ಸಂಗಾತ ಮತ್ತು ಹೆಮಿಂಗ್ವೆ ಮತ್ತೂ ಬರಹ
ಈಗ ಸಂಗಾತ ಸಾಹಿತ್ಯ ಪತ್ರಿಕೆಯಲ್ಲಿ ಅರ್ನೆಸ್ಟ್ ಹೆಮಿಂಗ್ವೇನ ಸಂದರ್ಶನದ ಅನುವಾದ ಓದಿದೆ. ಬದುಕು-ಬರಹ ಬೇರೆ ಅಲ್ಲ ಎಂದು ನಂಬಿದ್ದ ನೇರ ಬರಹಗಾರನ ಮಾತುಗಳು ವಿಚಲಿತಗೊಳಿಸಿದವು. ಎಂ.ಎ. ಅಧ್ಯಯನದ ಕಾಲದಲ್ಲಿ ಬರೀ ಓದಿದ ನೆನಪು.
ಆದರೆ ಈಗ ಓದುವದು ಪೂರ್ಣ ಪ್ರಮಾಣದ ಅರಿವಿಗೆ, ಪರೀಕ್ಷೆಗಾಗಿ ಅಲ್ಲ.
ಈಗಲೂ ಬದುಕಿನ ಪರೀಕ್ಷೆ.
ತುಂಬ ಸುದೀರ್ಘ ಎನಿಸುವ ಸಂದರ್ಶನ ಒಂದೇ ಓದಿಗೆ ದಕ್ಕುವುದಿಲ್ಲವಾದರೂ ದಕ್ಕಿಸಿಕೊಳ್ಳುವ ಅನಿವಾರ್ಯತೆಯಿಂದ ಉಸಿರು ಬಿಗಿ ಹಿಡಿದಿ ಓದಿ ದಕ್ಕಿಸಿಕೊಂಡೆ.
ಸಾಹಿತ್ಯದ ವಿದ್ಯಾರ್ಥಿಯಾಗಿ ಬರೀ ಪಾಠ-ಪ್ರವಚಗಳಲಿ ಮುಕ್ಕಾಲು ಆಯುಷ್ಯ ಕಳೆದು ಈಗ ಗಟ್ಟಿಯಾಗಿ ಬರೆಯಲು ನಿರ್ಧರಿಸಿದ ಹೊತ್ತು ಹೆಮಿಂಗ್ವೇ ಸಿಕ್ಕಾಗ ಕಳೆದುಹೋದೆ.
ಎಲ್ಲ ನಿರಾಕರಿಸಿ ಬರೀ ಏಕಾಂತ ಸ್ವೀಕರಿಸಿದ ಈ ಗಳಿಗೆಯಲಿ ಅನೇಕರಿಗೆ ಒಗಟಾಗಿದ್ದೆ. ಬರೀ ಮೊಬೈಲ್ ಮೂಲಕ ದಿನ ಏನಾದರು ಬರೆದು ಸೋಸಿಯಲ್ ಮಿಡಿಯಾದಂತ
ಅನ್ ಸೀರಿಯಸ್ ನಲ್ಲಿ ತೇಲಿ ಬಿಡುವ ಅನಿವಾರ್ಯತೆ.
ಆದರೂ ಇದೇ ಮಿಡಿಯಾದಲಿ ಕೊಂಚ ಸೀರಿಯಸ್ ಇದ್ದವರು ಸಿಕ್ಕಿದ್ದಾರೆ. ಸಿಕ್ಕವರನು ಎಳೆದಾಡಿ, ಕೊಸರಾಡಿ, ಜಗಳಾಡಿ, ತಿದ್ದಿ-ತೀಡಿ ದಕ್ಕಿಸಿಕೊಳ್ಳುವ ಧಾವಂತವೂ ಇದೆ.
ಆಧುನಿಕ ಬರಹದ ಭರಾಟೆಯಲಿ ಬರೀ ಮುಖವಾಡ, ಬದುಕಿಗೂ ಬರಹಕ್ಕೂ ಸಂಬಂಧವೇ ಇಲ್ಲ. ಒಂದು ಸಣ್ಣ ಇರುಸು ಮುರುಸಾಗುವ ಪ್ರತಿಮೆ ಬಳಸಿದರೆ ಸಾಕು ಮಡಿವಂತರು ಮೂಗು ಮುರಿದು, ಮೂಗು ಮುಚ್ಚಿಕೊಂಡು ದೂರ ಸರಿದು ಬಿಡುತ್ತಾರೆ. ಬದುಕಿನ ಅನುಭವಗಳಿಗೆ ಪ್ರಾಮಾಣಿಕ ಅಭಿವ್ಯಕ್ತಿ ಕೊಡಲು ಭಯ. ಇಮೇಜ್ ಕೆಟ್ಟರೆ ಹೇಗೆಂಬ ಸೋಗಲಾಡಿತನ.
“ಅಯ್ಯೋ ಇಷ್ಟೊಂದು ನೇರ ಬರೆದರೆ ಹೆಂಗೆ ಸರ್ “ ಎಂಬ ಕಾಳಜಿ.
ಇನ್ನೇನು ಅಬ್ಬಬ್ಬಾ ಅಂದರೆ ಹತ್ತಾರು ಕಾಲ ಬದುಕಬಹುದು ಈಗಲೂ ಇಮೇಜ್ ಎಂಬ ಭೂತದ ಭಯ.
ಮನಸಾ ಇಚ್ಛೆ ,ಮುಕ್ತವಾಗಿ ಬರೆದು, ಬದುಕಿ ನೂರಾರು ಬರಹಗಾರರನು ಸೃಷ್ಟಿಸಿದ ಮೇಷ್ಟ್ರು ಅಂತವರು ಈಗ ಸಿಗುವುದೇ ಇಲ್ಲ.
ಬರೀ ಜಾತಿ, ಗುಂಪುಗಾರಿಕೆಯ ಮಾಧ್ಯಮಗಳ ಭರಾಟೆಯಲಿ ನಿಜವಾದ ಬರಹಗಾರ ನಾಪತ್ತೆ.
ಬ್ಲಾಗ್, ಸಾಮಾಜಿಕ ತಾಣಗಳ ಆಶ್ರಯಿಸುವ ಅನಿವಾರ್ಯತೆ.
ಸಂಗಾತದಂತಹ ಸಾಹಿತ್ಯ ಪತ್ರಿಕೆ ಗುರುತಿಸಿರುವ ಹೊಸ ಬರಹಗಾರರ ಹುಮ್ಮಸ್ಸನ್ನು ಕಂಡು ಸಂತೋಷವಾಗಿದೆ.
ಸೊಸಿಯಲ್ ಮೀಡಿಯಾದ ಮುಕ್ತ ಅವಕಾಶಗಳಿಂದ ಹೊಸಬರು ವೇಗವಾಗಿ ಬೆಳೆಯುತ್ತಿದ್ದಾರೆ.
ಹಳಬರೂ ಅಲ್ಲದ, ಹೊಸಬರೂ ಅಲ್ಲದ ನನ್ನಂತ ಮದ್ಯಮ ವಯಸ್ಕರಿಗೆ ಅನೇಕ ಸವಾಲುಗಳು.
ಈಗ ಬದುಕಿದಂತೆ ಬರೆಯುವ ಅಗತ್ಯ ಮತ್ತು ಅನಿವಾರ್ಯತೆ.
ಇಲ್ಲದಿದ್ದರೆ ಹೇಳ ಹೆಸರಿಲ್ಲದಂತೆ ಕಾಲನ ಹೊಡೆತದಲಿ ಕಳೆದು ಹೋಗುತ್ತೇವೆ.
ಪ್ರಾಮಾಣಿಕ ಬರಹ ಕೊಡುವ ತೀವ್ರ ಸಂವೇದನೆಯ ರಸಾನುಭವದ ಅನುಭೂತಿಯನು ಅನುಭವಿಸಿ ಖುಷಿಪಡಬೇಕು. ಓಲೈಕೆ, ಮುಜುಗರ ಬಿಟ್ಟು ಇನ್ನೂ ಹೆಚ್ಚು ಪ್ರಾಂಜಲವಾಗಿ ಬರೆಯಬೇಕು.
ಪದ್ಯ,ಗದ್ಯ, ಗಪದ್ಯ, ಕತೆ, ಪ್ರಬಂಧ, ಕಾದಂಬರಿ, ಅಂಕಣಗಳು ಯಾವುದೇ ಪ್ರಕಾರವಿದ್ದರೂ ರಸವತ್ತಾಗಿದ್ದರೆ ಓದುಗರು ಮುಕ್ತವಾಗಿ ಸ್ವೀಕರಿಸಿ ಮೇಲೆತ್ತುತ್ತಾರೆ. ಕ್ವಾಲಿಟಿ ಇರದಿದ್ದರೆ ಯಾವ ಲಾಬಿಯೂ ಕೆಲಸ ಮಾಡುವುದಿಲ್ಲ.
ಹೊಸ ಪ್ರಯೋಗಳ ಮೂಲಕ ನಾವು ತೆಗೆದುಕೊಳ್ಳುವ ರಿಸ್ಕನ್ನು ಜನ ಗೌರವಿಸುತ್ತಾರೆ. ಆಡಿಕೊಳ್ಳುವವರು ಆಡಿಕೊಳ್ಳುತ್ತಾರೆ. ಜೋಡಿಸುವವರು ಜೋಡಿಸಿಕೊಳ್ಳುತ್ತಾರೆ. ಅದನ್ನು ಯಾರೂ ತಡೆಯಲಾಗದು.
ಬಡತನವ ಹಾಸಿ ಉಂಡ ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ ಪ್ರತಿ ನಿತ್ಯದ ಅನುಭವಗಳ ಕವಿತೆಗಳಾಗಿ ಹಾಡಿ ದುಃಖ ಮರೆತರು.
ಕಲ್ಯಾಣ ಕಾಲದ ಶರಣರು ತಮ್ಮ ಅನುಭವಗಳ ವಚನಗಳ ಮೂಲಕ ಪ್ರಾಮಾಣಿಕವಾಗಿ ದಾಖಲಿಸಿದ್ದರಿಂದ ಆ ಚಳುವಳಿ ಇನ್ನೂ ಜೀವಂತವಾಗಿದೆ.
ಇಂಗ್ಲೆಂಡ್, ಅಮೇರಿಕಾದ ಬರಹಗಾರರಿಗಿಂತಲೂ ಹೆಚ್ಚು ಮುಕ್ತರು ನಮ್ಮ ಶರಣರು.
ಕನ್ನಡದ ದುರಂತ, ವಚನಕಾರರ ನೆರಳಲಿ ಬೆಳೆದ ನಾವು ಸಂಕೋಚದಿಂದ ಹೊರ ಬಂದಿಲ್ಲ.
ಯುವ ಮನಸುಗಳಿಗೆ ಹುರಿದುಂಬಿಸಿ ಬರೆಯಲು ಉತ್ತೇಜಿಸಿ ನಾವೂ ಮುಕ್ತವಾಗಿ ಬರೆಯೋಣ, ಬೆರೆಯೋಣ ಎಂಬ ಮನಸ್ಥಿತಿ ನಮ್ಮದಾಗಬೇಕು.
ಕಟು ವಿಮರ್ಶೆಯನು ಪ್ರಾಂಜಲವಾಗಿ ಸ್ವೀಕರಿಸುವ ಸ್ಪೋರ್ಟಿವ್ ಗುಣಧರ್ಮವಿರಬೇಕು.
ಎಡ-ಬಲಗಳ ಅತಿರೇಕ ಸಾಹಿತ್ಯದಲ್ಲಿ ನುಗ್ಗಬಾರದು. ವೈಯಕ್ತಿಕವಾಗಿ ನಮ್ಮ ಸಿದ್ಧಾಂತ ನಮಗೆ ಮುಖ್ಯ. ಆದರೆ ಇನ್ನೊಬ್ಬರ ಸಿದ್ಧಾಂತವನ್ನು ವಿಕಾರವಿಲ್ಲದಂತೆ ವಿಮರ್ಶಿಸಬೇಕು. ಬೇಡವಾದರೆ ಸುಮ್ಮನಿರಬೇಕು.
ನಾವು ಎಡದ ಪರ, ಬಲದ ಪರ ಅನ್ನೋದು ನಮ್ಮ ಗುಣಧರ್ಮದ ಮೇಲೆ ಅವಲಂಬಿತ. ಅದನ್ನು ಸರಿ ತಪ್ಪುಗಳ ಮೂಲಕ ನಾವೇ ಪರಾಮರ್ಶನ ಮಾಡಿ ಒಪ್ಪಿಕೊಳ್ಳಬೇಕು.
ಇನ್ನೊಬ್ಬರು ತಿವಿಯುವವರೆಗೆ ಸುಮ್ಮನಿರಬಾರದು. ಎಸ್.ಎಲ್. ಬೈರಪ್ಪ ಅವರ ಬಲಪರ ನಿಲುವುಗೊತ್ತಿದ್ದರೂ, ಎಡಪರ ಧೊರಣೆಯವರು ಅವರನ್ನು ಓದುತ್ತಾರೆ. ಓದಿನ ಗುಣಧರ್ಮವದು.
ಓದಿ ಟೀಕಿಸಬೇಕು. ಟೀಕಿಸಿದರೂ ತಡೆದುಕೊಳ್ಳಬೇಕು. ಕಟು ವಿಮರ್ಶೆ ಒಪ್ಪಿಕೊಂಡಾಗಿ ದೊಡ್ಡವರಾಗಿ ಬೆಳೆಯುವ ಭರವಸೆ ಹೆಚ್ಚು.
ಗಂಡು-ಹೆಣ್ಣಿನ ಸಂಬಂಧದ ಸೂಕ್ಷ್ಮತೆಯನ್ನು ಉಡಾಫೆ ಮಾಡದೇ, ಅವರ ಪಾಡಿಗೆ ಅವರನ್ನು ಬದುಕಲು ಬಿಡಬೇಕು.
ಹಗುರಾಗಿ ಮಾತಾಡಬಾರದು.
ಜಾತಿ,ಲಿಂಗಗಳ ತರತಮ ಇನ್ನೂ ಅಳಿಯಬೇಕು.
ಶೇಕ್ಸ ಪಿಯರ್, ಎಮರ್ಸನ್, ಥೋರೋ,ಗೈ ದೇ ಮಾಪಸಾ ಇನ್ನೂ ಅನೇಕ ಶರಣರು ನಮ್ಮೊಂದಿಗಿದ್ದು ಕೈ ಹಿಡಿದು ನಡೆಸುತ್ತಾರೆ.
ಓದಲು ಬೇಕಾದಷ್ಟು ಮಾದರಿಗಳಿವೆ, ಸ್ವಚ್ಛಂದ ಹಾರುವ ಹಕ್ಕಿಯಂತೆ ಭಾವಕೋಶದಲಿ ವಿಹರಿಸುತ ಬರೆಯುವ ಆತ್ಮಾನಂದ.
“ಬರಹವೆಂಬುದು ಪ್ರೇಯೆಸಿಯೊಂದಿಗೆ ಸುಖಿಸಿದಂತೆ, ಮತ್ತೆ ಮತ್ತೆ ಬೇಕೆನಿಸುವ ಮತ್ತು” ಎಷ್ಟು ಚಂದದ ಸಾಲುಗಳು ಹೆಮಿಂಗ್ವೆ.
ಎಂದೋ ದೈಹಿಕವಾಗಿ ಅಗಲಿದ ಲೇಖಕರು, ತಮ್ಮ ಬರಹಗಳ ಮೂಲಕ ಇನ್ನೂ ಇಲ್ಲಿಯೇ ನಮ್ಮೊಳಗೆ ಇದ್ದಾರೆ.
“ನೀನು ಬಾ ಸಖೀ, ಬನ್ನಿ ಸಂಗಾತಿಗಳೇ ಬರೆಯುವ, ಹದವಾಗಿ ಬೆರೆಯುವ ಮಿಲನ ಸುಖದಲಿ ಧ್ಯಾನಸ್ಥರಾಗಲು..
ಸಿದ್ದು ಯಾಪಲಪರವಿ.
No comments:
Post a Comment