Wednesday, May 12, 2010

ನ್ಥಾಯಾಲಯ ತೀರ್ಪುಗಳು, ಶಿಕ್ಷೆ ಇತ್ಯಾದಿ....ಇತ್ಯಾದಿ


ಮುಂಬ್ಯೆ ಮಾರಣ ಹೋಮದ ಭಯೋದ್ಪಾಕ ಕಸಬ್ ನ ಶಿಕ್ಷೆಯ ತೀರ್ಪೀನ ಕುರಿತು ಇಡೀ ಜಗತ್ತು ಕೂತುಹಲದಿಂದ ಕಾದಿತ್ತು. ಈ ದೇಶದ ಪ್ರಾಮಾಣಿಕ ಅಧಿಕಾರಿಗಳನ್ನು ,ನೂರಾರು ಅಮಾಯಕರನ್ನು ಹಿಂಸಿಸಿ ತನ್ನ ಕ್ರೌರ್ಯವನ್ನು ಮೆರೆವ ಕಸಬ್ ಗೆ ಶಿಕ್ಷೆ ಆಗಲೆಬೇಕೆಂದು ಜಗತ್ತು ಅಪೆಕ್ಷಿಸಿತ್ತು ತೀರ್ಪು ಈಗಷ್ಟೆ ಹೊರಬಿದ್ದಿದೆ. ಶಿಕ್ಷೆ ಆಗುತ್ತಾ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಸ್ವತಂತ್ರ ಭಾರತದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ ಅನುಮಾನ ಸ್ಪಷ್ಟವಾಗುತ್ತಲೇ ಹೋಗುತ್ತದೆ. ಕಳೆದ ಒಂದೆರಡು ತಿಂಗಳಿನಿಂದ ದೇಶದ ಎಲ್ಲ ಮಾಧ್ಯಮಗಳು ಹಿಂದಿನ ಸಂಗತಿಗಳನ್ನು ಮೆಲುಕು ಹಾಕಿ ಹಲವಾರು ಕಾರಣಗಳಿಂದ ಉಗ್ರರಿಗೆ, ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗದಿರುವುದನ್ನು ಪ್ರತಿಬಿಂಬಿಸಿದ್ದಾರೆ. ರಾಜಕೀಯ, ಅಧಿಕಾರ ಶಾಹಿಗಳ ಭ್ರಷ್ಟಾಚಾರದಿಂದಾಗಿ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಇಂದು ಒಬ್ಬ ರಾಜಕಾರಣಿ ಅಥವಾ ಅಧಿಕಾರಿ ಕೋಟಿಗಟ್ಟಲೆ ಭ್ರಷ್ಟಾಚಾರದಲ್ಲಿ ತೊಡಗಿ ಸಿಕ್ಕಿಬಿದ್ದರೆ ಇದೊಂದು ಸಂಗತಿಯೇ ಅಲ್ಲ ಎಂಬ ನಿರ್ಣಯಕ್ಕೆ ಜನ ಬಂದಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡರೂ ಪ್ರಜಾಪ್ರಭುತ್ವ ಹಾಗೂ ದೇಶದ ಸಂವಿಧಾನವನ್ನು ಜನ ಗೌರವಿಸುತ್ತಲೇ ಇದ್ದಾರೆ. ಇಂತಹ ಅನೇಕ ವೈರುಧ್ಯಗಳನ್ನು ಈ ದೇಶ ವಾಸಿಗಳು ಅನುಭವಿಸುತ್ತಲೇ ಇದ್ದಾರೆ.
ಈ ಎಲ್ಲ ಆತಂಕಗಳ ಮಧ್ಯೆಯೂ ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ನ್ಯಾಯಾಂಗದಲ್ಲಿನ ಅನೇಕ ಗೊಂದಲಗಳ ಬಗ್ಗೆ ನ್ಯಾಯಾಂಗ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಜನಸಾಮಾನ್ಯರಾಗಲಿ, ಮಾಧ್ಯಮ ಗಳಾಗಲಿ, ಮುಕ್ತವಾಗಿ ಚರ್ಚಿಸಲಿಕ್ಕೆ ಹಿಂದೇಟು ಹಾಕಲು ಕಾರಣ 'ನ್ಯಾಯಾಂಗ ನಿಂದನೆ' ಎಂಬ ತೂಗು ಕತ್ತಿ.
ಜೊತೆಗೆ ಮಹಾ ನಾಯಕರುಗಳಿಂದ ಬರುವ ಜೀವಭಯ, ಸಮರ್ಪಕವಾದ ದಾಖಲೆಗಳು, ಪೂರಕವಾಗಿ ಬೇಕಾಗುವ ಸಾಕ್ಷಿಗಳ ಆಧಾರದ ಮೇಲೆಯೇ ನ್ಯಾಯ ನಿರ್ಣಯವಾಗಬೇಕಾದಾಗ ಮಿಕ್ಕ ನೈತಿಕ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಕೇವಲ ನೈತಿಕ ಕಾರಣಗಳಿಂದಾಗಿ ನ್ಯಾಯಾಧೀಶರು ತಮ್ಮ ತೀರ್ಪನ್ನು ನೀಡಲು ಬರುವುದಿಲ್ಲ. ಆದ್ದರಿಂದ ಉಗ್ರರು, ಅಪರಾಧಿಗಳು ನ್ಯಾಯಾಲಯಗಳ ಹೋರಾಟದಲ್ಲಿ ಶಿಕ್ಷೆಗೆ ಪೂರಕವಾಗುವ ದಾಖಲೆಗಳನ್ನು ನಾಶಪಡಿಸಿ, ಹೊಸ ಖೊಟ್ಟಿ ಸಾಕ್ಷಿಗಳನ್ನು ಸೃಷ್ಟಿ ಮಾಡಿ , ಮಾಡಿಸಿ ಕಾನೂನು ಸಮರದಲ್ಲಿ ಗೆಲ್ಲುತ್ತಾರೆ. ಇಂತಹ ಸಂದರ್ಭಗಳಲ್ಲಿ ಜನರ ನೀರಿಕ್ಷೆ ಸುಳ್ಳಾಗುತ್ತವೆ.
ಈಗ ನಮ್ಮೆದುರಿಗಿರುವ ಪ್ರಶ್ನೆಯೂ ಅದೇ..... ಕಸಬ್ ಗೆ ತೀರ್ಪು ನೀಡಲು ಸಾಕಷ್ಟು ಕಾಲಾವಕಾಶ ತೆಗೆದುಕೊಂಡರೂ, ನೈತಿಕವಾಗಿಯೂ ಈ ದೇಶವಾಸಿಗಳು ಗೆದ್ದಿದ್ದಾರೆ.
ಪಾಕಿಸ್ತಾನದೊಂದಿಗಿನ ಸಂಬಂಧ ಸುಧಾರಣೆಗೆ ಅನೇಕ ವಿಫಲ ಪ್ರಯತ್ನಗಳು ಸಾಗಿರುವಾಗ ಉಗ್ರರು ತಮ್ಮ ಅಟ್ಟಹಾಸ ಮೆರೆಯುತ್ತಾರೆ. ಬೆಕಾಬಿಟ್ಟಿಯಾಗಿ ವರ್ತಿಸಿ ದೇಶದ ಭದ್ರತೆಗೆ ಧಕ್ಕೆತರುತ್ತಾರೆ. ಔದಾರ್ಯತೆಯ ಹೆಸರಿನಲ್ಲಿ ನಮ್ಮ ದೌರ್ಬಲ್ಯವನ್ನು ದುರುಪಯೊಗ ಪಡಿಸಿಕೊಂಡಿದ್ದಾರೆ. ಈಗ ಕಸಬ್ ಪ್ರಕರಣದಲ್ಲಿ ಮತ್ತೆ ವಿಳಂಬವಾದರೆ ಜನರ ವಿಶ್ವಾಸಕ್ಕೆ ಧಕ್ಕೆ ಬರುತ್ತದೆ. ನ್ಯಾಯಾಧೀಶರು ತುಂಬ ಕಷ್ಟಪಟ್ಟು ನ್ಯಾಯ ಒದಗಿಸಿದ್ದಾರೆ. ಈ ದೇಶದ ಜನರ ಭಾವಗಳಿಗೆ ನ್ಯಾಯ ಸಿಗಬೇಕಾದರೆ ವರ್ಷಾಂತ್ಯದಲ್ಲಿ ನೀಡಿದ ಶಿಕ್ಷೆ ಜಾರಿಯಾಗಬೇಕು. ಕಾನೂನಿನ ಒಳದಾರಿ ಹಿಡಿದು ಅಪರಾಧಿ ತಪ್ಪಸಿಕೊಳ್ಳಬಾರದೆಂದು ಜನರ ಸದಾಶಯ.
public memory is short ಎಂಬ ಹಾಗೆ ಒಂದೆರಡು ತಿಂಗಳು ಬಿಟ್ಟರೆ ಜನ ವಿಷಯ ಮರೆಯುತ್ತಾರೆ. ಮತ್ತೊಂದು ಹೊಸ ಘಟನಾವಳಿ ಜರುಗಿದರೆ ಆ ಚರ್ಚೆ ಪ್ರಾರಂಭವಾಗುತ್ತದೆ.
ಹೀಗಿರುವಾಗ ಪಾಕಿಸ್ತಾನವು ಅತ್ತು ಕರೆದು ತನ್ನ ಕುತಂತ್ರ ಉಪಯೋಗಿಸಿ ದಯೆ, ಅನುಕಂಪಗಳ, ಮಾನವಿಯತೆಯ ಭಾವನಾತ್ಮಕ ಜಾಲ ಬಿಸಿ ಕ್ಷಮೆ ಗಿಟ್ಟಿಸಿಕೊಂಡರೆ ಹೇಗೆ ಎಂಬ ಆತಂಕವೂ ಇದೆ. ಒಮ್ಮೆಯಾದರು ಇಂತಹ ಆತಂಕವಾದಿಗಳಿಗೆ ರಾಜಕೀಯ ಕೆಸರು ತಟ್ಟದೆ, ಓಟ್ ಬ್ಯಾಂಕ್ ಎಂಬ ಮಾಯೆ ಅಂಟಿಕೊಳ್ಳದೆ ನ್ಯಾಯ ಸಿಗಲಿ. ಕಸಬ್ ಗೆ ಸಿಗುವ ಶಿಕ್ಷೆ ಜನರ ಪಾಲಿನ ವಿಶ್ವಾಸ ವಾಗುತ್ತದೆ. ಆದರೆ ಕಾಲ ಎಲ್ಲವನ್ನು ಮರೆಸುತ್ತದೆ. ಹಾಗೆಯೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂಬುದು ಅಷ್ಟೇ ಸತ್ಯ!

No comments:

Post a Comment