ಮರೆಯಲಾರದ ಧಾರವಾಡ ಮಳೆ
ಬಿಸಿಲನಾಡು ಕಾರಟಗಿಯಿಂದ ಮಲೆನಾಡ ಸೆರಗು ಧಾರವಾಡಕೆ ಕಾಲೇಜು ವ್ಯಾಸಂಗಕೆ ಹೋದಾಗ ನನ್ನ ತಲ್ಲಣಿಸಿದ್ದು ಧೋ ಎಂದು ಸುರಿಯುವ ಮಳೆ.
ಕೈಯಲಿ ಕೊಡೆ ಹಿಡಿದು, ರೇನ್ ಕೋಟ್ ಹಾಕಿಕೊಂಡು ಹೊರ ಬೀಳುವ ದೃಶ್ಯ ಬೆಚ್ಚಿ ಬೀಳಿಸಿತು.
ನಮ್ಮಲ್ಲಿ ಆಗೀಗ ಬೀಳುವ ಮಳೆಗೆ ಕೊಡೆಯಾಗಲಿ, ರೇನ್ ಕೋಟ್ ಊಹಿಸಲಸಾಧ್ಯ.
ಮುಂಜಾನೆ ಸುರಿಯುವ ಮಳೆ ಇನ್ನೇನು ನಿಂತೇ ಬಿಡುತ್ತೇ ಅನ್ನೋ ತರಹ ಕಿಟಕಿಯಲಿ ನೋಡುತ್ತ ನಿಂತು ಬಿಡುತ್ತಿದ್ದೆ.
ನಿಲ್ಲೋದೆ ಇಲ್ಲ ಅಂತ ಗೊತ್ತಾದ ಮೇಲೆ ಹೊರಬೀಳುತ್ತಿದ್ದೆ.
ಬಳಸಿ ಗೊತ್ತಿರದ ಕೊಡೆ, ರೇನ್ ಕೋಟ್ ಧರಿಸಿ ನಡೆಯುವುದು ಅನಿವಾರ್ಯ ಎಂದೆನಿಸಿ ಮುಜುಗರ ಎದುರಿಸಿದೆ.
ಕೊಡೆ,ರೇನ್ ಕೋಟ್ ಸಮೇತ ಹೊರಟರೂ ಮಳೆ ಸುರಿಯಲಾರಂಭಿಸಿದ ಕೂಡಲೇ ಅಮಾಯಕನ ಹಾಗೆ ಮರದ ಕೆಳಗೆ ನಿಂತಿದ್ದೆ. ತುಂಟ ಹುಡುಗಿಯರು ಹಳ್ಳಿ ಹೈದನ ಮಳ್ಳುತನಕೆ ಮುಸಿ ಮುಸಿ ನಕ್ಕದ್ದು ಅರ್ಥವಾಗಿರಲಿಲ್ಲ.
ಗೆಳೆಯರು ಚುಡಾಯಿಸಿದ ಮೇಲೆ ಪರಿಸ್ಥಿತಿ ಅರಿತುಕೊಂಡೆ.
ಮರುದಿನ ತುಂಬಾ ಬಿಸಿಲು ಖುಷಿಯಿಂದ ಕೊಡೆ ಹಂಗು ಹರಿದು ಹೊರಬಿದ್ದೆ. ಅರ್ಧ ಹಾದಿ ಹೋಗಿರಲಿಲ್ಲ, ದಿಢೀರ್ ಮೋಡ ಕವಿದು ಮಳೆ ಸುರಿಯಲಾರಂಭಿಸಿತು. ತೊಯ್ದು ತಪ್ಪಡಿಯಾಗಿ ಕ್ಲಾಸ್ ಸೇರಿಕೊಂಡೆ.
‘ ಅಯ್ಯೋ ಸಿದ್ದು ಧಾರವಾಡ ಮಳೆ ನಂಬಬಾರದು ಯಾವಾಗ ಬರುತ್ತೋ, ಹೋಗುತ್ತೋ ಗೊತ್ತಿರಲ್ಲ’ ಅಂದಾಗ ಪೆಚ್ಚಾಗಿ ನಕ್ಕೆ. ಈಗಲೂ ಮಳೆ ಬಂದಾಗ ಆ ಪೆದ್ದುತನ ಕಾಡುತ್ತೆ ಮೊದಲ ಮಳೆಯ ಹಾಗೆ!
ಸಿದ್ದು ಯಾಪಲಪರವಿ
No comments:
Post a Comment