*ಒಮ್ಮೆ ಮಗುವಾಗುವಾಸೆ*
ವಯೋಮಾನಕೆ ತಕ್ಕಂತೆ ಗಂಭೀರವಾಗಿ ಇರಬೇಕು ನಿಜ. ಓದು-ಬರಹ-ವಾದ-ವಿವಾದ ಹೀಗೆ ಎಲ್ಲ ಕೆಲಸಗಳಲಿ ಅದೇ ಸೀರಿಯಸ್ ನೆಸ್.
ಆದರೆ ಕೆಲವೊಮ್ಮೆ ‘ಅಯ್ಯೋ ಇದೆಲ್ಲ ಸಾಕಪ್ಪ ಸಾಕು’ ಅನಿಸುತ್ತೆ.
ಮುಗ್ಧವಾಗಿ ಜಗದ ಪರಿವಿಲ್ಲದೆ ಆಟವಾಡುವ ಮಕ್ಕಳನು ಕಂಡಾಗ ಆನಂದ.
ಹರೆಯದ ಹುಡುಗರು ಅನಗತ್ಯ ಹಳಸಲು ಜೋಕು ಮಾಡುತ್ತ ಕಾಲೇಜಿನಲ್ಲಿ ಕಾಲ ಹರಣ ಮಾಡುವುದು ಕಂಡಾಗ ಸಿಟ್ಟು ಬರುವುದು ಸಹಜ.
ಸದಾ ಗಂಭೀರವಾಗಿ ಇರುವುದು ಬೇರೇಯವರಿಗಷ್ಟೇ ಅಲ್ಲ ಕೆಲವೊಮ್ಮೆ ನಮಗೂ ಬೇಸರವಾಗಿಬಿಡುತ್ತೆ.
ಮನುಷ್ಯ ನವರಸಗಳಲಿ ಬದುಕಬೇಕು. ಈ ಒತ್ತಡಗಳಲಿ ಮಕ್ಕಳು ನಮ್ಮ ಉತ್ಸಾಹ ಇಮ್ಮಡಿಸಬಲ್ಲರು.
ನನಗೂ ತುಂಬ ಬೇಸರವಾದಾಗ ಮಗುವಾಗಿ ಚೀರಬೇಕೆನಿಸುತ್ತದೆ. ಅವ್ವನ ಮಡಿಲು ಹುಡುಕಿಕೊಂಡು ಹೋಗಿ ಮಲಗಬೇಕೆನಿಸುತ್ತೆ.
ಆದರೆ ಈಗ ಮಡಿಲುಗಳು ಮಾಯವಾದ ವಿಷಾದ. ಬರೀ ನೆನಪು.
ಮೊನ್ನೆ ತಮ್ಮನ ಮಗಳು ಚೈತ್ರಾ ಹಾಡುವಾಗ ಕಣ್ಮುಚ್ಚಿ ಅವಳ ತೊಡೆಯ ಮೇಲೆ ಮಲಗಿ ಮಗುವಾಗಿ ಆಲಿಸಿ ಸಂಭ್ರಮಿಸಿದೆ.
‘ಅದೇನು ಕೋತಿ ತರ ಹಟ ಮಾಡ್ತೀ’ ಅಂದಾಗ ಹುಸಿಕೋಪದಿ ಸುಮ್ಮನಾದೆ. ಮಗಳ ಜೊತೆ ಸಣ್ಣ ಹುಡುಗನ ಹಾಗೆ ಸತಾಯಿಸಿ ತಂಟೆ ಮಾಡುತ್ತೇನೆ… ಆಗಾಗ.
ಇತ್ತೀಚಿಗೆ ನನ್ನಿಚ್ಛೆಯ ಹಾಡು ಕೇಳುವಾಗಲೂ ಮಗುವಾಗಿ ಭಾವ ಲೋಕದಲಿ ವಿಹರಿಸುವೆ.
ಮಗಳು ಅವ್ವ ಆಗುತ್ತಾಳೆ, ಸಂಗಾತಿ ಗೆಳತಿಯಾಗುತ್ತಾಳೆ. ಗೆಳತಿ ಸಂಗಾತಿಯಾಗಬೇಕು.
ದೇಹಕ್ಕೆ ವಯಸ್ಸಿನ ಹಂಗಿದೆ ಮನಸಿಗಲ್ಲ ಎಂಬುದನ್ನು ನಾವು ವಯಸ್ಸಾದಂತೆ ಅರಿಯಬೇಕು.
ಸಾರ್ವಜನಿಕವಾಗಿ ಗಂಭೀರವಾಗಿ ಇರುವುದು ಅನಿವಾರ್ಯ ಇರಬೇಕು ಅಷ್ಟೇ! ಖಾಸಗಿಯಾಗಿ ಅಲ್ಲ.
ಬೇಸರವಾದಾಗ ನಾನು ಒಬ್ಬನೇ ಕಳೆದುಹೋಗಿಬಿಡುತ್ತೇನೆ. ಏನೂ ಬೇಡವೆನಿಸುತ್ತೆ.
ಖಾಸಗಿ ಬದುಕಿಗೆ ಜಾಗ ಕೊಟ್ಟು ಮಕ್ಕಳೊಂದಿಗೆ ಮಕ್ಕಳಾದಾಗ ಬದುಕಿಗೊಂದು ಬೆಲೆ.
*ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ….
ಭ್ರಹ್ಮಾನುಭವಿಯಾಗು ಮಂಕುತಿಮ್ಮ* ಎಂದು ಡಿವಿಜಿ ಅವರು ಅದಕ್ಕೆ ಹೇಳಿದ್ದಾರೆ.
ಕೆಲವರು ನಕ್ಕರೆ ಘನತೆ ಹಾಳು ಎಂಬಂತೆ ನಡೆದುಕೊಳ್ಳುತ್ತಾರೆ. ಹುದ್ದೆ, ಸ್ಥಾನಮಾನಗಳಿಗೆ ಅವಮಾನ ಅಂದುಕೊಳ್ಳುವ ಸಣ್ಣತನ.
ಪಾಠ ಮಾಡುವಾಗ, ತರಬೇತಿ ಸಮಯದಲ್ಲಿ ಇದೇ *ಸೆನ್ಸ್ ಆಫ್ ಹ್ಯುಮರ್* ಖುಷಿಕೊಡುತ್ತೆ. ನನಗೂ, ಕೇಳುಗರಿಗೂ.
ಲಾಂಗ್ ಡ್ರೈವ್, ಕುಡಿತ, ಕುಣಿತ, ಹಾಡು, ಗೆಳೆಯರು ಇನ್ನೂ ಏನೇನೋ ನಮ್ಮನು ಮಗುವಾಗಿಸಬಲ್ಲದು.
ಮೊನ್ನೆ ಮಕ್ಕಳು ಸ್ಲೋ ಮೋಶನ್ ಶೂಟ್ ಮಾಡಿ ಹಾರು ಅಂದಾಗ ಹಾರಿಬಿಟ್ಟೆ ಮಗುವಾಗಿ…
ಸಿದ್ದು ಯಾಪಲಪರವಿ.
No comments:
Post a Comment