Sunday, July 15, 2018

ಜೀವ ಪಯಣವೇ ಹೀಗೆ

*ಲವ್ ಕಾಲ*

*ಜೀವ ಪಯಣವೇ ಹೀಗೆ*

ಎಲ್ಲಿಂದ ಎಲ್ಲಿಗೋ
ಸಾಗುವಾಗಿನ ಹುಡುಕಾಟಕೊಂದು ನೆಲೆ ದಕ್ಕುತ್ತದೆ.
ಆ ದಕ್ಕುವಿಕೆಗೆ ನಿಷ್ಟೆಯೂ ಬೇಕು. ಧ್ಯಾನದ ಅರಿವು ದೊರೆತ ಮೇಲೆ ಕ್ರಿಯೆಗೊಂದು ಪರಿಪೂರ್ಣತೆ.

ಈ ಹುಡುಕಾಟದಲಿ

ದಕ್ಕಿದ ನೀ
ಅಲ್ಲಿ ಸಿಕ್ಕಿ
ಬಿದ್ದ ನಾ
ಈಗ ಎಲ್ಲ
ದಕ್ಕಿಸಿಕೊಂಡಿದ್ದೇವೆ.

ಸಂತೃಪ್ತಿ ಎಂಬುದು ಕೊನೆಗೆ ದೊರಕುವ ಮನೋದೇಹ ಮಿಲನದ ಸುಖವೆಂಬುದು ಸರಳ ವ್ಯಾಖ್ಯಾನವೂ ಅಲ್ಲ.

ದೇಹಸುಖ ಸಿಕ್ಕ ಮೇಲೆ ಸಹಜವಾಗಿ ತೀವ್ರತೆ ಇಳಿಮುಖಗೊಳ್ಳುತ್ತದೆ. ಬಂಧನ ಸಡಿಲಗೊಳ್ಳುತ್ತದೆ. ತೆವಲು ಮುಗಿದ ಮೇಲೆ ಇನ್ನೇನು? ಎಂಬಂತೆ.

ಕೇವಲ ನಿಷ್ಕಲ್ಮಶ, ನಿರ್ವಿಕಾರ, ನಿರ್ಲಿಪ್ತ, ಕರಾರುರಹಿತ ಬಾಂಡೇಜುಗಳಲಿ ಮಾತ್ರ ಶಾಶ್ವತ ಜೀವಂತಿಕೆ. ಸವಿಮುತ್ತುಗಳಲಿ, ಬಿಸಿಯಪ್ಪುಗೆಯಲಿ ಹಸಿರು ಯೌವ್ವನದ ಸೆಳೆತ.

ಬಾನಂಗಳದಲಿ ಮಿನುಗಿದ ಹೊಳಪಿನ ನಕ್ಷತ್ರ.
ಶಿಲಾಬಾಲಕಿ ಪ್ರತಿರೂಪ ಎನ್ನಲು ಏರು ಯೌವ್ವನವೂ ಇಲ್ಲ.
ವಯೋಮಾನಕೂ ಮೀರಿದ ಸೆಳೆತ ಈ ಇಳಿ ಹೊತ್ತಲಿ.‌ ಇಳಿಹೊತ್ತು ಪ್ರಬುದ್ಧತೆ ಸಂಕೇತ.

ಆ ಪ್ರಬುದ್ಧತೆಯೂ ಇರಲೆಂಬ ಸಾತ್ವಿಕ ಹಟ.
ಎಷ್ಟೋ‌‌ ಸಲ‌ ಬದುಕನ್ನು ನಾವು ಆಳಕ್ಕಿಳಿದು ನೋಡುವುದೇ ಇಲ್ಲ. ಎಲ್ಲ ಮೇಲ್ಪದರು, ಸುಪರಫಿಸಿಯಲ್ ಗ್ರಹಿಕೆ, ಹಾಗಾದಾಗ ವ್ಯಕ್ತಿಗಳು, ಸಂಬಂಧಗಳು ಅರ್ಥವಾಗುವುದೂ ಇಲ್ಲ, ಶಾಶ್ವತವಾಗಿ ಉಳಿಯುವುದೂ ಇಲ್ಲ.

ನನಗೆ ನಿನ್ನನ್ನು ಆ ಮೇಲ್ಪದರಲಿ, ತೆವಲು ತೀರಿಸಿಕೊಳ್ಳಲು ಬಳಸುವ ಮನಸ್ಸಾಗಲಿಲ್ಲ ಅದಕ್ಕಾಗಿ ತುಂಬ ಕಠಿಣವಾಗಿ ವರ್ತಿಸುವುದು ಅನಿವಾರ್ಯ ಆಯಿತು.

ನೀನು ಅದೇ ಸುಪರಫಿಸಿಯಲ್ ಗ್ರಹಿಕೆಯಿಂದಾಗಿ ತಪ್ಪು ತಿಳಿಯುತ್ತಲೇ ಹೋದೆ, ನಾ ತಿಳಿಸುತ್ತಲೇ ಹೋದೆ. ಒಂದರ್ಥದಲಿ ಇದು Waste of time.
ಬಾಂಡೇಜ್ ಶಾಶ್ವತ ಉಳಿದರೆ ವೇಸ್ಟ್ ಅನಿಸುವುದಿಲ್ಲ. ಇಲ್ಲವಾದರೇ ಎಲ್ಲಾ ವೇಸ್ಟ್.

ನಮ್ಮ ಈ ದಶಕದ ಪಯಣ ಹಾಗಾಗಲಿಲ್ಲವೆಂಬುದೇ ಸಮಾಧಾನ. *At least after decade you realized my ability and concern*.

ಯಾಕೆ ಬೆಂಬಿದ್ದೆ‌ ಅದೆಲ್ಲ ಅಪ್ರಸ್ತುತ, ಪರಸ್ಪರ ದಕ್ಕಿಸಿಕೊಂಡದ್ದು ಈಗ ಇತಿಹಾಸ.
ಜವಾಬ್ದಾರಿ ಇರುವುದು ಇದನ್ನು ಶ್ರದ್ಧೆಯಿಂದ ಉಳಿಸಿಕೊಳ್ಳುವುದರಲ್ಲಿದೆ.

ಆ ಭರವಸೆ ನನಗಿದೆ, ನಿನ್ನಲಿ ಇನ್ನೂ ಇಮ್ಮಡಿಸಲಿ. ಆಳವಾಗಿ ಬಾಂಧ್ಯವ್ಯವನು ಗ್ರಹಿಸು. ಧ್ಯಾನಸ್ಥ ಸ್ಥಿತಿಯಲಿ ನೋಡಿದಾಗ ಬದುಕಿನ ಆಳ ತಿಳಿದೇ ತಿಳಿಯುತ್ತೆ, ಅದಕ್ಕೆ ವ್ಯವಧ್ಯಾನ ಹಾಗೂ ವಿವೇಚನೆ ಬೇಕು.

ಮಾತು, ಭೇಟಿ, ಮಿಲನ, ಬರಹ ಹಾಗೂ ಆಳದ ಗ್ರಹಿಕೆ ಇನ್ನೂ ಗಟ್ಟಿಗೊಳ್ಳಬೇಕು...

ಇದೊಂದು ವಿನೂತನ, ವಿಚಿತ್ರ ಅಗ್ನಿಪರೀಕ್ಷೆ ಸಹನೆಯಿಂದ ಗೆಲ್ಲಬೇಕು, ಈ ಆಟಕೆ ನಾವೇ ಅಂಪೈರ್. ಉಳಿದವರು ಸೋತರೆ ಕೇಕೆ ಹಾಕಿ ನಕ್ಕಾರೆಂಬ ಪ್ರಜ್ಞೆ ಇರಬೇಕು.

ಇಲ್ಲದಿರೆ ವ್ಯರ್ಥ ಕಳೆದು ಹೋಗಿ ನಗೆಪಾಟಲಾಗುತ್ತೇವೆ. ಇದು ಪ್ರತಿದಿನದ ಪರೀಕ್ಷೆ. ಪ್ರತಿ ದಿನದ ಸೋಲುಗೆಲುವಿನಾಟ.

ನೀ ನನಗಾಗಿ ಬದಲಲ್ಲ, ಪರಿವರ್ತನೆಯ ಹೆಜ್ಜೆ ಹಾಕಿದ್ದೀ‌. ಹೆಸರು, ಉಸಿರ ಲಯಗಾರಿಕೆಯಲಿ ಬದಲಾಗಿದ್ದೀಯಾ. ಸಮರ್ಪಣೆ ತನ್ನ ಅರ್ಥ ಹಿಗ್ಗಿಸಿಕೊಂಡಿದೆ. ಲೋಕದ ನಿಂದನೆಗೆ ಹೆದರದೇ ಸುಖಿಸಬೇಕೆಂಬ ವಿಶ್ವಾಸ ಹೆಚ್ಚಿದೆ.
ಪಾಪ ಪುಣ್ಯದ ಲೆಕ್ಕದಾಚೆಗಿನ ಬಾಂಧವ್ಯ ಇದು.
ಈಗ ಪಾಪದ ಪ್ರಶ್ನೆಯಲ್ಲ. ಅದರಾಚೆಗಿನ ವಿಶ್ವಾಸ. ಅಪರೂಪದ ದಿವ್ಯಾನುಭವ ದಕ್ಕಿಸಿಕೊಂಡಿದ್ದೇವೆ.

ಪ್ರಾಮಾಣಿಕತೆ, ಪಾರದರ್ಶಕತೆ, ಸಹನೆ, ಸಹಕಾರ, ತಿಳುವಳಿಕೆ, ಉಸಾಬರಿಗಳಿಂದ ದೂರ ಉಳಿಯುವ ನಿರ್ಲಿಪ್ತತೆ ಇಬ್ಬರಿಗೂ ಅಗತ್ಯ.

ಬರೆದ‌ ಕಾವ್ಯ, ಕತೆ, ಕಾದಂಬರಿ, ಒಲವಿನೋಲೆಗಳು ಇನ್ನೂ ಆಳಕ್ಕಿಳಿಯಲು ಹೇರಳ ಸಮಯ ಬೇಕು.

*ನಾವೇ ಸೃಷ್ಟಿಸಿಕೊಂಡ ವರ್ತುಲವಷ್ಟೇ ಸಾಕು. ಹೊರಗಿನವರ ಓಲೈಸುವುದು ಬೇಡ*.

ನೂರಲ್ಲ‌ ಸಾವಿರಾರು ತಾಸುಗಳ ಮಾತು-ಕತೆ ಗಾಳಿಯಲಿ ತೇಲಿ ಹೋಗಾಬಾರದೆಂಬ ಅರಿವು ನಮ್ಮನೆಚ್ಚರಿಸಲಿ.
ಕಾಲ ಹಿಮ್ಮುಖವಾಗಿ ಚಲಿಸುವುದಿಲ್ಲ.
ಮುಂದೆ ಸಾಗುತಿರಲೇಬೇಕು.

ಹಾಗೆ ಸಾಗುವ ರಭಸದಲಿ ರಮ್ಯವಾದ ಇತಿಹಾಸದ ಸವಿಗಾನವ ಮರೆಯಬಾರದು.
ಭವಿಷ್ಯ ಗೊತ್ತಿಲ್ಲ, ಬೆಳಕೋ, ಕತ್ತಲೋ ಬಂದುದನೆದುರಿಸಬೇಕು.

ಆರೋಗ್ಯ, ಮನಸ್ಥಿತಿ ಸಕಾರಾತ್ಮಕವಾಗಿರಬೇಕು.
ದೇಹ, ದೇಹದೊಳಡಗಿರುವ ಮನಸು ನಿಶ್ಚಲವಾಗಿರಲಿ.
ಕದಲಿ,ಕನಲಿ ಹಲುಬುವುದು ಬೇಡ.

ನಾವು ಅದ್ಭುತವಾದದ್ದೆನ್ನೆಲ್ಲ ದಕ್ಕಿಸಿಕೊಂಡದ್ದು ಸಣ್ಣ ಸಂಗತಿಯಲ್ಲ.
ಇದೊಂದು ದಾಖಲೆ *ಅವನ* ಕೃಪೆ.

ಅವನ ನಿರಾಶೆಗೊಳಿಸಬಾರದು. ಅವನು ಕೊಟ್ಟಿದ್ದೆಲ್ಲ ಎದೆಯ ಗೂಡಲಿ ಕಾಪಿಟ್ಟು ಕಾಯಬೇಕು ಸಹನೆಯಿಂದ.

ನಿನ್ನ ಸಹನೆ, ದೈವೀ ಕಳೆ, ಸಾತ್ವಿಕತೆ, ನಿಷ್ಟೆ, ನಿಯತ್ತು ನನ್ನ ಶರಣಾಗಿಸಿದೆ‌.
ಸೋತು ಶರಣಾಗಿಲ್ಲ, ಒಲಿದು ಒಲಿಸಿಕೊಂಡಿದ್ದು...

*ಒಲವ ವರತೆಯಲಿ ಮೀಯುತಲಿರೋಣ*

ಬಾನಂಗಳದಲಿ ಮಿನುಗತಲೇ ಇರೋಣ...

  *ಸಿದ್ದು ಯಾಪಲಪರವಿ*

No comments:

Post a Comment