*ಮುಂಜಾನೆ ನೆನಪಾಗಿ ಕಾಡಿದ ಧಾರವಾಡದ ಕೆಸಿಡಿ*
ಅರೆಬರೆ ನಿದ್ದೆಯಿಂದ ಗಡಬಡಿಸಿ ಎದ್ದಾಗ ನಡುರಾತ್ರಿ. ಧಾರವಾಡದ ಕರ್ನಾಟಕ ಕಾಲೇಜು ದಿನಗಳ ಕಚಗುಳಿ. ಯಾಕೋ ತಿಳಿಯಲಿಲ್ಲ. ಈ ಕನಸುಗಳೇ ಹೀಗೆ ಬರೀ ಹಳವಂಡ ಎಂಬತ್ತರ ದಶಕದ ಅಂದರೆ 1987 ರವರೆಗೆ ಕಳೆದ ದಿನಗಳು ನೆನಪಾಗಿ ನಿದ್ದೆ ಹತ್ತಲೇ ಇಲ್ಲ.
ಅಕ್ಷರದ ಹರವು ವಿಸ್ತರಿಸಿದ ನಾಡಿನ ಆಕ್ಸ್‌ಫರ್ಡ್ ಕರ್ನಾಟಕ ಕಾಲೇಜು ನಮ್ಮ ಯೌವ್ವನದ ಅನುಪಮ ಸಂಗಾತಿ.
ಆ ಕಾಲದ ಪ್ರಾಧ್ಯಾಪಕರು ಈಗ ಸಿಗುವುದು ಕಡು ಕಷ್ಟ.
ಹಳ್ಳಿ ಹುಡುಗರಿಗೆ ಇಂಗ್ಲಿಷ್ ಮಾತನಾಡಲು ಕಲಿಸಿ ಆತ್ಮವಿಶ್ವಾಸ ತುಂಬಿದ ದಿನಗಳು ಒತ್ತರಿಸಿ ನೆನಪಾದವು.
ಕಾರಟಗಿಯಂತಹ ಶೈಕ್ಷಣಿಕವಾಗಿ ಹಿಂದುಳಿದ ಊರಿಂದ ಹೋದವರಿಗೆ ಹೊಂದಿಕೊಳ್ಳುವುದು ಅಸಾಮಾನ್ಯ ಸಂಗತಿ.
ಪಿಯುಸಿ ಓದುವಾಗ ಇಂಗ್ಲಿಷ್ ಕಲಿಯಲು ನೆರವಾದ ಗೆಳೆಯರಾದ ಅರುಣ ಹಾನಗಲ್, ಅನಿತಾ ರಾವ್ ಹೆಚ್ಚು ನೆನಪಾಗುತ್ತಾರೆ.
ಅನಿರೀಕ್ಷಿತವಾಗಿ ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ಮಠದ ಚನ್ನಯ್ಯ ಹಿರೇಮಠರ ಮೂಲಕ ಕವಿ ಪಟ್ಟಣಶೆಟ್ಟಿ ಸರ್ ಅವರನ್ನು ಪರಿಚಯಿಸಿದ್ದು ಈಗ ಮರೆಯಲಾಗದ ಇತಿಹಾಸ.
ಕೇವಲ ಕನ್ನಡ ಓದಲು, ಬರೆಯಲು ಬರುತ್ತಿದ್ದ ನಾನು ಗುರುಗಳ ಹಾಗೂ ಸ್ನೇಹಿತರ ಸಲಹೆಯಂತೆ ಇಂಗ್ಲಿಷ್ ಮೇಜರ್ ತೆಗೆದುಕೊಳ್ಳುವ ಧೈರ್ಯ ಮಾಡಿದೆ.
ಶಿಕ್ಷಕರು ಅಂದರೆ ಖರೆ ಶಿಕ್ಷಕರು: ಪ್ರತಿಯೊಂದು ವಿಭಾಗದಲ್ಲೂ ಅಪರೂಪದ ಶಿಕ್ಷಕರು. ಅವರದೇ ಆದ ವಿಶೇಷ ಶೈಲಿ.
ತಡವರಿಸುತ್ತ ನಿಧಾನ ಇಂಗ್ಲಿಷ್ ಕಲಿತು ಮನೋಸ್ಥೈರ್ಯ ಹೆಚ್ಚಿಸಿಕೊಂಡೆ. ಎಷ್ಟೇ ಕಲಿತರು ಕಡಿಮೆ ಅನಿಸುವಂತಹ ಅಸಾಮಾನ್ಯ ಶಿಕ್ಷಕರು.
ಕೆ.ಎಸ್. ನಾರಾಯಣಾಚಾರ್ ಅವರ ಶೈಲಿ, ಪಾಠ ಮಾಡುವ ವಿಧಾನ ಶಿಕ್ಷಕರಾದರೆ ಹಿಂಗೇ ಆಗಬೇಕೆಂಬ ಪ್ರೇರಣೆ ನೀಡಿತು.
ಎಲ್ಲರೂ ಹಾಗೆ, ಅವರದೇ ಆದ ಶೈಲಿ ರೂಪಿಸಿಕೊಂಡಿದ್ದರು. ಆರೋಗ್ಯಪೂರ್ಣ ಪೈಪೋಟಿಯ ಗೆಳೆಯರನ್ನು ಮರೆಯಲಾಗದು.
ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಬರುತ್ತಿದ್ದ ಅತಿಥಿಗಳು, ಅವರ ಮಾತುಗಳ ರಸಗವಳ ಈಗಲೂ ಹಸಿರು.
ಮುಂಜಾನೆ ಕಾಲೇಜು, ಸಂಜೆ ವಿದ್ಯಾವರ್ಧಕ ಸಂಘದ ಕಾರ್ಯಕ್ರಮಗಳು ಒಳಗೆ ಅಡಗಿದ್ದ ಲೇಖಕನನ್ನು ಎಚ್ಚರಿಸಿ ಕೈ ಹಿಡಿದು ನಡೆಸಿದ್ದನ್ನು ಮರೆಯಲಾಗದು.
ಅಕಾಡೆಮಿಕ್ ಕಾರ್ಯಕ್ರಮಗಳಿಗೆ ಇಡೀ ದೇಶದ ಮೂಲೆ ಮೂಲೆಗಳಿಂದ ಬರುತ್ತಿದ್ದ ಸಾಹಿತಿಗಳು, ಕಲಾವಿದರಿಗೆ ಧಾರವಾಡ ಬಹುದೊಡ್ಡ ಸಾಂಸ್ಕೃತಿಕ ನಗರ.
ಸದಾ ಜಿನುಗುಟ್ಟುವ ಮಳೆ, ಕೆಂಪು ಮಣ್ಣು ನಮಗೆಲ್ಲ ಹೊಸ ಅನುಭವ.
ಕೊಡೆ ಹಿಡಿದು ಓಡಾಡುವ ಅಸಂಖ್ಯ ಕವಿಗಳು, ಕಲಾವಿದರ ನೋಡುವ ಸಡಗರದಲ್ಲಿ ದಿನಗಳು ಹೋದದ್ದೇ ಗೊತ್ತಾಗಲಿಲ್ಲ.
ಈಗ ಬದುಕು ಕಟ್ಟಿಕೊಂಡಿದ್ದೇನೆ, ಆದರೂ ಏನೋ ಕೊರಗು. ನಮಗೆ ಕಲಿಸಿದ ಗುರುಗಳ ಎತ್ತರಕೆ ಏರಲಿಲ್ಲ ಎಂಬ ಆತಂಕ.
ಆದರೂ ಒಂದಿಷ್ಡು ತೋಚಿದಷ್ಟು ಬರೆದು ನಾಲ್ಕು ಪುಸ್ತಕ ಬರೆದಿದ್ದರೆ ಅದರ ಕೀರ್ತಿ ಕೆಸಿಡಿಗೆ ಸಲ್ಲುತ್ತದೆ.
ಓದುವಾಗ,ಬರೆಯುವಾಗ, ಪಾಠ ಮಾಡುವಾಗ ಒಳಗೆ ಸುಳಿದಾಡುವ ಶಿಕ್ಷಕರು ಪ್ರಾಥಸ್ಮರಣೀಯರು.
ಹೊಟ್ಟೆಪಾಡಿಗೆ ಚದುರಿ ಹೋಗಿರುವ ಗೆಳೆಯರೆಲ್ಲ ಅಲ್ಲಿ ಸೇರಬೇಕೆಂಬ ಇರಾದೆ ಇದೆ.
ಅದು ಕೈಗೂಡದೇ ಹೋದರೆ ಗೊತ್ತಿರುವ ಸಂಗಾತಿಗಳನ್ನು ಕರೆದುಕೊಂಡು ಕಾಲೇಜಿನ ಕೆಂಪು ಕಟ್ಟಡದ ಮುಂದೆ ಸುಳಿದಾಡಿ ಬರಬೇಕೆನ್ನಿಸಿದೆ.
ನೀವೂ ಬರ‌್ರಿ ನನ್ನ ಜೊತೆ ನನ್ನ ಕನಸಿನ ಕೆಸಿಡಿಗೆ.
*ಸಿದ್ದು ಯಾಪಲಪರವಿ*
No comments:
Post a Comment