ಮೈಮನಗಳ ಕಾತರಿಸುವ
ಜೀವಸೆಲೆ
ಬಳಸಿದಷ್ಟು ಬಳಕೆಯಾಗುವ
ನಿತ್ಯ ಶ್ಯಾಮಲೆ
ಬಾನು-ಭುವಿ
ಬೆಳ್ಳಿ-ಚುಕ್ಕೆಗಳ ಮಿಲನೋತ್ಸವದ ನಿತ್ಯ ಸಾಕ್ಷಿ
ನಿಂತಲ್ಲೆ ನಿಲ್ಲಲಾರದೆ ಹರಿಯುವ
ಜಂಗಮ ಶೀಲೆ
ಹಕ್ಕಿಗಳು ಗೂಡು ಬಿಚ್ಚುವ ಮುನ್ನ
ಲಲನೆಯರ ಬಿಂದಿಗೆಯ ಬಂದಿಯಾಗಿ
ದಾಹ ತಣಿಸುವ ನಿರ್ಮಲ ನೀರು
ಹರಿದ ಬೆಳಕಿಗೆ ತೆರೆವ ಜಗಕೆ
ಎಮ್ಮೆ-ಕೋಣಗಳ ಮೈದಾಳಿಗೆ
ಚಲ್ಲಾಟವಾಡುವೆ
ನನ್ನ ಎದೆ ಬಗೆದು ಕ್ಯಾಕರಿಸಿ-ಹೂಂಕರಿಸಿ
ಮೈಮಾಟದ ನನ್ನಲಿ ಅದ್ದಿ ತಿಕ್ಕಿದರೂ
ಪುಳಕಗೊಳ್ಳದ ನಿರ್ಲಿಪ್ತ ನಾ
ಮಾನವಂತರು ಬಟ್ಟಬಯಲಲಿ
ಬಿಚ್ಚಿಡದ ಬಯಕೆಯನು
ನನ್ನೊಳು ಧುಮುಕಿ
ಬಿಡುತ್ತಾರೆ ಖುಷಿಯ ನಿಟ್ಟುಸಿರು
ನನ್ನೊಳಗೆ ಹೇಸಿ ಮಾಡಿದವರು
ನನ್ನನೆ ಸೇವಿಸಿ ಪೂಜಿಸಿ-ನಮಿಸಿ
ಹವಣಿಸುವರು
ತಾವೆಂದು ಪಡೆಯದ ಮೋಕ್ಷಕೆ
ಹಿಂಸೆ-ಅನಾಚಾರಗಳ ಮೂಕ ಸಾಕ್ಷಿಗೆ
ನಿಸ್ತೇಜನಾಗದೇ;
ದಟ್ಟ ತಾತ್ರಿಯಲಿ ಮೌನದ
ಸುಳಿಯಲಿ ಶಾಂತವಾಗಿ ಹರಿಯುತ್ತಾ
ಹರವುತ್ತಾ ಸಾಗಿದ್ದೇನೆ
ಮೈಥುನದಿ ಕೊಳೆಯಾಗಿಸಿದವರ ಹಳಿಯದೆ
ಹಳವಂಡದಿ ಹಳಹಳಿಸದೆ
ಬೊಗಸೆಯಲಿ ನನ್ನ ಪಡೆದು
ಧನ್ಯತೆಯಲಿ ಬಂಧಿಸಿ
ಬಿಂದಿಗೆಯಲಿ ಬಂಧಿಸಿ ಪೂಜಿಸುವ ನಾರಿ
ನಿತ್ಯ ನನ್ನೊಳು ನನ್ನಂತೆ ಸಂಭ್ರಮದಿ
ನನ್ನ ಮೈ ಮನಗಳಲಿ ಸುಳಿಯುತ್ತಾರೆ
ಅದಕ್ಕೆ ನಾ ಹರಿಯುತ್ತೇನೆ, ನಲಿಯುತ್ತೇನೆ
ನಿರಾತಂಕದಿ
ಚಲಿಸುತ್ತೇನೆ ನನ್ನದೇ ಹಾದಿ ಕಂಡು
No comments:
Post a Comment