Monday, January 27, 2014

ಜಡದ ಹಾಡು

ಬದುಕು ಸುತ್ತೆಲ್ಲ ಜಂಜಡದ ಗಂಟು
ಗಳ ನಂಟು
ಹೊರಬರಲೆತ್ನಿಸಿದಂತೆ ಸಿಕ್ಕುವೆವು
ಸಿಂಬಳದ ನೊಣದಂತೆ
ಅಂತೆ-ಕಂತೆಗಳ ಬದುಕಿಗೆ
ನೂರೆಂಟು ಜಡತೆಯ ಗಂಟು
ಬಿಚ್ಚಲೆತ್ನಿಸಿದಂತೆಲ್ಲ ಬೀಳುವದು
ಮತ್ತೆ ಕಗ್ಗಂಟು
ಹಸಿದ ಹೊಟ್ಟೆ ಹಿಟ್ಟ ಪಡೆದರೆ,
ಬಟ್ಟೆಗೆ ಪರದಾಟ
ಒಂದಿದ್ದರೆ, ಇನ್ನೊಂದರ ಕೈ ಬಿಡುವ
ನಿತ್ಯ ಬದುಕಿನ ಹೋರಾಟ
ಹಸನದ ಬಾಳು ಕನಸಿನ ಹಾಡಾಗಿ
ಕರ್ಕಶದಿ ಹಾಡುವ ಪಕ್ಷಿ
ಚೀರುತಿದೆ ಹಾಹಾಕಾರದಿ
ನಿತ್ಯ ಸಮಸ್ಯೆಯ ಸುತ್ತ
ನಳನಳಿಸುವ ಜೀವಕೆ-
ತ್ಯಾಗ, ಪ್ರೀತಿ, ವಿಶ್ವಾಸಗಳೆಲ್ಲ ಸವಕಲುನಾಣ್ಯ
ಜಣ, ಜಣ,ಜಾರಿ ಹೋಗಿವೆ
ಹೊಟ್ಟೆ ಬಟ್ಟೆಗಳ ಚಿಂತೆಯಲೂ
ಜುಟ್ಟಿಗೆ ಹೂವ ಸಿಗಿಸುವ ಕೃತಕತೆಯಲಿ
ಸೋರಿಹೋಗಿದೆ ಬದುಕ ಬೆಲೆ
ಬಾಳಿಗಿಲ್ಲ ನೀತಿ, ಬದುಕಿಗಿಲ್ಲ ರೀತಿ
ಹೊಂದಿಯೂ ಹೊಂದದಂತೆ
ಪಡೆದೂ ಪಡೆಯದಂತೆ
ದೂರಾಗಿವೆ ಸಂಗತಿ-ಸಂಗಾತಿಗಳೆಲ್ಲ
ಮನದ ಮೂಲೆಯಿಂದ ಎಲ್ಲವೂ ಯಾಂತ್ರಿಕ, ತಾಂತ್ರಿಕ,
ವೇಗದ ಬದುಕು ನಿರ್ಜೀವ ಯಂತ್ರ?
ಇದಕೆ ಬೇಕಿಲ್ಲ ಚಾಲಕನ ತಂತ್ರ
ಕೊನೆಯಿಲ್ಲ
ಈ ತಾಳ ತಪ್ಪಿದ ಬಾಳ ಹಾಡಿಗೆ

No comments:

Post a Comment