*ಅಕ್ಷರದ ಹರವು ಮತ್ತು ಮಗಳ ಪ್ರತಿಕ್ರಿಯೆ*
ಇತ್ತೀಚೆಗೆ ಬರೆದ ಅಸಂಗತ ಪುಸ್ತಕ ಓದಿ ಪ್ರಭಾವಿತಳಾದ ಮಗಳು ಮುನ್ನುಡಿ ಎತ್ತಿದ ಪ್ರಶ್ನೆಗಳಿಗೆ ದಂಗಾಗಿ ಹೋದೆ.
ಅಕ್ಷರದ ಮಹಿಮೆಯೇ ಹಾಗೆ.
ಹೇಳತೀರದ ಅನುಸಂಧಾನ.
ನನ್ನ ಕೆಲವು ಲೇಖನಗಳ ಭಾಷೆ ಕುರಿತು ನಿರೀಕ್ಷಿತ ಅನುಮಾನಗಳ ಕುರಿತು ತುಂಬ ಮಾತನಾಡಿದಳು.
*ದೇಹದಾಟದ ಗಮ್ಮತ್ತು ಹಾಗೂ ಲೈಂಗಿಕತೆಯ ಅಪಾಯಗಳು* ಲೇಖನಗಳ ಭಾಷೆಯ ಬಗೆ ಅವಳಿಗೂ ಸೋಜಿಗ ಆದರೆ ಕೇಳುವ ಅಧಿಕಾರ ಮತ್ತು ಸ್ವಾತಂತ್ರ್ಯ ಕೊಟ್ಟಿದ್ದರಿಂದ ಕೇಳಿದಳು. ಆ ಕೇಳುವಿಕೆ ನನಗೆ ಸಮಾಧಾನ ಕೂಡ ತಂದಿತು.
ಈ ಕಾಲಘಟ್ಟದಲ್ಲಿ ಬೋಲ್ಡ್ ಆಗಿ ಬರೆಯುವ ಅಗತ್ಯ ಅವಳಿಗೆ ಬೆರಗುಂಟು ಮಾಡಿದೆ.
ದೇಹದಾಟದ ಗಮ್ಮತ್ತು ಓದಿದ ಅನೇಕರು ಇದೇ ಪ್ರಶ್ನೆ ಕೇಳಿದ್ದರು ‘ ನಮ್ಮ ಮಕ್ಕಳು ಇದನ್ನು ಓದಿದರೆ ಹೇಗೆ ?’
ಈಗಲೂ ಅದೇ ಉತ್ತರ ‘ಓದಲಿ ಏನೀಗ’.
ಅವರ ಅರಿವಿಗೆ ಎಲ್ಲವೂ ಇರುತ್ತದೆ ಆದರೆ ಗೊತ್ತಿರುವ ವ್ಯಕ್ತಿಗಳು ಅದರಲ್ಲೂ ಅಪ್ಪ ಬರೆದಾಗ ಸಂಕೋಚವಾಗುವುದು ಸಹಜ.
ಆ ಸಂಕೋಚವನ್ನೇ ಅವಳು ಕೊಂಚ ನಿಸ್ಸಂಕೋಚವಾಗಿ ಕೇಳಿದಳು.
‘ಈಗ ಎಲ್ಲ ಸಂಗತಿಗಳು ವೆಬ್ ತಾಣಗಳಲಿ ಸಿಗುವಾಗ ಬೇಕಾದುದ ಪಡೆಯುವ ಅವಕಾಶ ಇರುವಾಗ ಪುಸ್ತಕ ರೂಪದಲ್ಲಿ ಈ ರೀತಿಯ ಬರೆಯುವ ಅಗತ್ಯ ಏನು? ‘ ಎಂಬ ಅವಳ ಪ್ರಶ್ನೆಗೆ ಸುದೀರ್ಘ ಉತ್ತರ ನೀಡಬೇಕಾಯಿತು.
‘ಅದೆಲ್ಲ ನಿನಗೆ ಅರ್ಥವಾಗಲ್ಲ’ ಎಂದು ಜಾರಿಕೊಳ್ಳುವುದು ಅಸಂಗತವೆನಿಸಿತು.
ಇಂದಿನ ಯುವಕರಿಗೆ ಜಾಲತಾಣಗಳಲಿ ಏನೆಲ್ಲ ಸಿಕ್ಕರೂ ಪುಸ್ತಕ ರೂಪದಲ್ಲಿ ದೊರಕುವ ಕುತೂಹಲ ಸಂಗತಿಗಳನ್ನು ಆಸ್ಥೆಯಿಂದ ಓದುತ್ತಾರೆ ಎಂಬುದನ್ನು ಒಪ್ಪಿಕೊಂಡಳು.
ಹಿರಿಯರು, ಅನೇಕ ಸಾಧು-ಸಂತರಿಗೆ ಈ ಪುಸ್ತಕ ಓದಿದಾಗ ಏನನ್ನಿಸಬಹುದೆಂಬ ಆಲೋಚನೆ ಅವಳ ತಲೆ ಹೊಕ್ಕಿದೆ.ಆದ್ದರಿಂದ ಗೊತ್ತಿರುವ ವಿಷಯಗಳನ್ನು ಆರೋಗ್ಯಪೂರ್ಣವಾಗಿ ಚರ್ಚಿಸುವ ಮನಸ್ಥಿತಿ ಬೆಳೆಸಿಕೊಳ್ಳುವ ಅಗತ್ಯ ವಿವರಿಸಿದೆ.
ಅಲ್ಲಿನ ಲವ್ ಕಾಲ ಬರಹಗಳ ಸ್ವರೂಪ ಇನ್ನೂ ಹೇಗಿದ್ದರೆ ಛಂದ ಎಂಬುದನ್ನು ಹೇಳಿದಾಗ ಖುಷಿಯಾಯಿತು.
ಇಡೀ ಅಸಂಗತ ಬರಹಗಳ ಸಂಕಲನ ಅವಳಿಗೆ ಬೆರಗುಂಟು ಮಾಡಿದ್ದು ಸಹಜ.
ನಾನು ಅಷ್ಟೇ ಸಮಾಧಾನದಿಂದ ಉತ್ತರಿಸಿದೆ. ಅದು ನನ್ನ ಉತ್ತರದಾಯಿತ್ವವೂ ಹೌದು!
ಓದುಗರಿಗೆ ಹುಟ್ಟುವ ಎಲ್ಲ ಪ್ರಶ್ನೆಗಳಿಗೆ ಬರಹಗಾರ ಜವಾಬ್ದಾರನಲ್ಲವಾದರೂ ಕೆಲವು ಅನುಮಾನಗಳಿಗೆ ಉತ್ತರಿಸಲೇಬೇಕು.
ಒಬ್ಬ ಬರಹಗಾರ ಯಾಕೆ ಓದುಗರಿಗೆ ಇಷ್ಟವಾಗುತ್ತಾನೆ ಎಂಬುದಕ್ಕೆ ಅವಳ ನೆಲೆಯಲ್ಲಿ ವಿವರಿಸಿದಳು.
ಸೆಲೆಬ್ರಿಟಿ ಸ್ಟೇಟಸ್ ಮಾಧ್ಯಮಗಳಿಂದ ಬೇಗ ಲಭ್ಯ ಎಂಬ ಅವಳ ವಾದ ಅರ್ಧಸತ್ಯವೂ ಹೌದು.
ಆದರೆ ಶ್ರೇಷ್ಟ ಬರಹಗಾರನೂ ಸೆಲೆಬ್ರಿಟಿ ಆಗಬಲ್ಲ ಎಂಬ ಸತ್ಯವನ್ನು ಹೇಳಿದೆ.
‘ಅಯ್ಯೋ ನಾವು ಬರೆದದ್ದನ್ನು ಯಾರು ಓದುತ್ತಾರೆ’ ಎಂಬ ಅಸಡ್ಡೆ, ತಿರಸ್ಕಾರ ಅಪಾಯಕಾರಿ. ಬೇಕಾದವರು ಓದುವಂತೆ, ಬೇಡಾದವರೂ ಓದುತ್ತಾರೆ ಅಲ್ಲಿನ ಹುಳುಕು ಹಿಡಿಯಲು.
ಆ ಎಚ್ಚರ ಪ್ರಜ್ಞೆ ಇಟ್ಟುಕೊಂಡೇ ಬರೆಯುವ ಹೊಣೆಗಾರಿಕೆ ಲೇಖಕನದು.
ಏನೋ ಗೀಚಿ ಒಗೆಯೋದು ಅವಿವೇಕದ ಪರಮಾವಧಿ.
ಇಂದು ಮಗಳು, ನಾಳೆ ಗೆಳೆಯರು, ಮುಂದೆ ಯಾರೇ ಕೇಳಿದರೂ ಉತ್ತರ ಕೊಡುವ ನೈತಿಕ ಸ್ಥೈರ್ಯ ಬರಹಗಾರನಿಗೆ ಇರಬೇಕೆಂಬ ಪ್ರಜ್ಞೆ ಮಗಳ ಪ್ರಶ್ನೆಗಳಿಂದ ಇನ್ನೂ ಜಾಗೃತವಾಯಿತು.
ನೀವೂ ಅಸಂಗತ ಓದಿ ದಯವಿಟ್ಟು ಏನಾದರೂ ಹೇಳಿ.
ಸಿದ್ದು ಯಾಪಲಪರವಿ
No comments:
Post a Comment