ಅಪರೂಪದ ಖಯಾಲಿಯ ಭಟ್ಟರ ಅಭಿಮಾನಿ
ಈತನ ಹೆಸರು ರವಿಕುಮಾರ್ ಓದಿದ್ದು ಮೂರನೇ ಕ್ಲಾಸು , ಕಲಿತದ್ದು ತುಂಬಾ ಇದೆ . ಪತ್ರಕರ್ತ ಮಿತ್ರ ವಿಶ್ವೇಶ್ವರ ಭಟ್ಟರ ಅಪ್ಪಟ ಅಭಿಮಾನಿ. ಬದುಕು ಬೇಡವಾಗಿ ಬರಡಾಗಿ ಸಾಯಬೇಕು ಎಂದೆನಿಸಿದಾಗ ಬದುಕಿಸಿದ್ದು ಭಟ್ಟರ ಒಂದು ಲೇಖನ.
ಬರಹಕ್ಕೆ ಇರುವ ತಾಕತ್ತೇ ಅದು. ಭಟ್ಟರ watsapp ಗುಂಪಿನ ಮೂಲಕ ಪರಿಚಯವಾದ ರವಿಕುಮಾರ್ ಭಟ್ಟರ ಕುರಿತು ಲೇಖನ ಕೇಳಿ ಫೋನಾಯಿಸಿದ್ದರು. ಹಿರಿಯ ಪತ್ರಕರ್ತ ಇರಬಹುದು ಅಂದುಕೊಂಡು ಇಂದು ಭೇಟಿ ಆಗಲು ನಿರ್ಧರಿಸಿದೆ. ತಮ್ಮ ಬೈಕಿನ ಮೇಲೆ ನನ್ನನ್ನು ಅವರ ಕಾಯಕ ಲೋಕಕ್ಕೆ ಕರೆದೊಯ್ದಾಗ ವಿಸ್ಮಯ.
ಶೇಷಾದ್ರಿಪುರಂ ರಸ್ತೆ ಬದಿಯಲಿ ಪುಟ್ಟ ಕಾಫಿ , ಬೀಡಿ-ಸಿಗರೇಟು ವ್ಯಾಪಾರ. ದಿನದ ದುಡಿಮೆಯಲ್ಲಿ ಬದುಕು.
ಬಾಲ್ಯದ ಸಂಕಷ್ಟ , ಬಂಧುಗಳ ಸಾವು , ಹೋಟೆಲ್ ನಲ್ಲಿ ಮಾಣಿ ಕೆಲಸ , ಈಗ ಪುಟ್ಟ ವ್ಯಾಪಾರ , ಭಟ್ಟರ ಮೇಲಿನ ಪ್ರೀತಿ , ಓದು-ಬರಹ , ಸಾಮಾಜಿಕ ಜಾಲತಾಣಗಳಲ್ಲಿನ ಒಡನಾಟ ಎಲ್ಲವೂ ಅನನ್ಯ.
ಅನಿರೀಕ್ಷಿತವಾದ ಹೊಡೆತಕೆ ಬದುಕು ಕಲಿಸಿದ ಪಾಠ ವಿವರಿಸಿದ .
ದುಡಿದು ಗಳಿಸಿ ದೊಡ್ಡವನಾಗಬೇಕು ಎಂಬ ಆಸೆಯಿರದ ಪ್ರೇಮಮಯಿ. ಅನಾಥ ಮಕ್ಕಳಿಗೆ ನೆರವು , ನಿತ್ಯ ಪುಣ್ಯದ ಕೆಲಸಗಳಲ್ಲಿ ನಂಬಿಕೆ.
ಇನ್ನೊಂದು ವಿಚಿತ್ರ ಸ್ವಭಾವ ಕೇಳಿ ಮೂಕನಾದೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಯಾರಾದರೂ ವಯಸ್ಸಾದವರು , ಹೆಣ್ಣುಮಕ್ಕಳು ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗಿ ತಳ್ಳುತ್ತ ಅಸಹಾಯಕ ಸ್ಥಿತಿಯಲ್ಲಿರುವುದನ್ನು ನೋಡಿದರೆ , ತಕ್ಷಣ ನೀಡಲೆಂದು ತನ್ನ ಗಾಡಿಯ ಡಿಕ್ಕಿಯಲ್ಲಿ 200 ml ಪೆಟ್ರೋಲ್ ಇಟ್ಟುಕೊಂಡಿರುತ್ತಾನೆ. ತಕ್ಷಣ ಅವರಿಗೆ ನೀಡಿ thanks ಹೇಳುವುದರೊಳಗೆ ಮುಖಕ್ಕೆ ಹಾಕಿಕೊಂಡ ಹೆಲ್ಮೆಟ್ ತೆಗೆಯದೇ ಮಾಯವಾಗುವ ಬಗೆ ಕೇಳಿ ಮೂಕನಾದೆ.
ನಾವು so called educated ಬದುಕಿನ ಸಣ್ಣ-ಪುಟ್ಟ ಸಂಗತಿಗಳನ್ನು ಗಮನಿಸಿರುವುದಿಲ್ಲ. ಅಪ್ಪಿತಪ್ಪಿ ಉಪಕಾರ ಮಾಡಿದರೆ ಬೀಗಿ ಪೋಜು ಕೊಡುತ್ತೇವೆ. ಮನೆ ಮುಟ್ಟಿದ ಮೇಲೆ ಗಾಡಿ ತಳ್ಳಿಕೊಂಡು ಹೋಗುತ್ತಿದ್ದವರು ಪೆಟ್ರೋಲ್ ಹಾಕಿಸುವಾಗಲೆಲ್ಲ ಈ ಅಪರಿಚಿತ ಪುಣ್ಯಾತ್ಮನನ್ನು ಹಾರೈಸುತ್ತಾರೆ .
' ಅವರ ಹಾರೈಕೆ ನೂರು ಕೋಟಿಗೆ ಸಮ ಸರ್ ' ಎಂದಾಗ ಏನೂ ಹೇಳಲಾಗದೆ ಒದ್ದಾಡಿದೆ. ಮನೆಗೆ ಕರೆದೊಯ್ದು ಕಾಫಿ ಕುಡಿಸಿ ಅಕ್ಷರ ಪ್ರೇಮ ಹಾಗೂ ಅದಕ್ಕೆ ಪ್ರೇರಣೆಯಾದ ಭಟ್ಟರ ಕುರಿತು ಮಾತನಾಡಿದ. ನನ್ನ ಕವಿತೆ ಹಾಗೂ ಮನದ ಮಾತು ಕುರಿತು ಪ್ರಬುದ್ಧ ವಿಮರ್ಶೆ ಮಾಡಿದಾಗ ನಾನು ತುಂಬಾ ಕಲಿಯುವದಿದೆ ಅನಿಸಿತು.
' ಜೀವನದ ಮೌಲ್ಯಗಳನ್ನು ಯಾರಿಂದ ಯಾವಾಗ ಬೇಕಾದರೂ ಕಲಿಯುತ್ತೇವೆ ಎಂಬ ಸತ್ಯ ಹೊಳೆಯಿತು . ಮನಸು ಧ್ಯಾನಸ್ಥ ಸ್ಥಿತಿ ತಲುಪಿ ಸುಮ್ಮನೆ ರೂಮಿಗೆ ಬಂದೆ. ಇಂತಹ ಅಪರೂಪದ ಗೆಳಯನಿಗೆ ಪ್ರೇರಣೆ ನೀಡಿದ ವಿಶ್ವೇಶ್ವರ ಭಟ್ಟರಿಗೆ thanks ಹೇಳದಿರಲಾದೀತೆ ?
---ಸಿದ್ದು ಯಾಪಲಪರವಿ
No comments:
Post a Comment