Tuesday, January 14, 2020

ಮಠಗಳ ಮಿತಿ

ಮಠಗಳ ಮಿತಿ ಮತ್ತು ರಾಜಕಾರಣ

ಕಳೆದ ಕೆಲವು ವರ್ಷಗಳಿಂದ ರಾಜ್ಯದ ಗೌರವಾನ್ವಿತ ಮಠಾಧೀಶರು ತಮ್ಮ ಸಂಯಮ ಕಳೆದುಕೊಂಡವರಂತೆ ವರ್ತಿಸುತ್ತಿರುವುದು ಧಾರ್ಮಿಕ ವಿಪರ್ಯಾಸ.

ಮಠಗಳು ಅಧ್ಯಾತ್ಮ ಮತ್ತು ಶ್ರದ್ಧಾ ಕೇಂದ್ರಗಳಾಗಬೇಕು.

ಸಂಸಾರಗಳಿಗೆ,ಲೌಕಿಕರಿಗೆ ಮನಸಿಗೆ ಬೇಸರವಾದಾಗ ಕಾಲ ಕಳೆದು ನೆಮ್ಮದಿ ನೀಡುವ ಶಾಂತಿ ಧಾಮಗಳಾಗಬೇಕು.

ಸಮಾಜದ ಪ್ರತಿಯೊಂದು ಜಾತಿ,ಧರ್ಮದ ಪೀಠಾಧಿಪತಿಗಳು ತಮ್ಮ ಪೀಠಗಳ ಅಧಿಕಾರವನ್ನು ತಮ್ಮ ಸಮಾಜದ ರಾಜಕಾರಣಿಗಳಿಗೆ ಮೀಸಲಿಟ್ಟವರಂತೆ ಅಸೂಕ್ಷ್ಮವಾಗಿ ದಯವಿಟ್ಟು ವರ್ತಿಸಬಾರದು. 

ರಾಜಕೀಯ ವ್ಯವಸ್ಥೆಯಲ್ಲಿ ಪ್ರತಿಯೊಂದು ಪಕ್ಷಗಳು ತಮ್ಮ ಸಿದ್ಧಾಂತ ಮತ್ತು ಆಂತರಿಕ ಪರಸ್ಥಿತಿಗನುಗುಣವಾಗಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತವೆ.

ಪಕ್ಷದ ಶಾಸಕಾಂಗ ಸಭೆ ಮತ್ತು ಪದಾಧಿಕಾರಿಗಳು ತೆಗೆದುಕೊಳ್ಳಬಹುದಾದ ಆಂತರಿಕ ನಿರ್ಣಯಗಳ ಕುರಿತು ಧಾರ್ಮಿಕ ಮಠಗಳು ಬಹಿರಂಗ ಚರ್ಚೆ ಮಾಡುವುದು ಅಕ್ಷಮ್ಯ.

ಯಾವುದೇ ಧರ್ಮ ಮತ್ತು ಸಿದ್ಧಾಂತ ಈ ರೀತಿ ಆದೇಶ ಮಾಡುವ ಅಧಿಕಾರ ನೀಡಿಲ್ಲ ಎಂಬುದನ್ನು ಮಠಾಧೀಶರು ಅರಿತು ಮಾತನಾಡಬೇಕು.

ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಸ್ವಾಮಿಗಳು ಸುಮ್ಮನಿರುವ ಹಾಗೆ ಕಾಣುವುದಿಲ್ಲ ಅವರನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಆಯಾ ಮಠಗಳ ಭಕ್ತರೇ ಹೊರಬೇಕು.

ಇಲ್ಲವೇ ರಾಜಕೀಯ ನಾಯಕರು ಮಠಗಳಿಗೆ ಹೋಗುವುದಕ್ಕೆ ಸ್ವಯಂ ನಿಯಂತ್ರಣ ಹೇರಿಕೊಂಡು ಎದುರಾಗುವ ಮುಜುಗರದಿಂದ ಪಾರಾಗಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶಾಸಕ ಎಲ್ಲ ಧರ್ಮದವರಿಂದ ಚುನಾಯಿತರಾಗಿರುತ್ತಾರೆ. ಗೆದ್ದ ಮೇಲೆ ದಿಢೀರ್ ಎಂದು ಒಂದು ಕೋಮಿನ ಪ್ರತಿನಿಧಿಯಂತೆ ವರ್ತಿಸಿ ಮತದಾರರಿಗೆ ಅವಮಾನ ಮಾಡಬಾರದು.

ಮಠಾಧೀಶರು ಅಷ್ಟೇ, ಅವರು ಸರ್ವ ಧರ್ಮಗಳ ರಕ್ಷಕರಂತೆ ನಡೆದುಕೊಳ್ಳಬೇಕು.

ಮಾಧ್ಯಮಗಳ ಎದುರು ಮತ್ತು ಸಾರ್ವಜನಿಕ ಸಭೆಗಳಲ್ಲಿ "ನಮ್ಮ ಜನಾಂಗದವರಿಗೆ ಸಚಿವ ಸ್ಥಾನ ನೀಡದಿದ್ದರೆ ನೋಡಿ " ಎಂಬರ್ಥದ ಮಾತುಗಳನ್ನು ಆಡಬಾರದು.

ಸಾರ್ವಜನಿಕ ಸಮಾರಂಭದಲ್ಲಿ, ಮಾಧ್ಯಮಗಳ ಎದುರು, ಮತ್ತೆ ಕೆಲವರು ವಿಧಾನ ಸಭೆ ಪ್ರವೇಶಿಸಿ ಈ ರೀತಿ ಹಕ್ಕೊತ್ತಾಯ ಮಾಡುವುದು ಒಂದು ಸಾಮಾಜಿಕ ಮುಜುಗರ ಮತ್ತು ಅವಮಾನ.

ಈ ಕುರಿತು ಮಠಾಧೀಶರೊಂದಿಗೆ ಚರ್ಚೆ ಮಾಡುವುದು ಮುಖ್ಯಮಂತಿಗಳಿಗೆ ಸಾಧ್ಯವಾಗುವುದಿಲ್ಲ ಆದ್ದರಿಂದ ತಮ್ಮ ಪಕ್ಷದ ಶಾಸಕರಿಗೆ ಈ ರೀತಿ ಧಾರ್ಮಿಕ ಒತ್ತಾಯ ಹೇರದಂತೆ ತಾಕೀತು ಮಾಡಲೇಬೇಕು. ಇಲ್ಲದೇ ಹೋದರೆ ಅವರ ವೈಯಕ್ತಿಕ ನೆಮ್ಮದಿ ನಾಶವಾಗಿ, ಸಾಮಾಜಿಕ ಅರಾಜಕತೆಯೂ  ಉಂಟಾಗಬಹುದು.

ಅಲ್ಲದೆ ಸಾಧ್ಯವಾದಷ್ಟು ಮಠಗಳಿಗೆ ಹೋಗುವುದನ್ನು ನಿಲ್ಲಿಸಿ ಜನರ ಮೂಲಭೂತ ಸಮಸ್ಯೆಗಳನ್ನು ಆಲಿಸಲು ಜನರ ಬಳಿ ಹೋಗುವುದು ಒಳಿತು.

ಭಕ್ತರ ಮನಃಶಾಂತಿ ಕಾಪಾಡುವ ಧ್ಯಾನ, ಅಧ್ಯಾತ್ಮ ಮತ್ತು ಯೋಗ ಸೂತ್ರಗಳನ್ನು ಬೋಧನೆ ಮಾಡಬೇಕಾದ ಮಠಗಳು ನೇರ ರಾಜಕೀಯ ಅಖಾಡಕ್ಕೆ ಇಳಿದರೆ ಸಾಮಾನ್ಯ ಭಕ್ತರು ನೆಮ್ಮದಿಗಾಗಿ ಇನ್ನೆಲ್ಲಿಗೆ ಹೋಗಬೇಕು?

ಹಾಗಂತ ಮಠಾಧೀಶರು ರಾಜಕೀಯ ನಾಯಕರುಗಳಿಗೆ ಮಾರ್ಗದರ್ಶನ ಮಾಡಬಾರದು ಎಂದು ಅರ್ಥವಲ್ಲ ಅವರ ಮಾರ್ಗದರ್ಶನ ಒಟ್ಟು ಸಮುದಾಯದ ಅಭಿವೃದ್ಧಿ ಪರ ಇರಬೇಕು.

ಅದೂ ಈ ರೀತಿ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹೇಳದೇ ವೈಯಕ್ತಿಕ ನೆಲೆಯಲ್ಲಿ ಸಂಯಮದಿಂದ ಚರ್ಚೆ ಮಾಡಬೇಕು. 

ಶಾಸಕರು ತಮ್ಮ ಸಮಾಜದ ಸ್ವಾಮಿಗಳ ಪ್ರಭಾವಕ್ಕಿಂತ, ವೈಯಕ್ತಿಕ ಸಾಧನೆ ಮೂಲಕ ಸ್ಥಾನಮಾನ ಪಡೆದುಕೊಂಡು ಪ್ರಜಾಪ್ರಭುತ್ವ ಮತ್ತು ನಾಡಿನ ಮತದಾರರ ಮಾನ ಕಾಪಾಡಲಿ ಎಂದು ಈ ರಾಜ್ಯದ ಸಾಮಾನ್ಯ ಪ್ರಜೆಯಾಗಿ ನಿವೇದಿಸುವೆ.

#ಸಿದ್ದು_ಯಾಪಲಪರವಿ.

No comments:

Post a Comment