Saturday, August 25, 2018

ಅಕ್ಷರಶಕ್ತಿ

*ಅಕ್ಷರ ಶಕ್ತಿ ಮತ್ತು ಜಾಲತಾಣಗಳು*

ಸ್ಟಾರ್ ಗಿರಿ ಯಾವ ರೂಪದಲ್ಲಾದರೂ ದಕ್ಕಬಹುದು ಆದರೆ ಸಹನೆಯಿಂದ ಕಾಯಬೇಕು.

ಮೂರು ದಶಕಗಳ ಅಕ್ಷರ ವ್ಯಾಮೋಹ ನನಗೆ ಅಷ್ಟೇನು ಖ್ಯಾತಿ ತಂದುಕೊಡಲಿಲ್ಲ ಎಂಬ ಸಣ್ಣ ಅಳುಕಿತ್ತು.

ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಓದುಗರಿಗೆ ತಲುಪಲು ನೂರು ದಾರಿಗಳು. ಹಾಗೆ ಬ್ಲಾಗ್ ಮೂಲಕ ಓದುಗರಿಗೆ ತಲುಪಿ ಈಗ ಎಲ್ಲಾ ದಕ್ಕುತ್ತಲಿದೆ.

ಸಾಹಿತ್ಯೇತರ ವಿದ್ಯಾರ್ಥಿಗಳು ಈಗ ಹೆಚ್ಚು ಬರೆಯಲಾರಂಭಿಸಿದ್ದಾರೆ. ಅದರಲ್ಲೂ ಇಂಜನಿಯರಿಂಗ್ ಹಿನ್ನೆಲೆ ಇರುವ ಹೊಸ ತಲೆಮಾರಿನ ಯುವಕರು ಕನ್ನಡದ ಅಸ್ಮಿತೆಯ ವ್ಯಾಮೋಹ ಬೆಳೆಸಿಕೊಂಡು ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಿರುವುದು ಅಭಿನಂದನೀಯ.

ಹೊಸ ಬಗೆಯ ರೂಪಕಗಳು ಕವಿತೆ, ಕತೆಗಳಲಿ ಹೊರ ಹೊಮ್ಮುತಲಿವೆ.

ಹತ್ತಾರು ಹೊಸ ಬಗೆಯ ತಂಡ, ಹೊಸ ವಿನ್ಯಾಸದ ಅ್ಯಾಪ್ ಗಳು ಬರತೊಡಗಿ ಓದುಗರಿಗೆ ಬೇಗ ತಲುಪಿಸುವ ಕ್ಷಿಪ್ರತೆ.

ಈಗ ವೇಗವಾಗಿ ಬೆಳೆಯುತ್ತಿರುವ yourquote app ಹೆಚ್ಚು ಬರಹಗಾರರನ್ನು ಪ್ರೇರೇಪಿಸುತ್ತದೆ.

ಈ ತರಹದ ತಾಣಗಳು, ಇತ್ತೀಚಿನ ನನ್ನ ಶುಭೋದಯ ಕರ್ನಾಟಕದ ಸುದೀರ್ಘ ಸಂದರ್ಶನ, ಮತ್ತದರ YouTube reach ಯುವಕರ ಗಮನ ಸೆಳೆದಿದೆ.

ಅನೇಕ ಹೊಸಬರು ಪರಿಚಯವಾಗಿ ಅಷ್ಟೇ ಆತ್ಮೀಯರೂ ಅಗಿರುವುದು ಈ ಜಾಲತಾಣಗಳ ಮಹಿಮೆ.

ಹೀಗೆ ಪರಿಚಯವಾದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಜ್ಯೋತಿ ಪಾಟೀಲ, ಅಭಿಶೇಕ್ ಅಲ್ಲಿನ Authorcraft ಪದಾಧಿಕಾರಿಗಳು. ಅವರಿಗೆ ನನ್ನ ಸಂದರ್ಶನ ಆಯೋಜಿಸಿ, ಬರೆಯುವ ಯುವಕರಿಗೆ ಮಾರ್ಗದರ್ಶನ ಸಿಗಲೆಂಬ ಉದ್ದೇಶದಿಂದ ಅಪರೂಪದ ವಿಡಿಯೋ ಶೂಟಿಂಗ್ ನೊಂದಿಗಿನ ಸಂದರ್ಶನ, ಮಾತುಕತೆ, ನನ್ನ ಅನುಭವ ಹೇಳುವ ಸಂದರ್ಭ ಒದಗಿಸಿದ್ದು ಇವೇ ತಾಣಗಳು.

ಹುಬ್ಬಳ್ಳಿ ಮೂಲದ ಜ್ಯೋತಿ, ಕಾರವಾರ ಮೂಲದ ಅಭಿಶೇಕ್ ಸಂಪರ್ಕಿಸಿ ಕಾರ್ಯಕ್ರಮ ನಡೆಸಿಯೇ ಬಿಟ್ಟರು.

ಇಂದಿನ ಹೊಸ ಟ್ರೆಂಡ್ ಕುರಿತು ಮಾಹಿತಿ ಒದಗಿಸಿ, ನನ್ನ ಸುದೀರ್ಘ YouTube ಸಂದರ್ಶನವನ್ನು ವಿಂಗಡಿಸಿ ಎಡಿಟ್ ಮಾಡಿದ ಆಸಕ್ತಿ ಈ‌ ಅಭಿಶೇಕ್ ಹಾಗೂ ಅವನ ತಂಡದ್ದು. ಎರಡು ದಿನ ಬಿಟ್ಟು ಬಿಡದೇ ನನ್ನೊಂದಿಗಿದ್ದು yourquote ಮೂಲಕ ಬರೆಯುವ ವಿಧಾನ ಹೇಳಿಕೊಟ್ಟರು.

‌ಎಷ್ಟಾದರೂ ಕಲಿಯುವುದು ಮುಗಿಯುವುದೇ ಇಲ್ಲ. ಪ್ರತಿನಿತ್ಯ ತಂತ್ರಜ್ಞಾನದ ಬೆಳವಣಿಗೆ. ಹೊಸ ಹೊಸ ಹೊಳಹು ಹಾದಿಗಳು.

*ಜ್ಯೋತಿಯ ಜೊತೆ ಮಾತುಕತೆ* ಪರಿಕಲ್ಪನೆ ಚಂದವಿತ್ತು. ಗೆಳೆಯರೆಲ್ಲ ಕೂಡಿಕೊಂಡು ಕ್ಯಾಮರಾ ಹಿಡಿದು ತುಂಬ ಪ್ರೊಫೆಶನಲ್ ಆಗಿ ಶೂಟ್ ಮಾಡಿದರು. ಕಾಲೇಜಿನ ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು ಅಷ್ಟೇ ವಿಶೇಷ.

ಎರಡು ದಿನ ನನ್ನೊಂದಿಗೆ ಕಾಲ ಕಳೆದು ನೆನಪಿಡುವ, ವಿಡಿಯೋ ಮೂಲಕ ದಾಖಲಾಗುವ ಮಾತುಕತೆ ಅವಿಸ್ಮರಣೀಯ.

ಬದುಕಿನ ಪಯಣವೇ ಹೀಗೆ. ಹೊಸ ವಿನ್ಯಾಸ, ಹೊಸ ಆವಿಷ್ಕಾರ, ಹೊಸ ಜನ, ಹೊಸ ಅನುಭವಗಳ ದಕ್ಕಿಸಿಕೊಳ್ಳುತ್ತ ಮನಸಿಗೆ ಮುಪ್ಪು ತಂದುಕೊಳ್ಳಬಾರದು‌.

ಸಿಕ್ಕವರ ಬಾಚಿ ತಬ್ಬಿ, ದೂರ ದೂಡಿದವರ ಮರೆತು ಹೋಗುತಲಿರುವುದೇ ಜೀವನ.

ಜೀವನ ಎಂದೂ ಮುಗಿಯದ ಪಯಣ. ಆದರೊಮ್ಮೆ ರಪ್ ಅಂತ ನಮ್ಮನ್ನು ಮುಗಿಸಿಬಿಡುತ್ತದೆ. ನಾವು ಹಾಗೆ ಹೋಗುವ ಅರಿವು ಇಟ್ಟುಕೊಂಡೇ ಉಳಿಯುವುದ ಬಿಟ್ಟು ಹೋಗಬೇಕು…

ಅಕ್ಷರದ ಮಹಿಮೆ ಅನೇಕರನ್ನು ಇನ್ನೂ ಜೀವಂತವಾಗಿಟ್ಟಿದೆ.

 ಸಿದ್ದು ಯಾಪಲಪರವಿ

No comments:

Post a Comment