ಹಿತಕಾರಿ ಯಾತನೆ
ಯಾಕೆ ಮಳ್ಳಿಯ ಹಾಗೆ ಕಳ್ಳ
ನೋಟ ಬೀರಿ ನನ್ನೆದೆಯ
ಗೂಡ ಸೇರಿದೆ
ಹೇಳದೇ ಕೇಳದೇ ಒಮ್ಮೆಲೇ
ಬಿಗಿದಪ್ಪಿ ಎದೆ ಮೇಲೆ
ತಲೆಯಿಟ್ಟು ರೋಮಗಳಲಿ
ಬೆರಳಾಡಿಸಿ ಕಚಗುಳಿ ಇಟ್ಟು
ಕೆಣಕಿದೆ ಯಾಕೆ ಈ ಪೆದ್ದ ಕರಡಿಯ
ಏನೂ ಅರಿಯದ ನಿರುಮ್ಮಳಾಗಿದ್ದ
ಅಮಾಯಕ ಮನಸಿಗೆ
ಪ್ರೇಮದೋಕುಳಿ ರಂಗುರಂಗಿನ
ಕನಸುಗಳ ಸವಾರಿಯಲಿ
ಕಳೆದುಹೋದ ತಲ್ಲಣ.
ಏಕಾಂತದಿ ಕತ್ತಲೆಯಳು
ಬೆತ್ತಲಾಗಿ ಬೆಚ್ಚಗೆ ಕನವರಿಸುವ
ಹೊತ್ತು
ಇನ್ನಿಲ್ಲದ ನೆನಪದಾಳಿಯಲಿ
ರೋಮಾಂಚನ
ಪುಳಕದಲಿ ಗರಿಗೆದರಿದ
ಆಸೆಗಳು ಸಣ್ಣಗೆ ನಡುಕ
ಕೆರಳುವ ಹೆಡೆಯ
ಹೆಡಮುರಿಗೆ ಕಟ್ಟಲಾರೆ
ಕಾಮ-ಪ್ರೇಮದಾಟವಲ್ಲ
ಭಾಷೆಗೂ ಮೀರಿದ ಬಯಕೆಗಳ
ಮೊಂಡಾಟಕೆ ಹಾಕಲಾದೀತೆ
ಕಡಿವಾಣ
ನನ್ನ ನಾ ರಮಿಸಿ ಮೇಲೆದ್ದು
ಹರಿದ ಬೆಳಕಲಿ
ಕಾಣದ ನಕ್ಷತ್ರದ ಹುಡುಕಾಟದ
ಹಳವಂಡ
ಬದುಕ ಬಂಡಿಯನೋಡಿಸುವ
ಹೊಣೆಯಲಿ ಮರೆಯಾದ ಬಾನ
ಚಂದಿರ
ಮತ್ತೆ ಮತ್ತೆ ಕತ್ತಲೊಳು ನೀ ಮಾಡುವ
ದಾಳಿಗೆ ಬೆದರಿ ರಾತ್ರಿ ಬರುವುದು
ಬೇಡವೇ ಬೇಡ ಎಂಬ ಸಾತ್ವಿಕ ಆಸೆಗೆ
ಚಂದ್ರನ ಬೆಳದಿಂಗಳ ಸೆಳೆತ
ಕಾವ್ಯ ಸಿರಿಯ ನೆನಪಿನಾಳದಲಿ
ಕಳೆದು ಸಂಭ್ರಮಿಸುವ ತುಡಿತ
ಹಗಲಿರುಳು ಹಗುರಾಗುವ ಮನಕೆ
ಇರಲಿ ನಿಲ್ಲದ ಮುದ ನೀಡುವ
ಮುಲುಕಾಟ.
---ಸಿದ್ದು ಯಾಪಲಪರವಿ
No comments:
Post a Comment