ಲವ್ ಕಾಲ
*ಮಗುವಾಗಿ ಮಡಿಲ ಸೇರುವಾಸೆ ಆದರೆ…*
ಮುಗ್ಧತೆ ಬೆಳೆದಂತೆಲ್ಲ ಮಾಯವಾಗಿ ಅಲ್ಲಿ ಜ್ಞಾನ ಹಾಗೂ ಜೊತೆಗೆ ಸ್ವಾರ್ಥವೂ ಸೇರಿಕೊಳ್ಳುತ್ತದೆ.
ತೀರಾ ವಯಸ್ಸಾದ ಮೇಲೆ ವ್ಯಕ್ತಿ ಕೇಂದ್ರಿತ ಮನಸ್ಥಿತಿ ಇಮ್ಮಡಿಸುತ್ತದೆ.
ಅಪಾರ ಅನುಭವ, ಕಾಲನ ಹೊಡೆತದ ಪೆಟ್ಟು, ಜೊತೆಗಿರುವವರ ಅಸಡ್ಡೆ, ನಮ್ಮನ್ನು ಸುತ್ತಲಿರುವವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಬಿಸಾಡುತ್ತಾರೆ ಎಂಬ ಭಾವ ಉಲ್ಬಣಗೊಳ್ಳುತ್ತ ಹೋಗಿ ಬದುಕು ನೀರಸವಾಗಿಬಿಡುತ್ತೆ.
ಗಂಡ-ಮಕ್ಕಳು, ಬಂಧುಗಳು ಹದ ಇದ್ದಾಗ ಕದ ತೆಗೆದು, ಅನಗತ್ಯ ಅನಿಸಿದಾಗ ಮನದ ಬಾಗಿಲು ಮುಚ್ಚಿಬಿಡುತ್ತಾರೆ.
ಯೌವನದಲಿ ಅದಾವುದು ಕಂಡು ಬರದೇ ಬದುಕು ದಾಟಿ ಹೋಗಿರುತ್ತದೆ.
ಆಸೆಗಳು ಕಮರಿಹೋಗಿ ಏನೂ ಬೇಡವಾಗಿಬಿಡುತ್ತೆ. ಕಾಮನೆಗಳು ಅರಳುವುದೇ ಇಲ್ಲ.
ಆದರೂ ಕಾಲನ ಮಹಿಮೆ ಹೇಳಲಾಗುವುದಿಲ್ಲ.
ಆಸೆಗಳು ಚಿಗುರಿದರೂ ಚಿಗುರಬಹುದು. ನಮ್ಮ ಸುಪ್ತಮನದ ಬಯಕೆಗಳ ಹತ್ತಿಕ್ಕಿ ಸಹಿಸಿಕೊಂಡಿರುತ್ತೇವೆ.
***
ಸುಪ್ತಮನಸಿನ ಬಯಕೆಗಳು ಈಡೇರುವ ಸಮಯ ಬಂದೇ ಬರುತ್ತೆ. ಸೂಕ್ತ ಸಮಯ, ಸೂಕ್ತ ವ್ಯಕ್ತಿ ಬರುವತನಕ ಕಾಯಬೇಕು. ಸಿಕ್ಕ ಅವಕಾಶವನ್ನು ಅರ್ಥಪೂರ್ಣವಾಗಿ ಬಳಸುವ ಸಹನೆ ಹಾಗೂ ವಿವೇಚನೆಯೂ ಅನಿವಾರ್ಯ.
ಕಾಲ ಗರ್ಭದ ಶಿಸುಗಳು ನಾವು. ನಾಶವಾಗಿ ಹೋಗುವ ಈ ದೇಹಸಿರಿ ನೆಚ್ಚಿಕೊಂಡು ಹಾರಾಡುವುದು ಸರಿಯಲ್ಲ.
ಆತ್ಮಾನುಸಂಧಾನಕೆ ಒತ್ತು ನೀಡಿ ಹೊಸ ಬದುಕು ಕಟ್ಟಿಕೊಳ್ಳಬೇಕು.
ಹೊಸ ಬದುಕಿನ ವ್ಯಕ್ತಿಗಳು ನಿಸ್ವಾರ್ಥಿಗಳಾಗಿದ್ದರೆ ಮಾತ್ರ ನಾವು ಹೆಚ್ಚು ಸುದೈವಿಗಳು. ಅಕಸ್ಮಾತ್ ಸ್ವಾರ್ಥಿಗಳಿದ್ದರೆ ಎಚ್ಚರದ ಹೆಜ್ಜೆ ಇಡುತ್ತ ಜಾರಿ ಬೀಳದಂತೆ ಸಾಗಿ ದಡ ಸೇರಬೇಕು.
ಈಗ ನಾವು ಅಂತ ಸಂದಿಗ್ಧತೆಯನ್ನು ಎದುರಿಸಿ ಹೊರಬಂದು ನಿಚ್ಚಳಾಗಿದ್ದೇವೆ.
ಸದಾ ಜೊತೆಗಿರುವ ಕರುಳು ಬಂಧನಕ್ಕೂ ಅವರದೇ ಆದ ಮಿತಿಗಳಿವೆ, ಆಸೆಗಳಿವೆ, ಅವರ ಜೀವ ಪಯಣವೂ ಸುದೀರ್ಘವಾಗಿದೆ. ಅದನ್ನು ದೃಷ್ಟಿಕೋನದಲಿಟ್ಟುಕೊಂಡು ಅವರ ಲಾಭಕ್ಕನುಗುಣವಾಗಿ ವ್ಯಕ್ತಿಗಳನ್ನು ಬಳಸಿಕೊಳ್ಳುತಾರೆಂಬ ಅರಿವು ನಮಗಿರಬೇಕು.
ಅನಾರೋಗ್ಯ-ಮುಪ್ಪು ಆವರಿಸಿ ಸಾವು ಯಾವಾಗ ನಮ್ಮನ್ನು ಎತ್ತಿಕೊಂಡು ಹೋಗುತ್ತದೆಯೋ ಗೊತ್ತಿಲ್ಲ ಆದರೂ ಉಸಿರು ನಿಲ್ಲುವ ತನಕ ಒಡಲ ಹಸಿರ ಬಾಡಲು ಬಿಡಲಾಗದು, ಅದೇ ಬದುಕಿನ ಬ್ಯುಟಿ.
*ಅಯ್ಯೋ ಒಂದು ದಿನ ಬಿದ್ದು ಹೋಗುವ ಜೀವ ಇದ್ದಂಗ ಹೋದರಾಯಿತು* ಎಂಬ ವೈರಾಗ್ಯ ಬಂದುಬಿಟ್ಟರೆ ಮೇಲೆ ಹೇಳಿದ್ದೆಲ್ಲ ವ್ಯರ್ಥ!
ನಾವು ಮಗುವಾಗಿದ್ದರೆ ಎಷ್ಟು ಛಂದ ಇತ್ತಲ್ಲ. ಬೇಕಾದಾಗ ಓಡಿ ಬಂದು ಮಡಿಲ ಸೇರಬಹುದಿತ್ತು. ಆದರೆ...
ಈಗ
ವೈರಾಗ್ಯದ ಗೊಡವೆಗೆ ಹೋಗದೇ ಜೀವನೋತ್ಸಾಹದಿಂದ ಇದ್ದಷ್ಟು ದಿನ ನಮಗೆ ಬೇಕಾದವರೊಂದಿಗೆ ಬಾಳಬೇಕು ಅನಿಸಿದರೆ ಮಾತ್ರ…
ಹೀಗೊಂದು ಹೊಳಹು…
ಸಿದ್ದು ಯಾಪಲಪರವಿ
No comments:
Post a Comment