಟ ಲೆಕ್ಕಾಚಾರವೂ ಬೇಡ. ನಂಬಿ ಕರಡಿಯ ಹಾಗೆ ತಬ್ಬುವ ಹಂಬಲ. ಕೆಚ್ಚಲಲಿ ಹಾಲ ಹನಿಗೆ ಕಾತರಿಸುವ ಕರು.
ಒಲವ ಪಯಣದ ಸುಂದರ ದೋಣಿಯ ಮೆಚ್ಚಿಕೊಂಡವರು ಜೊತೆಗೆ ಸಾಗುತ್ತಾರೆ, ಒಲವ ದೋಣಿ ಬೇಗ ದಡ ಸೇರಲಾರದ ನಿಧಾನಕೆ ಸಹನೆ ಮಂಗ ಮಾಯವಾದಾಗ ಥಟ್ಟನೇ ಇಳಿದು ಒಂಟಿಯಾಗಿಸುತ್ತಾರೆ.
ಆಳಬೇಡ, ನಲುಗಬೇಡ ಮನವೇ. ಈ ಒಲವ ಬದುಕೇ ಹೀಗೆ ಒಂಟಿತನವ ದಹಿಸುವ ಶಕ್ತಿ ಕಲಿಸುತ್ತದೆ.
ಒಂಟಿತನ ಬರು ಬರುತ್ತ ಏಕಾಂತದ ಮೆಲ್ಲುಸಿರ ಸವಿಗಾನದ ಮಾಧುರ್ಯ. ಬರೀ ಕೇಳಿಸಿಕೊಂಡರೆ ತಿಳಿಯುವುದಿಲ್ಲ, ಅರ್ಥವಾಗುವುದೂ ಇಲ್ಲ.
ಎದೆ ಬಡಿತದ ಹಾಗೆ ಸಹನೆಯಿಂದ *ಆಲಿಸಬೇಕು*. ಅಲ್ಲಿರುವುದು ಬರೀ ಡಬ್, ಡಬ್ ಸದ್ದಲ್ಲ. ಎಂದೂ ಎಂದೆಂದೂ ಮರೆಯದ ಸವಿಗಾನದ ಪಿಸುಮಾತುಗಳ ಕಲರವ.
“ಹೋಗು ವಾಸ್ತವ ನೋಡು, ಕೆಲಸ ಮಾಡು, ಒಂದಿಷ್ಟು ಬದುಕುವುದ ಕಲಿ” ಎಂದರೆ ಕೇಳುವುದೇ ಇಲ್ಲ.
ಹತ್ತುವವರು ಹತ್ತಲಿ, ಇಳಿಯುವವರೂ ಇಳಿದರೂ ನಿಲ್ಲದೀ ಒಲವ ಹುಚ್ಚು ಪಯಣ.
ಕೈ ಖಾಲಿಯಾದರೂ ಮನಸು ಖಾಲಿಯಾಗದ ಖಯಾಲಿ.
ಹಗಲಲೂ ನಕ್ಷತ್ರಗಳ ಹುಡುಕಾಟ. ರಾತ್ರಿ ಸೂರ್ಯನಿಗಾಗಿ ತಡಕಾಟ. ಅಮವಾಸ್ಯೆಯಲೂ ಚಂದ್ರ ಮೂಡಿಯಾನು ಎಂಬ ಭರವಸೆ.
ಸಾವೆಂಬ ಸೂತಕ ಆವರಿಸುವ ತನಕ ಸಾಗಿಯೇ ಇರುವ ಈ ಪಯಣದಲಿ ನೀ ಸದಾ ಏಕಾಂಗಿಯಾದರೂ ಒಂಟಿಯಲ್ಲ...ಒಂಟಿಯಲ್ಲ...ಒಂಟಿಯಲ್ಲ…
ಸಿದ್ದು ಯಾಪಲಪರವಿ
No comments:
Post a Comment