ಲವ್ ಕಾಲ
*ಶಬ್ದ ಸೂತಕವಾಗುವ ಮೊದಲು ಮಾತು ಮುಗಿಯಲಿ*
ಮಾತು ಮಾತು ಬರೀ ಮಾತು. ಹೇಳಿದ್ದೇ ಸಾವಿರ ಸಲ ಹೇಳುವ ಧಾವಂತ. ಬದಲಾಯಿಸಿ ದಕ್ಕಿಸಿಕೊಳ್ಳುವ ಸ್ವಾರ್ಥದ ಪೊಸೆಸ್ಸಿವ್.
‘ ನೀ ಎಷ್ಟೇ ಹೇಳು ನನಗೆ ಸರಿ ಅನಿಸಿದಾಗ ಮಾತ್ರ ಒಪ್ಪಿಕೊಳ್ಳುತ್ತೇನೆ ‘ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದರೂ ನಿಲ್ಲದ ನಿರ್ಲಜ್ಯ.
ಈ ಸುಡುಗಾಡು ವ್ಯಮೋಹವೇ ಹೀಗೆ, ಮತ್ತೊಬ್ಬರ ಸ್ವಾತಂತ್ರ್ಯ ಕಸಿದುಕೊಳ್ಳುವ ಕೆಟ್ಟ ಹುನ್ನಾರ.
ಅದು ಗೊತ್ತಿದ್ದೂ ನಾ ಅದನ್ನೇ ಮಾಡಿ ನಿನ್ನ ಬಲಿ ತೆಗೆದುಕೊಂಡೆ. ಧಿಕ್ಕಾರವಿರಲಿ ನನ್ನ ನಿರ್ಲಜ್ಯ ಸ್ವಾರ್ಥ ವ್ಯಾಮೋಹಕೆ.
ಸರಾಸರಿ ದಿನಕ್ಕೆರಡು ತಾಸು ಹೇಳಿದ್ದಾದರೂ ಏನು ?
ಅವೇ ಮಾತುಗಳು. ಪ್ರಯೋಜನ ? ಅತ್ಯಮೂಲ್ಯ ಸಮಯ ಹಾಳು ಮಾಡಿ ಮನಸು ಮಲಿನ ಮಾಡಿಕೊಂಡದ್ದು. ಪರಿಣಾಮ ಶೂನ್ಯ ಸಂಪಾದನೆ.
*ಅನುಮಾನಿಸಿ ಅವಮಾನಿಸುವವನಿಗೂ ನನಗೂ ಏನೂ ವ್ಯತ್ಯಾಸ ಇಲ್ಲ* ಅನಿಸಿಕೊಂಡುಬಿಟ್ಟೆ. ನಾನೂ ಒಬ್ಬ ‘ಸಂಶಯ ಪಿಶಾಚಿ’ ಎಂಬ ಪಟ್ಟ ಕಟ್ಟಿಕೊಂಡು ಕಾಲ ಗರ್ಭದಲಿ ಶಬ್ದಗಳ ಸೂತಕ ಮಾಡಿಬಿಟ್ಟೆ.
*ಪರಿವರ್ತನೆ ನಮ್ಮಲ್ಲಿ ಬರಬೇಕು ಅದನ್ನು ಬೇರೆಯವರಿಂದ ನಿರೀಕ್ಷಸಬಾರದು* ಎಂಬ ಸಾಲುಗಳು ವೇದಾಂತದಲಿ ಉಳಿದುಬಿಟ್ಟವು. ಬದುಕಲಿ ಅಳವಡಿಸಿಕೊಳ್ಳಲು ವ್ಯಾಮೋಹ ಅಡ್ಡಬರಬಾರದಿತ್ತು. ನಾನು ಸೋತೆ. ನನ್ನ ಮೌಲ್ಯಗಳೂ ಸೋತು ಮಾತು ಸೂತಕವಾದವು.
ಬದಲಾಯಿಸಲಾಗದು ಯಾರನ್ನೂ ಎಂಬುದೊಂದು ಶಾಶ್ವತ ಸತ್ಯ ಆದರೂ ಪ್ರಲೋಭನೆಗೆ ಒಳಗಾಗಿ ಆ ಪ್ರಯತ್ನವ ಮನಸು ಬಿಡಲಿಲ್ಲ.
ಪ್ರತಿಯೊಬ್ಬರಿಗೂ ಅವರದೇ ಆದ ಆಯ್ಕೆಗಳಿರುತ್ತವೆ ಅವುಗಳನ್ನು ಕಸಿದುಕೊಂಡಾಗ ಮನಸು ವ್ಯಗ್ರವಾಗುವುದು ಸಹಜ. ಆ ವ್ಯಗ್ರಕ್ಕೆ ನನ್ನ ಪ್ರೀತಿ ಬಲಿಯಾಗಬಾರದಿತ್ತು.
ಅದಕ್ಕೆ ಕಾರಣ ನಾನೇ. ನನ್ನ ಸ್ವಾರ್ಥದ ಹಟಮಾರಿ ಧೋರಣೆ.
ಈಗಲೂ ಕಾಲ ಮಿಂಚಿಲ್ಲ ಅವನಿಗಾದ ಗತಿ ನನಗೂ ಬರಬಾದೆಂದರೆ ನಾನು ಬದಲಾಗಬೇಕು.
ಅವನು ಮಾಸಿಕವಾಗಿ ದೂರಾದಂತೆ ನಾನೂ ದೂರಾಗಬಾದೆಂಬ ಅರಿವಿರಬೇಕು.
ವ್ಯಕ್ತಿ ಒಮ್ಮೆ ರೋಸಿ ಹೋದರೆ ಎಲ್ಲವನ್ನು ತಿರಸ್ಕರಿಸುವುದು ಸಹಜ. ಅದು ನನಗೆ ಚನ್ನಾಗಿ ಗೊತ್ತು.
ಆದರೂ ನಾ ವಿಪರೀತ ಹಟ ಮಾಡಿದೆ. ಆ ಹಟಕ್ಕೆ ಸಾತ್ವಿಕ ಮುಖವಾಡ ಬೇರೆ!
ಆದರೆ ಉದ್ದೇಶ ನಿನ್ನ ಸ್ವಾತಂತ್ರ್ಯ ಕಸಿಯುವ ನೀಚತನ.
ಮನುಷ್ಯ ಅತ್ಯಂತ ಕೊಳಕು ಪ್ರಾಣಿ ಎಲ್ಲಾ ತನ್ನ ಮೂಗಿನ ನೇರಕ್ಕೆ ಆಲೋಚಿಸುವ ದುರಾತ್ಮ. ಅದಕ್ಕೆ ನಾನೂ ಹೊರತಾಗಲಿಲ್ಲ. ನಿನ್ನ ಹಿಂಡಿ ಹಿಪ್ಪೆ ಮಾಡಿ ಘಾಸಿ ಮಾಡಿ ವಿನಾಕಾರಣ ಮಾನಸಿಕವಾಗಿ ದೂರ ಮಾಡಿಕೊಂಡೆ.
ನನ್ನ ಮಿತಿ ಅರಿತುಕೊಂಡರೂ ದುಡುಕಿ ನಿನ್ನ ಭಾವನೆಗಳ ಮೇಲೆ ಸವಾರಿ ಮಾಡಿ ಸ್ವಾತಂತ್ರ್ಯ ಹರಣಕೆ ಮುಂದಾಗಿ ನಾನೂ *ಅವನಾದೆ*.
ಅವನಿಗೂ ನನಗೂ ಏನೂ ವ್ಯತ್ಯಾಸವೇ ಇಲ್ಲ. ಮುಖ ಬೇರೆ ಮುಖವಾಡ ಒಂದೇ. ಅದೇ ಸ್ವಾರ್ಥ.
ನಾವು ಕ್ರಮಿಸಬೇಕಾದ ಹಾದಿಯಲಿ ನಮ್ಮದೇ ಆದ ಯೋಜನೆಗಳಿರುತ್ತವೆ. ಯೋಚನೆಗಳಿರುತ್ತವೆ. ಅದರಲಿ ತೃಪ್ತಿಯೂ ಇರುತ್ತದೆ. ಅದನ್ನು ಯಾರಾದರೂ ಕಸಿಯಲು ಪ್ರಯತ್ನಿಸಿದಾಗ ಮನಸು ಮುದುಡಿ, ಕಸಿದುಕೊಂಡವರ ದೂರ ದೂಡುವುದು ಸಹಜ.
ರೋಸಿ ಹೋದ ಜೀವಕೆ ಸುಖವ ಕೊಡುವ ಬದಲು ಮತ್ತದೇ ನೋವ ಕೊಟ್ಟೆ, ಕ್ಷಮಿಸು ಎನಲೂ ಸಂಕೋಚ.
ನನ್ನ ತಪ್ಪು ನನಗೂ ಗೊತ್ತು. ನಿನಗೂ ಗೊತ್ತು.
ಹೀಗಿರುವಾಗ ಹೇಳುವದು ನಿಷ್ಪ್ರಯೋಜಕ.
ಆದರೂ ಹೇಳಿದ್ದೇ ಹೇಳಿ ಶಬ್ದ ಸೂತಕ ಮಾಡಿದೆ.
ನನ್ನ ಕ್ಷಮಿಸು *ಅಲ್ಲಮ* ನೀ ಹೇಳಿದ್ದು ಸರಿಯಾಗಿ ಆಲಿಸದೇ ಶಬ್ದ ಸೂತಕ ಮಾಡಿಬಿಟ್ಟೆ.
*ಮುಂದೆ ಹೀಗಾಗದಂತೆ ಎಚ್ಚರವಹಿಸಲು ನಿಶಬ್ದದ ಮೊರೆ ಹೋಗಿ ನನ್ನ ನಾ ಧೇನಿಸಿ ಬದಲಾಗುತ್ತೇನೆ*
ಅಲ್ಲ ಅಲ್ಲ ಪರಿವರ್ತನೆಯಾಗುತ್ತೇನೆ.
ಏಕಾಂತದ ಹಾದಿ ಹಿಡಿದು ಕರಾವಳಿ ತೀರದ ಬೆಟ್ಟ ಏರಿ ಲೀನವಾಗಿ ಮೌನದ ಮಹಿಮೆ ಅರಿಯುವೆ.
*ಬುದ್ಧ-ಅಲ್ಲಮರ* ಹಾದಿ ಹಿಡಿದು ಪಾಪ ಕಳೆದುಕೊಳ್ಳುವೆ.
ಸದ್ಯ ನನ್ನ ಕ್ಷಮಿಸಿ ಮತ್ತೊಂದು ಅವಕಾಶ ಕೊಡು ಸಾಕು.
*ಸಿದ್ದು ಯಾಪಲಪರವಿ*
No comments:
Post a Comment