ಅನೇಕ ಬಾರಿ ಪ್ರಸ್ತಾಪಿಸಿದಂತೆ ಶಾಲೆ ಕಲಿಯುವದೆಂದರೆ ದೂರದ ಊರಿಗೆ ಹೋಗಿ ಹಾಸ್ಟೆಲ್‌ನಲ್ಲಿದ್ದು, ಇಂಗ್ಲೀಷ ಮೀಡಿಯಂ ನಲ್ಲಿ ಕಲಿತರೆ ಮಾತ್ರ ನಿಜವಾದ ಕಲಿಯುವಿಕೆ ಎಂಬ ಕೀಳರಿಮೆ ಬಾಲ್ಯದಲ್ಲಿ ಕಾಡಲು ಶುರು ಆಯ್ತು.
ಊರ ಬಂಧುಗಳಾದ ಜವಳಿ, ಹಿಂದಪೂರ ಕುಟುಂಬದ ಗೆಳೆಯರು ಸಂಡೂರ ಮಹಾರಾಜರು ಪ್ರಾರಂಭಿಸಿದ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಸೋದರತ್ತೆಯ ಮಕ್ಕಳು ರಾಯಚೂರಿನ ಗದ್ವಾಲ ಪರಿವಾರದ ಸಂಗಾತಿಗಳು ಗುಲಬುರ್ಗಾದ ಶರಣಬಸವೇಶ್ವರ ವಸತಿ ಶಾಲೆಯಲ್ಲಿದ್ದರು.
ನಮ್ಮ ಪೂರ್ವಜರು ಸಾಕಷ್ಟು ಶ್ರೀಮಂತರಾಗಿದ್ದರೂ, ಶಾಲೆಗಾಗಿ ಸಾವಿರರು ರೂಪಾಯಿ ಖರ್ಚು ಮಾಡುವುದು ಬೇಡ ಎಂಬ ವಾದವಿತ್ತು. ಬಾಲ್ಯದಲ್ಲಿ ಹೀಗಾಗಿ ನಾವು ನಿಜವಾದ ವಿದ್ಯಾರ್ಥಿಗಳು ಅನಿಸಿಕೊಳ್ಳಲಿಲ್ಲ. ವಿದ್ಯಾರ್ಥಿ ಜೀವನದ ಬಗ್ಗೆ ಅಸಡ್ಡೆ ಶುರು ಆಯಿತು.
ಕಲಿತರೆಷ್ಟು, ಬಿಟ್ಟರೆಷ್ಟು ಎಂಬ ವಿಷಾದ ಬೇರೆ.
ಮುಖ್ಯವಾಗಿ ಇಂಗ್ಲಿಷ್ ಬಾರದ ಕಿರಿ ಕಿರಿ ರಾಯಚೂರು ಅತ್ತೆಯ ಮಕ್ಕಳಾದ ನಾಗರಾಜ, ಶಿವರಾಜ, ಮಲ್ಲಿಗೆ ಚೆನ್ನಾಗಿ ಇಂಗ್ಲಿಷ್ ಬರ್ತಾ ಇತ್ತು.
ಯಾವುದೇ ಒಂದು ಸಂದರ್ಭದಲ್ಲಿ ಇಂಗ್ಲಿಷ್ ಪದಗಳನ್ನು ಬಳಸುವ ಪ್ರಸಂಗ ಬಂತು. ಅದು ತುಂಬಾ ಸೆಕ್ಸಸ್ ಆಗಿದೆ ಅಂದೆ. ಆಗ ಶಿವರಾಜ ಲೇ ಮಗನೆ ಅದು ಸೆಕ್ಸಸ್ ಅಲ್ಲಲೆ ಸಕ್ಸೆಸ್ ಲೇ ಅಂದಾಗ ಪೆಚ್ಚಾಗಿ ಹೋದೆ.
ಈ ಇಂಗ್ಲಿಷ್ ಅಪಮಾನವನ್ನು ಆ ಕ್ಷಣಕ್ಕೆ ಸ್ಪೋಟ್ವ್ರಿವ್ ಆಗಿ ತಗೋಂಡೆ. ಆದರೆ ರಜೆ ಮುಗಿಸಿ ಅತ್ತೆ ಮಕ್ಕಳು ಊರಿಗೆ ಹೋದಾಗ ಅಪಮಾನವನ್ನು ನಿರಂತರವಾಗಿ ಮೆಲುಕು ಹಾಕಿದೆ.
ದೂರದ ಊರ ಹೊರಗೆ ಲ್ಯಾಟ್ರಿನ್ ಹೋಗಿ ಹಿಂಸೆ ಅನುಭವಿಸಿ ಬರುವ ಸಂದರ್ಭದಲ್ಲಿ ಒಂಟಿಯಾಗಿ ಇಂಗ್ಲಿಷ್ ಅಪಮಾನವನ್ನು ಮೆಲುಕು ಹಾಕಿದೆ. ಸರಕಾರಿ ಶಾಲೆಗೆ ಹೋಗುವುದರಲ್ಲಿ ಅರ್ಥವೇ ಇಲ್ಲ ಅನಿಸಿತು. ನಾವು ಈ ಜನ್ಮದಲ್ಲಿ ಇಂಗ್ಲೀಷ್ ಕಲಿಯಲು ಅಸಾಧ್ಯ. ಹೀಗಿದ್ದಾಗ ಶಾಲೆಗೆ ಯಾಕೆ ಹೋಗಬೇಕು ಎಂದು ಪ್ರಶ್ನಿಸಿಕೊಂಡೆ.
ಶಾಲೆಯ ಬಗ್ಗೆ ನಿರಾಸಕ್ತಿ ಬೆಳೆಯಿತು. ಬೇಕಾದಾಗ ಹೋಗುತ್ತಿದ್ದೆ. ಬೇಡವಾದಾಗ ಬಿಡುತ್ತಿದ್ದೆ. ಇಂಗ್ಲಿಷ್ ಶಾಲೆಯ ಮಹತ್ವ ಅರಿತಿದ್ದ ಅಪ್ಪ, ತಮ್ಮ ಜಗದೀಶನನ್ನು ಇಂಗ್ಲೀಷ್ ಶಾಲೆಗೆ ಪ್ರವೇಶ ಕೊಡಿಸಿದ.
ಜವಳಿಯವರ ಹುಡುಗರೊಂದಿಗೆ ೨೫ ಕಿಲೋ ಮೀಟರ್ ದೂರದ ಮರಳಿಯ ಪ್ರಗತಿ ನಗರ ಶಾಲೆಗೆ ಜಗದೀಶ್ ಹೋಗುತ್ತಿದ್ದ, ದಿನಾ ಅವರನ್ನು ಶಾಲೆಗೆ ಕಳಿಸಲು ವ್ಯಾನ್ ಹೋಗುತ್ತಿತ್ತು. ಒಳಗೊಳಗೆ ಅಪಮಾನಿತನಾದೆ. ಅನಗತ್ಯ ಹೋಲಿಕೆಯಿಂದಾಗಿ ಕುಗ್ಗಿ ಹೋದೆ.
ನನಗೆ ಕಿರಾಣಿ ಅಂಗಡಿಯೇ ಗತಿ ಎನಿಸಿತು. ಆದರೂ ಎಲ್ಲೋ ಒಂದು ಕಡೆ ಇಂಗ್ಲಿಷ್ ಕಲಿಯಬೇಕೆಂಬ ಛಲ ಬೆಳೆಯಿತು. ರಾಪಿಡೆಕ್ಸ್ ಖರೀದಿಸಿದೆ. ಪ್ರಯೋಜನವಾಗಲಿಲ್ಲ.
ಎಲ್ಲೋ ಒಂದು ಕಡೆ ಇಂಗ್ಲಿಷ್ ಕಲಿಯಬೇಕೆಂಬ ಬೀಜ ಬಿತ್ತಿದೆ. ಮುಂದೊಂದು ದಿನ ಆ ಬೀಜ ಹೆಮ್ಮರವಾಗಬಹುದೆಂದು ಅಂದುಕೊಂಡಿರಲಿಲ್ಲ.
ಇಂಗ್ಲಿಷ್ ಮೀಡಿಯಂ ಕಲಿತವರು ಮಾತ್ರ ಇಂಗ್ಲೀಷನಲ್ಲಿ ಮಾತನಾಡಬಹುದು ಎಂಬ ಆತಂಕವನ್ನು ದೂರ ಮಾಡಲು ಪಣ ತೊಟ್ಟೆ ಆದರೆ ಅಂದು ನನ್ನ ಕೆಲಸವನ್ನು ಯಾರಿಗಾದರೂ ಹೇಳಿದ್ದರೆ ಅಪಹಾಸ್ಯ ಮಾಡುತ್ತಿದ್ದರು.
ಜಗದೀಶನ ಶಾಲೆ ಮರಳಿಯಿಂದ, ಕಾರಟಗಿ, ಇಲಕಲ್ಲು ಸಿಂಧನೂರು ಅಂತ ಪಯಣ ಶುರು ಆಯಿತು. ನಾನು ಕಾರಟಗಿಯ ಸರಕಾರ ಶಾಲೆಯಲ್ಲಿಯೇ ಕನಸು ಕಟ್ಟಲು ಆರಂಭಿಸಿದೆ. ಹೈಸ್ಕೂಲಿನಲ್ಲಿಯೂ ಅಷ್ಟೇ, ಎಷ್ಟೇ ಪ್ರಯತ್ನಿಸಿದರೂ ಇಂಗ್ಲಿಷ್ ತಲೆಗೆ ಹೋಗಲೇ ಇಲ್ಲ.
ನನ್ನ ಸಮಸ್ಯೆಯನ್ನು ಶಿಕ್ಷಕರಿಗೆ ವಿಷಾದದಿಂದ ವಿವರಿಸಿದೆ. ಹಾಗೇನಿಲ್ಲ ಕನ್ನಡ ಮೀಡಿಯಂನಲ್ಲಿ ಓದಿ ಜಾಣರಾಗಬಹುದು, ನಾವೆಲ್ಲ ಓದಿದ್ದು ಸರಕಾರಿ ಕನ್ನಡ ಶಾಲೆಗಳಲ್ಲಿಯೇ ಎಂಬ ಶಿಕ್ಷಕರ ಮಾತುಗಳು ಭರವಸೆ ಮೂಡಿಸಿದವು.
ಯಾಪಲಪರವಿ ಮನೆತನದ ಮೂರನೇ ತಲೆಮಾರಿನ ಮಕ್ಕಳು ಇಂಗ್ಲೀಷ್ ಶಾಲೆಗೆ ಹೋಗುತ್ತಿದ್ದರು. ನಾನು ಚನ್ನಪ್ಪ ಕಕ್ಕ ಸರಕಾರಿ ಶಾಲೆಗೆ ಫಿಕ್ಸ್ ಆದೆವು.
ಕೇವಲ ಕನ್ನಡ ಸಾಹಿತ್ಯವನ್ನು ಮಾತ್ರ ಪಟ್ಟಾಗಿ ಹಿಡಿದುಕೊಂಡೆ. ಕನ್ನಡ ಭಾಷೆಯಲ್ಲಿ ಹಿಡಿತ ಸಾಧಿಸಿದೆ. ಕಾಡಬಸಪ್ಪ ಗುರುಗಳು ಮಾರ್ಗದರ್ಶನ ಮಾಡಿದರು. ಉತ್ತಮ ಚರ್ಚಾ ಪಟುವಾದೆ. ನಿಧಾನ ಆತ್ಮವಿಶ್ವಾಸ ಹೆಚ್ಚಾಯಿತು. ವಿಜ್ಞಾನ, ಗಣಿತದ ಚಿಂತೆ ಬಿಟ್ಟೆ.
ಅಜ್ಜ ಬರಿಸಿಟ್ಟ ಜಾತಕ ಓದಿದೆ. ಅದರಲ್ಲೂ ಹಾಗೆ ಇತ್ತು. ನನಗೆ ಶಿಕ್ಷಣ ಹತ್ತುವುದಿಲ್ಲ ಎಂದು ಬರೆದಿತ್ತು ಜಾತಕ ಸುಳ್ಳು ಮಾಡುವ ಹಟ ಶುರು ಆಯ್ತು. ದೇವರು, ಧರ್ಮಗಳಲ್ಲಿ ನಂಬಿಕೆ ಕಡಿಮೆ ಆಯಿತು. ಇಷ್ಟೆಲ್ಲ ಪೂಜೆ ಮಾಡಿದರೂ, ವ್ಯಾಪಾರ ಏಕೆ ಲಾಸ್ ಆಯ್ತು, ನನಗೆ ಯಾಕೆ ಶಿಕ್ಷಣ ಹತ್ತಲಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ತಾಕಲಾಟಕ್ಕೆ ಬಿದ್ದೆ, ಏನೋ, ಅರ್ಥವಾಗದ ವಯಸ್ಸು. ಆದರೂ ದೀರ್ಘ ಚಿಂತನೆಗೆ ತೊಡಗಿದೆ. ನೋಡೋಣ ಎಂದು ದೇವರನು ಒಲಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಇಂಗ್ಲಿಷ್ ಕಲಿಯಲು ದೇವರು ಒಲಿಯಲಿಲ್ಲ.
No comments:
Post a Comment