ಇಳಿ ಹೊತ್ತಲಿ ಅವಳ ಸಹನೆ
ಗಾಢನಿದ್ರೆಯಲಿ ಕಣ್ಣು ಬಿಟ್ಟಾಗ ಮೆತ್ತನೆ
ತೊಡೆ ಮೇಲಿದ್ದ ತಲೆ ಸವರುವ ಮಮತೆ
ಏದುರ ಲಯಕೆ ಬೆದರಿದೆದೆಯ
ರೋಮಗಳಲಿ ಬೆರಳ ಮೀಟುಗಾನ
ನೆನಪಾದ ಅವ್ವನ ಮಡಿಲು ಆದರೀಕೆ
ಸಂಗಾತಿ ಬಾಳ ಪಯಣದಲಿ ಸಾಗುವಾಗ
ಬರೀ ಹೂ ಇರಲಿಲ್ಲ ಮುಳ್ಳುಗಳಿಗಿವಳು
ಬೆದರಲೂ ಇಲ್ಲ
ಈಗ ದೇಹ ದಣಿದ ಕಾರಣದಿ
ಅರಳಿ ಕೆರಳದ ಹಟಕೆ ದಿವ್ಯಮೌನ
ತಿಣುಕಿ ತಿಕ್ಕಿ ಹೊರಳಾಡಿದರೂ
ನಿಮಿರದ ಪೌರುಶಕೀಗ ಅವಮಾನ
ಆದರೀಕೆಗಿಲ್ಲ ಬಿಗುಮಾನ ನಸುನಗುತ
ಮೈದಡವಿ ಮುದ್ದು ಮಾಡಿ ರಮಿಸಿ
ಬಿಗಿದಪ್ಪಿ ಎದೆ ಸೀಳಲಿ ಅಡಗಿಸಿಕೊಂಡಾಗ
ಸ್ವರ್ಗಸುಖದಾಲಿಂಗನ ಇದುವೇ ಅವಳ
ಸಹನೆಯ ಬಿಸಿಯುಸಿರ ಸವಿಗಾನ.
ಸಿದ್ದು ಯಾಪಲಪರವಿ
No comments:
Post a Comment