Monday, January 27, 2014

ನೆಲದ ಮರೆಯ ನಿಧಾನ


ಹುಡುಕಾಟ ಹುಡುಕಾಟ ಕಳೆದು
ಪಡೆದುಕೊಳ್ಳುವ ತಡಕಾಟ
ಅಗೆದಂತೆಲ್ಲ ನೆಗೆಯುವ ನಿಧಿಗಾಗಿ
ಇಲ್ಲಿರುವವರದೆಲ್ಲ ಅವರಷ್ಟಕ್ಕೆ ಅವರೇ
ಕೂಡಿಸಿ-ಕಳೆವ ಲೆಕ್ಕದಾಟ
ನಾನೊಂದ
ಬಿಂದು
ಗರಗರನೆ ತಿರುತಿರುಗಿ ಅಲೆ
ದಂತೆ ಎಲ್ಲಾ ತಲೆ ತುಂಬ ಶೂನ್ಯ
ಯಾರನೂ ಅಳೆಯುವದು
ಹಳಿಯುವುದು ಸಲ್ಲ
ಜಗದ ವ್ಯಾಪಾರದಲಿ
ಈ ಜಗ ಜಾತ್ರೆಯಲಿ
ದೇವರ ತೇರನೆಳೆಯುವ ಹಗ್ಗದಾಟದ
ಮೂಕ ಸ್ಪರ್ಧೆಯಲಿ ಸಾಗುತ್ತಿಲ್ಲ ತೇರು
ಜಾರುತಿದೆ ಕೈ - ಹಗ್ಗ
ಮನದ ತುಂಬೆಲ್ಲಾ ಹಿಗ್ಗಾ-ಮುಗ್ಗ
ಭಾವನೆಗಳ ಕಗ್ಗ
ಬಳಸಿ ಬಿಸಾಡಿದವರು ಹುಡುಕುತ್ತಾರೆ
ನನ್ನ ಕೆಳಗೆ
ತಮ್ಮ ಕೆಳಗೆ ಅಪ್ಪಚ್ಚಿಯಾಗಿಲ್ಲ
ಇನ್ನೂ ಯಾಕೆ ಹೀಗೆ ಎಂದು?
ಅಂದು
ಹೇಳಿದವರೆಲ್ಲರ ಕಥೆ ಕೇಳಿ ನಂಬಿದ್ದೇನೆ.
ಬಿಕ್ಕಿದ್ದೇನೆ ಅವರ ದು:ಖಕೆ
ಹಳ್ಳಕೆ ಬಿದ್ದು ಅವರಿವರು ನಕ್ಕಾಗ.
ಇಂದು
ಅರೆಪ್ರಜ್ಞೆಯಲಿ ಎಚ್ಚರಾಗಿದ್ದೇನೆ 

ಹೇಳುವವರ ಕಥೆ ಕೇಳುತ್ತೇನೆ

ಅಂದಿನಂತೆ ನಂಬಿ ನಟಿಸುತ್ತೇನೆ - ಪೆದ್ದನಾನಾಗದೆ
ಇದ್ದೂ ಇರುವದ ಕಂಡು
ಭಾರಿ ಕಳ್ಳ ದರೋಡೆಕೋರ ಕದಿಯುತ್ತೇನೆ
ಅವರಿವರ ಭಾವನೆಗಳ ಅಂದುಕೊಳ್ಳುತ್ತಾರೆ
ನಾನು ಅಡಗಿಸಿಟ್ಟ ಗಂಟಿಗಾಗಿ
ಹಲವರು ಹಲುಬುತ್ತಾರೆ,
ಬೇಯದೆ ಕುದಿಯುತ್ತಾರೆ,
ನಿಂದಿಸುತ್ತಾರೆ, ಅವಿವೇಕಿಯೆಂದು ಜರಿಯುತ್ತಾರೆ
ಬೆನ್ನ ಹಿಂದೆ.
ಥಟ್ಟನೆ
ಎದುರಿಗೆ ಕಂಡರೆ ಅದೇ ನಗು, ನಗುವಿನಂತೆ
ಮಾತು, ಅದೇ ಪ್ರೀತಿ.
ನಂಬಿದಂತೆ ನಾ ನಟಿಸಿದರೆ
ಆನೆ ಸೊಂಡಿಯಲಿ ಇರುವೆ.
ಹಗಲ ತುಂಬೆಲ್ಲ ಬಣ್ಣ ಬಣ್ಣದ ಕನಸುಗಳು
ರಾತ್ರಿ ಜಾರುತಿದೆ ಬಣ್ಣ ಕಳೆದು
ಕಪ್ಪು ಬಿಳುಪಿನ ಚಿತ್ತಾರ
ಅಂತೆಯೇ ಹಗಲಿದ್ದ ಸಂಭ್ರಮ ರಾತ್ರಿ
ಮಂಗಮಾಯ........
ಜೀವ ಪಯಣದ ಜಾಲದಲಿ ಸಿಕ್ಕೂ ಸಿಗದಂತೆ
ಇದ್ದೂ ಇರದಂತೆ ಮಾಡಿಯೂ ಮಾಡದಂತೆ
ನೋಡಿಯೂ ನೋಡದಂತೆ
ಮಾಡುವ ಮಾಟದಲಿ ನಾನಿರದಂತೆ ಇರಲೆತ್ನಿಸುತ
ಜೀವದಾದಿಯಲಿ ಹುಡುಕುತ್ತೇನೆ.
ಹುಡುಕುತ್ತೇನೆ ಕಂಗಾಲಾಗದೆ
ನಿಧಾನದಿ ನಿಧಾನದಿ ಎಲ್ಲೋ
ಎಲ್ಲೆಲ್ಲೋ ನನಗಾಗಿ ಅಡಗಿರುವ ನಿಧಿಗಾಗಿ
ಕಬ್ಬಲಡಗಿರುವ ಬೆಲ್ಲದಂತೆ ನಾ
ನೆಲದ ಮರೆಯ ನಿಧಾನದಂತೆ.

No comments:

Post a Comment