Wednesday, August 29, 2018

ಅವನೇ ಸಾಕ್ಷಿ ಒಲವ ಮದುವೆಗೆ

ಅವನೇ  ಸಾಕ್ಷಿ ಒಲವ ಮದುವೆಗೆ

ವಾದ್ಯದ ಸದ್ದುಗದ್ದಲವಿಲ್ಲ ಬೀಗರ
ಬಿಂಕವಿಲ್ಲ  ಮಂಟಪಕೆ ಸಿಂಗಾರವಿಲ್ಲ

ಒನಪು ಒಯ್ಯಾರಕೆ ನಾರಿಯರಿಲ್ಲ
ಪಿತಾಂಬರ ಸೀರೆಗಳಿಲ್ಲ

ಸಿಹಿ ಊಟದ ಸಡಗರವಿಲ್ಲ
ಆಡಂಬರದ ಅಹಮಿಕೆಯಿಲ್ಲ

ತಾಳಿ ಕಾಲುಂಗುರ ಬಳೆಗಳ
ಗೊಡೆವೆ ಬೇಕಿಲ್ಲ

ಆದರೂ ಇದು ವೈಭವ ಪೂರ್ಣ ಮಹಾಸಂಭ್ರಮದ
ಮಹಾ ಮಿಲನಮಹೋತ್ಸವ

ಭಾವನೆಗಳ ಮೆರವಣಿಗೆಯಲಿ
ನಿಶಬ್ದ ಶಬ್ದಗಳದೇ ಪೌರೋಹಿತ್ಯ

ಒಲವ ಪಿಸುಮಾತುಗಳೇ ಬೀಗರು
ಪಂಚಮಹಾಭೂತಗಳ ದಿವ್ಯಾಲಂಕಾರ

ಸೂರ್ಯನ ಬೆಳಕು ಚಂದ್ರನ ತಂಪು ಕೋಗಿಲೆಯ ಇಂಪು

ಹೂವಿನ ಕಂಪು ಹಕ್ಕಿಗಳ ಚಿಲಿಪಿಲಿಗಳ
ತಳಿರು ತೋರಣದ ಸಿಂಗಾರದಿ
ಕಾವ್ಯ ದಿಬ್ಬಣ ಸಾಗಿದೆ

ಏಕಾಂತದ ಮದುವೆಗೆ
ಅವನೊಬ್ಬನೇ ಸಾಕ್ಷಿ

ಬಿಸಿ ಉಸಿರ ತಲ್ಲಣಗಳ
ಸಿಹಿ ಊಟಕೆ ಬಿಸಿಯಪ್ಪುಗೆಯ
ಬೆಲ್ಲ-ಸಕ್ಕರೆ

ಖಾಲಿಯಾಗದ ಅಕ್ಷಯ ಪಾತ್ರೆಯ
ಅಪರಿಮಿತ ಮೃಷ್ಟಾನ್ನ

ಹಿತ ಸ್ಪರ್ಷದ ದಿವ್ಯ ಸ್ನಾನದ
ಸುರಿಗೆ ನೀರ ಸುರಿದು
ಮೈಮನಗಳ ಕೊಳೆ ಕಳೆಯುತ

ಮುತ್ತುಗಳಲಿ ಸಿಂಗರಿಸಿ
ತೋಳಬಂಧಿಯ ತೊಡಿಸಿ
ಹೂಗಳ ಮುಡಿಸಿ
ಮನದ ಮದುವೆಯ
ಮೌನ ಮೆರವಣಿಗೆಯಲಿ
ಪ್ರೇಮದಕ್ಷತೆಯ ಹೂಮಳೆ

ಎಚ್ಚರದ ನಡೆಯ ಕಾಲುಂಗುರ
ಮತ್ತೆ ಮತ್ತೆ ಮತ್ತೆ ಗಟ್ಟಿಯಾಗಿ
ಬಿಗಿದ ಬಂಧನದ ತಾಳ್ಮೆಯ ತಾಳಿ
ಸಾಕು ಕೊರಳ ಸಿರಿಗೆ

ವಸ್ತು ಒಡವೆ ಆಭರಣ ಕಳಚೀತು
ಮೈಗೆ ಪೂಸಿದ ಅತ್ತರು ಆರೀತು

ತುಟಿಗೆ ಬಳೆದ ರಂಗು ಮರೆಯಾದೀತು
ಎಂಬ  ಗಲಿಬಿಲಿಯಿಲ್ಲದ

ನಿರಾಡಂಬರ ಚಲುವೆಗೆ ಒಲವ ಸೀರೆ
ಉಡಿಸಿ
ಭರವಸೆಯ ಸಪ್ತಪದಿಯಲಿ

ಅನುಮಾನ ಅವಮಾನ ಅಹಮಿಕೆ
ಅಸತ್ಯ ಸಿರಿಗರ ಬಿಗುಮಾನ
ಬಿಂಕಗಳ ತುಳಿದು

ಮದುವೆ ಶಾಸ್ತ್ರ ಮುಗಿಸಿ
ಒಲವ ಬೆಳಕ ಹೊತ್ತಿಸಿ

ಪುಟ್ಟ ಮನೆಯಲಿ ಪರಮ ಸುಖದ
ತುತ್ತ ತುದಿಗೇರುವ ಸವಿ

ಸಂಭ್ರಮದ ಮನದ ಮದುವೆಗೆ
ಅವನೊಬ್ಬನೇ ಸಾಕು

ಬಾಳ ರಥ ಎಳೆವ
ಜೀವಯಾತ್ರೆಯ ಜಾತ್ರೆಗೆ.

---ಸಿದ್ದು ಯಾಪಲಪರವಿ

No comments:

Post a Comment