*ಶರಣ ಚಳುವಳಿ ಮತ್ತು ಮಹಿಳೆ*
*ಬರಹ-ಧ್ಯಾನ-ಮಿಲನ ಹಾಗೂ ಅಣ್ಣ*
ಮತ್ತೆ ಮತ್ತೆ ಓದಿಸಿಕೊಳುವ ಅಣ್ಣನ ವಚನ *ತಾನುಂಬುವ ಊಟ, ತನ್ನಾಸೆಯ ರತಿಸುಖ, ಮಾಡುವ ಪೂಜೆ...*
ಓದುವಾಗ, ಬರೆಯುವಾಗ, ಧ್ಯಾನಿಸುವಾಗ, ಸುಖಿಸುವಾಗ...
ಮತ್ತೆ ಮತ್ತೆ ಮತ್ತೇರಿಸುವ ಸಾಲುಗಳು.
ವಿಚಾರ ಪತ್ನಿ, ಆಚಾರ ಪತ್ನಿಯರ ಸಂಗದಲಿದ್ದು ಸಂಗಮನ ಕಂಡ ಅಣ್ಣ ನಮಗೊಂದು ಬೆರಗು.
ಏಕದೇವೋಪಾಸನೆಯ ನಿಷ್ಟೆಯ ಅಣ್ಣನಿಗೆ, ಏಕಪತ್ನಿತ್ವದಿಂದ ದೂರ ಸರಿಯಲು ಕಾರಣವೇನೆಂದು ಮನಸು ಆಲೋಚಿಸುತ್ತಲೇ ಇದೆ.
*ತಾನೇ ರೀತಿ ಬಿಟ್ಟ ನಮಗೇನು ಹೇಳುವುದು* ಎಂದು ಕೆಲವು ಅಣ್ಣನ ವಿರೋಧಿಗಳು ಜರಿದಾಗ ಆತಂಕವಾಗುತ್ತಿದ್ದುದು ಸಹಜ. ಆದರೆ ಈಗ ಹಾಗಲ್ಲ. ಅದರಾಚೆ ಏನೋ ಇದೆ.
*ನೀಲಾಂಬಿಕೆ-ಗಂಗಾಂಬಿಕೆ ಅವರ ಸಂಗಮ ನೀಲಗಂಗಾಂಬಿಕೆ ಆಗಿರಬಹುದಾದ ಒಳನೋಟ ಅರಿಯಬೇಕು*.
ಅಣ್ಣನ ವಚನಗಳು ಹಾಗೂ ಶೂನ್ಯ ಸಂಪಾದನೆಯ ಸಂವಾದಗಳಲಿ ಹೊಸ ಹೊಳವು ಹುಡುಕಿ ತೆಗೆದು ಬಗೆಯಬೇಕು.
ಏಕದೇವೋಪಾಸನೆ ನಿಷ್ಟೆಯ ಅಣ್ಣನಿಗೆ ಏಕಪತ್ನಿತ್ವ ಏಕೆ ಬೇಕಾಗಲಿಲ್ಲ ಎಂಬ ಸಣ್ಣ ಅನುಮಾನ ಸಹಜ.
ಈಗ ಕಾಲ ತುಂಬ ಬದಲಾಗಿದೆ. ಇಡೀ ಶರಣ ಸಂಸ್ಕೃತಿಯ ತಲ್ಲಣಗಳು ಲೋಕಕ್ಕೆ ಮಾದರಿ, ಆದರ್ಶಮಯ. ಅತ್ಯಂತ ಸ್ಪಷ್ಟ. ಅಪ್ರತಿಮ, ಅಗೋಚರವೇನು ಅಲ್ಲ. ತರೆದ ಪುಸ್ತಕ, ಕೈಯೊಳಗಿನ ಕನ್ನಡಿ. ವಚನಗಳೇ ಇದಕೆ ಸಾಕ್ಷಿ.
ಇತ್ತೀಚೆಗೆ ಶೂನ್ಯ ಸಂಪಾದನೆಯ ನೈತಿಕ ಪೋಲಿಸಗಿರಿಯನ್ನು ಸಂಕ್ರಮಣ ಪತ್ರಿಕೆಯಲ್ಲ ಡಾ. ವಿಜಯಶ್ರೀ ಸಬರದ ಅರ್ಥಪೂರ್ಣವಾಗಿ ಹುಡುಕಿ ತೆಗೆದಿದ್ದಾರೆ. ಅವರ ಒಳನೋಟದಲಿ ಹೊಸತನವೂ ಇದೆ.
ಹಾಗೆಯೇ ನನ್ನ ಈ ಅನುಮಾನಕ್ಕೂ ನಮ್ಮ ಅಕ್ಕಂದಿರು ಉತ್ತರವ ಹುಡುಕಿ ವಿಚಾರ ಪತ್ನಿತ್ವದ ವಿಶೇಶತೆಯನ್ನು ನಾಡಿಗೆ ಪ್ರಚುರ ಪಡಿಸಲಿ.
ಸಾಮರಸ್ಯದ ಬದುಕಿಗೆ ನಾಡಿಗೆ ಹೆಸರಾದ ಶರಣೆಯರು ವೈಚಾರಿಕವಾಗಿ ಶರಣರನ್ನೂ ಮೀರಿಸಿದವರು.
ಆಯ್ದಕ್ಕಿ ಮಾರಮ್ಮ ಎತ್ತಿದ ಅಕ್ಕಿಯ ಆಸೆ, *ಆಸೆಯೆಂಬುದು ಅರಸಂಗೆ* ಎಂದು ಹೇಳುವ ಮೂಲಕ ರಾಜಸತ್ತೆಗೆ ಇರುವ ದುರಾಸೆಯನ್ನು ಎತ್ತಿ ಹಿಡಿದು ರಾಜರನ್ನೇ ಕೆಣಕುವ ಧೈರ್ಯ ತೋರಿದ್ದಾಳೆ.
ಸಂಗಮಕೆ ಹೋಗಲು ನಿರಾಕರಿಸಿದ ನೀಲಾಂಬಿಕೆ
*ಅಲ್ಲಿರುವ ಸಂಗಮ ಇಲ್ಲಿಯೂ ಇರುವ* ಎಂದು ಹೇಳುವ ಉದಾತ್ತ ನಿಲುವು ಅದ್ಭುತ.
ಶರಣರ ನೂರಾರು ಪ್ರಶ್ನೆಗಳಿಗೆ *ನಿರ್ಭಯವಾಗಿ ಉತ್ತರಿಸಿದ ಮಹಾದೇವಿ ಅಕ್ಕಳ ಎದೆಗಾರಿಕೆ* ಅಸಾಮಾನ್ಯ.
ಅಲ್ಲಮನ ಅಂತಿಮ ಆಯ್ಕೆಯೆಂದರೆ ಅಕ್ಕ. ಶ್ರೇಷ್ಟತೆಯಲಿ ಅಕ್ಕನೇ ಅಂತಿಮ.
ಅಲ್ಲಮ ಮಹಾಜ್ಞಾನಿ, ಎಲ್ಲ ಶರಣರ ಇತಿಮಿತಿಗಳ ಅರಿತವ ಆದರೂ ಅನುಭವ ಮಂಟಪದಲಿ ವಿಚಿತ್ರ ಪ್ರಶ್ನೆಗಳ ಮೂಲಕ ಅಕ್ಕನನ್ನು ಅನಿವಾರ್ಯವಾಗಿ ಗೊತ್ತಿದ್ದೂ ಪ್ರಶ್ನಿಸುತ್ತಾನೆ.
ಹೀಗೆ ಶರಣೆಯರ ಹಿರಿಮೆ ಪುರುಶ ಪ್ರಧಾನ ಮನಸ್ಥಿತಿಯಿಂದ ಅನೇಕ ಮಹತ್ವದ ಸಂಗತಿಗಳು ಹೊರ ಬಂದಿಲ್ಲ.
ಏಕಪತ್ನಿತ್ವ ಅಥವಾ ಏಕಪತಿತ್ವ ಎಂಬುದು ಕೂಡಾ ಮಹಿಳಾ ವಿರೋಧಿ ನಿಲುವು. ಆಚಾರದ ಹೆಸರಲಿ ವಿಚಾರ ಸಾಂಗತ್ಯದಿಂದ ಹೆಣ್ಣಿನ ಆಯ್ಕೆಯನ್ನು ಕಸಿಯುವ ಹುನ್ನಾರ.
ಶೀಲದ ಸೋಂಕು ಗಂಡಿಗೆ ತಗುಲದಂತೆ ಮಾತಾಡುವ ಕುಟಿಲತೆ. ಈಗ ಲಿವಿಂಗ್ ಟುಗೆದರ್ ಜಮಾನಾದಲ್ಲಿ ಇಡೀ ವಚನ ಚಳುವಳಿ ಮತ್ತು ವಚನಕಾರರ ನಿಲುವು ಹೊಸ ಪೀಳಿಗೆಗೆ ಸ್ಪಷ್ಟವಾಗಬೇಕು.
ಮಡಿವಂತಿಕೆಯಿಂದ, ಮೂಲಭೂತವಾದಿಗಳಂತೆ ನೋಡುವುದು ನಿಲ್ಲಬೇಕು. ಯಾರಾದರು ಶರಣರ ಬದುಕನ್ನು ಈ ಹಿನ್ನೆಲೆಯಲ್ಲಿ ಚರ್ಚೆಗೆ ಎತ್ತಿಕೊಂಡರೆ ಸಿಡಿದೇಳಬಾರದು, ಶರಣರಿಗೆ ಅಪಚಾರ ಎಂಬ ಹಾರಾಟವೂ ಸಲ್ಲದು.
ಅಣ್ಣನವರ ಬಹುಪತ್ನಿತ್ವದ ಹಿನ್ನೆಲೆಯನ್ನು ಮರು ವ್ಯಾಖ್ಯಾನಿಸಿ ಆಡಿಕೊಳ್ಳವ ಬಾಯಿ ಮುಚ್ಚಿಸಬೇಕು.
ಆಧುನಿಕ ಲೇಖಕಿಯರು ಇಡೀ ಚಳುವಳಿಯಲ್ಲಿ ಮಹಿಳೆಯರ ಹಿರಿಮೆಯ ಮೇಲೆ ಬೆಳಕು ಚೆಲ್ಲಬೇಕು. ವಚನಗಳು ಹಾಗೂ ಶೂನ್ಯ ಸಂಪಾದನೆಯ ಅಧ್ಯಯನದ ಮೂಲಕ ಉತ್ತರ ಪಡೆಯಬಹುದು ಎಂಬ ಭರವಸೆಯೂ ಇದೆ.
*ನೊಂದವರ ನೋವ ನೋಯದವರೆತ್ತ ಬಲ್ಲರು* ಎಂದು ಅಕ್ಕ ಹೇಳಿರುವದು ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಇಡೀ ಶರಣ ಚಳುವಳಿಯ ಸಂದರ್ಭದಲ್ಲಿ ಮುಂಚೂಣೆಯಲ್ಲಿದ್ದು ನೈತಿಕ ಸ್ಥೈರ್ಯ ಹೆಚ್ಚಿಸಿದವರ ನೋವನ್ನು ನೀವೇ ಮಹಿಳೆಯರು ಹಾಡಿದರೆ ಇನ್ನೂ ಛಂದ.
*ಸಿದ್ದು ಯಾಪಲಪರವಿ*
No comments:
Post a Comment