Monday, January 27, 2014

ಕಳೆದುಹೋಗಿದ್ದೇನೆ


ಇಲ್ಲಿ ಒಲೆ ಹತ್ತಿ,ಧರೆಯೂ ಹೊತ್ತಿ
ಉರಿಯುತಿದೆ ಗುಲಾಬಿ ಗಿಡಗಳ
ನಾಡೀಗ 'ಲಾಬಿ'ಗಳ ಮುಳ್ಳಿಗೆ ಸಿಕ್ಕು
ನಿಧಾನಸೌಧದಿ ಹಲವು ವಿಧಾನಗಳಲಿ
ಯಾರದೋ ತೊಡೆಯೇರಿ
ಮುದುಡಿ ಬೀಳುತಿದೆ.
ಗಂಟೆಗಟ್ಟಲೆ ಹಾರಾಟ
ಗಾರ್ಡನ್ ಸಿಟಿಯಲಿ ಕಾರ್ಬನ್ ಊಟದೊಂದಿಗೆ
ನಿತ್ಯ ಮಾರಾಟಕೆ ಕಾದು ನಿಂತಿವೆ
ಹಳೆ ಕಾರುಗಳು, ಕುಡಿದ ಬಾಟಲಿಗಳು
ಎಲೆ ಉದುರಿಸಿ ಬರಡಾಗಿ ನಿಂತ
ಅಂಡಲೆವ ಹೂಗಳ-ಪಕಳೆಗಳು.
ಅಧಿಕಾರ ಹಿಡಿದವರ ಓಲೈಸಲು
ನಾಯಿ ಬಾಲ ನೆಟ್ಟಗಾಗಿಸಲು ನಿತ್ಯ ಕ್ಯೂನಲಿ
ಹಲ್ಕಿರಿತ ಅಧಿಕಾರ ಬಿಟ್ಟವರ ಪಾಡು
ಬೀದಿ ನಾಯಿಯ ಹಾಡು
ಕುಂಯ್ ಗಟ್ಟರೆ ಕೇಳುವವರು ಇಲ್ಲಿ ಯಾರು?
ಹಲ್ಕಿರಿಯುತ್ತಾರೆ, ಕೈಕುಲುಕುತ್ತಾರೆ, ಒಮ್ಮೊಮ್ಮೆ
ಮೈಯನ್ನು ತಮ್ಮ ತಮ್ಮ ಮೈ-
ದಾನದಲ್ಲಿ ಕುಲುಕೇ ಕುಲುಕುತ್ತಾರೆ
ಶಬ್ದಗಳು ಬಾಯಿಂದ, ನಗು ತುಟಿಯಿಂದ
ತೂರಿ ಬರುತ್ತವೆ ಬ್ರ್ಯಾಂಡಿಗೆ ತಕ್ಕಂತೆ
ಬದುಕ ಮಾರುಕಟ್ಟೆಯಲಿ
ಇಲ್ಲಿ ಎಲ್ಲವೂ ಸೆಕೆಂಡ್ ಹ್ಯಾಂಡ್,
ಪ್ರೀತಿ, ಬದುಕು, ನೀತಿ, ರೀತಿ
ನನಗರಿವಿಲ್ಲದಂತೆ ಗದ್ದಲಗಳ
ಮಧ್ಯ ಕಳೆದುಹೋದ ನಾನೂ
ಕೂಡಾ ಈ ತಂಗಳೂರಲಿ

No comments:

Post a Comment