*ಗುರುಗಳಿಗೆ ತಕ್ಕ ಶಿಷ್ಯ ನಾನಾಗಲಿಲ್ಲ*
ನಾನು ಒಳ್ಳೆಯ ಶಿಷ್ಯನಾಗಲಿಲ್ಲ ಎಂಬ ಕೊರಗು ಇದ್ದೇ ಇದೆ,
ಅದಕ್ಕ ಪರಿಹಾರವೂ ಇದೆ.
ಹೂಮನೆಯ ಗರಡಿಯಲ್ಲಿ ಏಕಲವ್ಯನ ಹಾಗೆ ವ್ಯಕ್ತಿತ್ವ ರೂಪಿಸಿಕೊಂಡೆ. ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಪ್ರೀತಿಯನ್ನು ಸಂಪಾದಿಸಿದೆ, ಎಲ್ಲವನ್ನೂ ನಿಷ್ಠೆಯಿಂದ ಆಲಿಸುತ್ತಿದ್ದೆ. ಅವರಿಗೆ ನಾನು ಒಳ್ಳೆಯ ಬರಹಗಾರನಾಗಬೇಕೆಂಬ ಇಚ್ಛೆಯಿತ್ತು.
ಸಂಕೋಚ, ಕೀಳರಿಮೆ ಕಾಡಿದ್ದರಿಂದ, ಬರೆದರೆ ಅವರ ಹಾಗೆ ಬರೆಯಬೇಕೆಂಬ ತುಡಿತ, ಜೊತೆಗೆ ಬೆಟ್ಟದಷ್ಟು ಮೈಗಳ್ಳತನದಿಂದ ನನ್ನೊಳಗಿದ್ದ ಬರಹಗಾರ ಅಡಗಿ ಕುಳಿತಿದ್ದ.
ಪಟ್ಟಣಶೆಟ್ಟರ ಸರಳತನ ಮೈಗೂಡಿಸಿಕೊಳ್ಳಬೇಕಾಗಿತ್ತು. ಸರಳತೆ ಸೂತ್ರ ಹಿಡಿದಿದ್ದರೆ ನನಗೀ ಸಂಕಷ್ಟ ಬರುತ್ತಿರಲಿಲ್ಲ.
ಓದುವ-ಬರೆಯುವ ತಾಕತ್ತನ್ನು ಭಾಷಣ, ರಾಜಕಾರಣದ ಉಸಾಬರಿಯಲಿ ಬಹಳಷ್ಟು ಕಳಕೊಂಡೆ ಅನ್ನೋ ಸತ್ಯ ಐವತ್ತರ ಗಡಿಯಲ್ಲಿ ಅರಳಿದಾಗ ಜಾಗೃತನಾದೆ. ಹಗಲು ರಾತ್ರಿ ಪಟ್ಟು ಹಿಡಿದು ಈಗ ತೋಡಿಕೊಳ್ಳಲಾರಂಭಿಸಿದೆ.
ಅಷ್ಟೊತ್ತಿಗಾಗಲೇ ಒಂದೆರಡು ಕಾಣುವ ಕೈಗಳು ಸರ್ ನನಗೆ ಹತ್ತಿರವಾಗಬಾರದೆಂಬ ಸಂಕಲ್ಪ ಮಾಡಿದಂತಿತ್ತು.
ನಾ ಮೌನಕೆ ಶರಾಣಾಗಿ ಮುಂದೆ ಸಾಗಿದೆ.
ಈ ಬದುಕೇ ಹೀಗೆ ಬೇಕಾದವರಿಗೆ ಹತ್ತಿರವಾಗುವ ಅವಕಾಶ ವಂಚಿತರನ್ನಾಗಿಸುತ್ತೆ. ಅದನ್ನು ಕೂಡಾ ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಅನಿವಾರ್ಯತೆ.
ಹತ್ತಾರು ಬಾರಿ ಹೋಗಲೆತ್ನಿಸಿದಂತೆ ದೂರ ತಳ್ಳಿದಾಗ ಅವೇ *ಕಾಣುವ ಕೈಗಳ* ಅಟ್ಟಹಾಸದ ಕುತಂತ್ರಕೆ ಬಲಿಪಶು.
ಈ ರೀತಿಯ ಗೊತ್ತು ಗುರಿಯಿಲ್ಲದೆ ದ್ವೇಶಿಸುವ *ಇಯಾಗೋ* ಗಳಿಗೆ ಕಾಲ ಉತ್ತರಿಸುವಂತೆ ಬರೆಯುತ್ತ ಬೆಳೆಯುವ ಸಂಕಲ್ಪ ಮಾಡಿ ಧ್ಯಾನಸ್ಥನಾಗಿ ಬರೆಯಲಾರಂಭಿಸಿ ಈಗ ದಡ ಸೇರುತ್ತಲಿದ್ದೇನೆ.
ಈಗ ಗುರುಗಳ ವಿಶ್ವಾಸಗಳಿಸುವ ಗೊಡವೆಗೆ ಹೋಗುವುದಿಲ್ಲ. ಸಣ್ಣ ಗೆರೆಯ ಪಕ್ಕದಲಿ ದೊಡ್ಡ ಗೆರೆ ಎಳೆದು ಅವರಿಗೆ ಕೀರ್ತಿ ತರುತ್ತೇನೆ. ಅದೇ ನಿಜವಾದ ಗುರು ಕಾಣಿಕೆ.
ಆದರೂ ಪ್ರತಿಕ್ಷಣ ಲೇಖನಿ ಹಿಡಿದಾಗ, ಭಾಣಣಕೆ ನಿಂತಾಗ ಆತ್ಮದೊಳು ಗುರುಗಳ ಪ್ರವೇಶಿಸುತ್ತಾರೆ.
*ಹರ ಮುನಿದರೂ ಗುರು ಕಾಯುವ* ಎಂಬ ಮಾತಿನ ಅಪ್ಪಟ ಆರಾಧಕ ನಾ.
ಅವರ *ನೀನಾ*ನನ್ನ ಪಾಲಿನ *ನಾನೀ* ಆಯಿತು.
ಭಾಷೆಯ ಮೇಲಿನ ಹಿಡಿತ ಮುಂದುವರೆದಿದೆ ಈಗ ಅದಕ್ಕೊಂದು ಮೂರ್ತ ರೂಪ ಕೊಡುವ ತಾಕತ್ತು ಗಳಿಸುವ ಹಾದಿಯಲ್ಲಿದ್ದೇನೆ. ನನಗೆ ಆ ಅವಕಾಶವೂ ಇದೆ.
ಎಲ್ಲವನ್ನೂ ಆಳವಾಗಿ ಗ್ರಹಿಸುವ ಯೋಗ್ಯತೆ ಇದ್ದರೂ ಆಳಕ್ಕೆ ಇಳಿಯಲಿಲ್ಲ. ಅದೇ ನನ್ನ ಮಿತಿ. ಆದರೀಗ ಆಳಕ್ಕಿಳಿದು ಇಣುಕುವ ಅನಿವಾರ್ಯತೆ.
ಭಾವುಕನಾಗಿ ಎಲ್ಲರನ್ನೂ ನಂಬಿದ್ದು ನನ್ನ ಮಿತಿ. ಮುಖವಾಡಗಳ ಮರ್ಮ ಅರಿಯದಿರಲು ನನ್ನ ಆಸೆಗಳು ಮತ್ತು ಮಹತ್ವಾಕಾಂಕ್ಷೆ ಕಾರಣ.
ಮೇಲೆ ಬರಬೇಕು ಅನಿಸಿತು, ಮೇಲೆ ಏರಬೇಕೆನಿಸುವುದ ಮರೆತು ಮೈ ಸುಟ್ಟುಕೊಂಡೆ.
ಕೆಲವು ಐಷಾರಾಮಿಗಳು ಒಡ್ಡಿದ ಆಮಿಶಗಳಿಗೆ ಬಲಿಯಾದೆ. ಎಲ್ಲರಂತಾಗಲು ಬಯಸಿದೆ ಅದೇ ನನಗೂ ನನ್ನ ಗುರುಗಳಿಗೂ ಇರುವ ವ್ಯತ್ಯಾಸ.
ಸರ್ ಬೇರೆಯವರು ಅಧಿಕಾರ ಹಿಡಿದಾಗ ನನಗೆ ಸಿಗಲಿಲ್ಲವಲ್ಲ ಎಂದು ಪರಿತಪಿಸಲಿಲ್ಲ. ಗೆಳೆಯರನ್ನು ಖುಷಿಯಿಂದ ಅಭಿನಂದಿಸುತ್ತಿದ್ದರು.
ಪಂಚ ಪಾಂಡವರಲ್ಲಿ ಉಳಿದ ನಾಲ್ಕು ಜನ ಅನೇಕಾನೇಕ ಅವಕಾಶ ಪಡೆದುಕೊಂಡರು, ಸಂಕೋಚ ಸ್ವಭಾವದ ನಿರಪೇಕ್ಷ ಭಾವದಿಂದಾಗಿ ಸರ್ ಅವಕಾಶ ವಂಚಿತರಾದರು.
ಅವರು ಸದಾ ಆಮಿಷಗಳಿಗೆ ಬಲಿಯಾಗಲಾರದ ಸರಳ ಜೀವನಶೈಲಿ ರೂಢಿಸಿಕೊಂಡಿದ್ದರು. ಸಿಗಬೇಕಾದ್ದು ಸಿಗದೇ ಹೋದರೂ ದೂರಲಿಲ್ಲ. ಜೊತೆಗಿದ್ದವರು ಜೋಪಾನ ಮಾಡುವ ನೆಪದ ಬಿಡೆಯಲ್ಲಿ ನೋವು ಕೊಟ್ಟರೂ ನುಂಗಿದರು. ಬೆಕ್ಕು, ನಾಯಿಗಳೊಂದಿಗೆ ನೋವ ಮರೆತರು ಆದರೆ ಮನುಷ್ಯರನ್ನು ಹಳಿಯಲಿಲ್ಲ.
ನಾನು ಇತ್ತೀಚಿಗೆ ಮನೋವಿಜ್ಞಾನ, ವ್ಯಕ್ತಿತ್ವ ಅಧ್ಯಯನದ ವಿಕಸನದ ತರಬೇತಿ ಶುರು ಮಾಡಿದ ಮೇಲೆ ಮಿತಿಗಳು ಅರ್ಥವಾದರೂ ಹೇಳಲಾಗದ ಅಸಹಾಯಕತೆ.
ವಯೋಮಾನಕನುಗುಣವಾಗಿ ನುಂಗುವುದು ಅನಿವಾರ್ಯ. ಗುರುಗಳ ಅನಿವಾರ್ಯತೆ ಅರಿತರೂ ಹೇಳಲಾಗದ ಸ್ಥಿತಿ ತಲುಪುವಷ್ಟು ದೂರಾಗಿದ್ದೇನೆ. ದೈಹಿಕವಾಗಿ.
ದೈಹಿಕವಾಗಿ ದೂರಾದವರು ಮಾನಸಿಕವಾಗಿ ತುಂಬಾ ಹತ್ತಿರ ಇರುತ್ತಾರೆ.
ನಾನವರ ಹೆಸರಿನಿಂದ ಬೇಳೆ ಬೇಯಿಸಿಕೊಂಡು ಬೆಳೆಯುತ್ತೇನೆ ಎಂಬ ಅಪಪ್ರಚಾರಕೆ ಕೊನೆ ಹಾಡಿದೆ. ನನಗೂ ಈಗ ಸ್ವಂತ ಶಕ್ತಿ ಬಂದಿದೆ ಎಂದು ಇಯಾಗೋಗಳಿಗೂ ಗೊತ್ತಾಗಿದೆ.
ನಾನೀಗ ಯಾರನ್ನು ದೂಶಿಸುವುದಿಲ್ಲ. ಈ ಇಯಾಗೋಗಳಿಂದಾಗಿ ಮೇಲೇರುತ್ತೇನೆ. ವಿಳಂಬವಾದರೂ ಚಿಂತೆಯಿಲ್ಲ.
*ಈಗಲೂ ಗುರುಗಳು ಕಲಿಸಿದ ಮಾನವೀಯ ಮೌಲ್ಯಗಳು, ಜೀವನೋತ್ಸಾಹ, ವೈಯಕ್ತಿಕ ಸಂಬಂಧಗಳ ನಿರ್ವಹಣೆ, ಜನಾಕರ್ಶಕ ಸಂವಹನ, ಒಳ್ಳೆಯತನ, ಹೆಣ್ಣುಗಳಲಿ ಅವ್ವನ ಹುಡುಕಾಟ, ಒಲವ ಭಾವುಕ ವರತೆ, ಸೂಕ್ಷ್ಮ ವಿಡಂಬನೆ, ಕಾವ್ಯಾವಲೋಕನ, ನಿಚ್ಚಳ ಅಭಿವ್ಯಕ್ತಿಯಂತಹ ಪಾಸಿಟಿವ್ ಸಂಗತಿಗಳ ಉಳಿಸಿಕೊಂಡಿದ್ದೇನೆ*.
ನಾನೆಲ್ಲಿ ತಪ್ಪಿದ್ದೇನೆ ಎಂಬ ಸತ್ಯ ಗೊತ್ತಾಗಿ ಅದರ ರಿಪೇರಿಯಲ್ಲಿದ್ದೇನೆ. ಆದದ್ದೆಲ್ಲ ಅನುಭವದ ಲೆಕ್ಕದಲ್ಲಿ ಜಮಾಖರ್ಚು ಮಾಡಿದ್ದೇನೆ.
ಹಾಸಿಗೆ ಇದ್ದಷ್ಟು ಕಾಲು ಚಾಚಿದ್ದರೇ…?!
ಈಗ ಪರಾಮರ್ಶನ ಬೇಡ…
ಮುಂದೆ ಸಾಗುವ ಹಾದಿಯಲಿ ಎಚ್ಚರಿದ್ದರೆ ಸಾಕು. ಮುಖವಾಡಗಳ ನಂಬಿ ಅಳುವುದು ಬೇಡ, ಅಯ್ಯೋ ಗೊತ್ತಾಯ್ತು ಬಿಡು ಎಂಬ ನಗುನೂ ಬೇಡ.
ನಕ್ಕು ಸುಮ್ಮನಿರಬೇಕು. *ಒಳಗಣ್ಣು ನಿಚ್ಚಳಾದಾಗ ಹೊರಗಿನ ಸತ್ಯ ದರ್ಶನ ಸಹಜ*.
ಎಂಬತ್ತರ ಆಜುಬಾಜು, ಆದರೂ ಇಂದು ಶುಭೋದಯ ಕರ್ನಾಟಕದಲ್ಲಿ ಪಟ್ಟಣಶೆಟ್ಟಿ ಸರ್ ಮಾತಿನ ವೈಖರಿ ನೋಡಿ ಇಷ್ಟೆಲ್ಲ ನೆನಪಾತು.
*ಕಡೀ ಮಾತು*
‘ಈಗ ನೀವು ಅಂದುಕೊಂಡ ಹಂಗನ ಬರೆಲಿಕ್ಕೆ ಶುರು ಮಾಡೀನಿ ಸರ್.
ನಿರಾಶಾ ಆಗಲಾರದಂಗ ಬರಕೋತನ ಇರ್ತೀನಿ. ಭಾಳ ಚಲೋ ಅನಿಸಿದರ ಮಾತ್ರ ಶಿಷ್ಯ ಅಂತ ಅನ್ರಿ, ಇಲ್ಲಂದ್ರ ಕ್ಷಮಾ ಮಾಡ್ರಿ, ಈ ಕಾಣುವ ಕೈಗಳ ಮಾತಂತು ಸುಳ್ಳ ಮಾಡೇ ಮಾಡ್ತೀನಿ ಸರ್.’
*ಸಿದ್ದು ಯಾಪಲಪರವಿ*
No comments:
Post a Comment