*ಮಗಳ ಹಾಸ್ಟೆಲ್ ಪಯಣ*
ಈಕೆ ನನ್ನವ್ವನ ಪಡಿಯಚ್ಚು ಪ್ರೀತಿಯ ಸೆಲೆ ವಾತ್ಸಲ್ಯದ ನೆಲೆ
ಯುರೋಪಿನಲ್ಲಿ ಎಲ್ಲಂದರಲ್ಲಿ ಅಪ್ಪಿ ಮುದ್ದಾಡುವುದ ಕಂಡು ಬೆಚ್ಚಿ ಬಿದ್ದು ಬೆರಗಾಗುತ್ತಿದ್ದ ಹಳ್ಳಿ ಹೈದ ನಾನು
ವಿಕಾರವಿಲ್ಲದೆ ಅಪ್ಯಾಯಮಾನವಾಗಿ ಅಪ್ಪಿ ಮುದ್ದಿಸುವ ಮಹದಾನಂದ ಹೇಳಿಕೊಟ್ಟ ದೊಡ್ಡ ಕೂಸು
ಹೆಣ್ಣು ಹಾಗೆ ಹೀಗೆ ಅಬಲೆಯಲ್ಲ ಸಬಲೆ ಎಂದು ಬರೀ ಭಾಷಣ ಬಿಗಿದರೆ ಸಾಲದು ಆಕೆಗೂ ಹೃದಯವಿದೆ , ಬೇಕಾಗಿರುವುದು ಪ್ರೀತಿಯ ಹಿತನುಡಿ ಎಂದರುಹಿದ ಗುರುಮಾತೆ
ಬಿಡುವಾದಾಗಲೆಲ್ಲ ನನ್ನೆದೆಯ ಗೂಡಲಿ ಬೆಚ್ಚಗೆ ಮಲಗಿ ಪಪ್ಪಾ ಎಂದು ಗುನುಗುವಾಗ ಹಕ್ಕಿಯ ಕಲರವದ ಮಧುರ ಸಂಗೀತ
ನನ್ನ ಮೇಲಿನ ಪ್ರೇಮದ ಹಕ್ಕೊತ್ತಾಯಕ್ಕೆ ಆಕೆಯ ಅವ್ವನೊಡನೆ ಸದಾ ಪೈಪೋಟಿ
ತನಗೇ ಎಲ್ಲ ಇರಲಿ ಎಂಬ ಮುಗ್ಧ ಹಟ
ನಿದ್ದೆಯ ಮಂಪರಿನಲಿ ಎಚ್ಚರಾದಾಗ ನನಗಾಗಿ ತಡಕಾಟ ಬೆಚ್ಚಗಾಗಲು ಚಾದಾರು ಹೊಚ್ಚಿ ಎಡತೋಳ ದಿಂಬಾಗಿಸಿ ನಿದ್ದೆಗೆ ಜಾರಿದಾಗ ಅಸೀಮಾನಂದದ ದಿವ್ಯಾನುಭವ
ಮಗಳು-ಅವ್ವ ಬೇರೆ ಅಲ್ಲ ಎಂಬ ಹೊಸದಲ್ಲದ ಸತ್ಯದ ಸಾರವ ನನಗೆ ಮತ್ತೊಮ್ಮೆ ನೆನಪಿಸಿದಾಕೆ
ಇಂದು ಕಾಲೇಜು , ಮುಂದೊಂದು ದಿನ ಗಂಡ-ಮಕ್ಕಳು ಎಂದು ನಿನ್ನದೇ ಲೋಕದಲಿ ನೀ ಮಾಯವಾದರೂ ಎಂದಿಗೂ ನನ್ನ ಮನದಾಳದಿಂದ ಮಾಯವಾಗದ ಮುದ್ದು ಕಂದ.
*ಸಿದ್ದು ಯಾಪಲಪರವಿ*
No comments:
Post a Comment