Monday, January 27, 2020

ತಪ್ಪು ಬಿಗಿದಪ್ಪು

ತಪ್ಪು ಒಪ್ಪು ಬಿಗಿದಪ್ಪು 

ನೀನು ಹೇಳದೇ ಕೇಳದೇ ಬರಲಿಲ್ಲ

ಕರೆದಾಗ ಬಂದೆನೆಂಬುದೊಂದು ಮಿಥ್ 

ಮಿಥ್ಯವೂ ಅಲ್ಲ‌ ಸತ್ಯದ ಒಳಗಡಗಿರುವ 

ಮಿಥ್ಯ 

ಬಯಲ ಆಲಯದೊಳಗೆ ಸಾರಿ ಸಾರಿ 

ಹೇಳಲಾಗದು ನೀ ನನ್ನವಳು ನಾ

ನಿನ್ನವನೆಂಬ ನಿಗೂಢ ನಿಧಿ ನೀ 

ಹೇಳದಿದ್ದರೂ ಭ್ರಾಂತಿಯಲಿ ಅಗೆದು 

ಹುಡುಕಿ ತಡಬಡಿಸಿ ಕೆಬರಾಡುವ 

ಮನಸುಗಳ ಕಳವಳಕೆ ನಾವು 

ಸಿಗದ ನೆಲದ ಮರೆಯ ನಿಧಾನ 

ಹೊಣೆ ಅಲ್ಲ ಅವಾಸ್ತವದ ಸತ್ಯಕೆ 

ಯಾರೂ ಆದರೂ ಹೊಣೆ ನಾವು 

ನಮ್ಮ ನಮ್ಮ ಮೂಗಿನ ನೇರದ 

ಅನುಸಂಧಾನದ ಗುಂಗಲಿ ಸತ್ಯ 

ಕೇಳಲು ಇಲ್ಲ ಈಗ ಪುರುಸೊತ್ತು 

ನಡೆದದ್ದೇ ದಾರಿ ಹುಡುಕಿದ್ದೇ ಮಾರ್ಗ 

ಕಾಯುವವ ಕೊಲ್ಲಲಾರನೆಂಬ ನಂಬಿಗೆ

ಅದೇ ಬದುಕ ಬಾಳಾಗಿಸಿದೆ ತಲೆ ದಿಂಬಿಗೆ 

ದೇಹ ದೇವಾಲಯವಾದಾಗ ಮನಸು 

ದೇವತೆ ಮಿಲನ ಸಡಗರದಲಿ 

ಹಗಲು ರಾತ್ರಿ ಒಂದೇ ಬಿಗಿದ ಬಂಧನಕೆ 

ತಪ್ಪು ಯಾವುದು ಯಾರದು 

ಮನದ ಮುಂದಣ ಆಸೆ ಹೌದು

ಬೇಕಿತ್ತು ಬೇಕಾಗಿದೆ ಬೇಕಾಗುತ್ತೆ 

ಮುಂದೆಯೂ ಗೊತ್ತಿದ್ದು ಮಾಡಿದ 

ತಪ್ಪಿಗೆ ದೇವನೊಪ್ಪಿಗೆ ಮಾಡಿದ 

ತಪ್ಪಲೂ ತಪ್ಪದ ಸಡಗರದ ಅನು

ಸಂಧಾನದ ಸವಿಗಾನ 

ಮೈಮನಗಳ ಮಿಲನದಾಸೆಗೆ ಬರುವ

ಸಾವಿರದ ನೋವಲು ಮಧುರ ಸವಿ

ಜೇನು ಗೊತ್ತಿದ್ದೂ ಮಾಡುವ ತಪ್ಪಲೂ

ಜೇನು ತುಪ್ಪ 

ನಮಗೆ ನಾವೇ ಹೊಣೆಗಾರರು 

ನಮ್ಮ ಸಂಭ್ರಮದ ಸಂಕಟಕೆ 

ತಪ್ಪುಗಳ ಸರಮಾಲೆಯಲಿ ಸುಖದ

ಪರಿಮಳದ ಘಮಲು ಸವಿಯಲು 

ಯಾರಪ್ಪಣೆ ಬೇಡ ಹೊರಡೋಣ 

ನಡೆ ದೂರ ಬಹು ದೂರ...

No comments:

Post a Comment