ಗುಹೆಯೊಳಗೆ ಅವಿತು ನಿರಾತಂಕ
ನಗೆ ನಡಿಗೆಯಲಿದ್ದ ಪಯಣಿಗ
ಒಂದೇ ಉಸಿರಲಿ ಉಸುರಿದ-
ನನಗೇನು ಗೊತ್ತಿಲ್ಲ ನಾನೀಗ
ಪರಮ ಸುಖಿ ತುತ್ತು ಚೀಲವ
ತುಂಬಿಸಲು ಹೆಣಗಿ ಹೆಣವಾಗಿದ್ದ
ನನಗೆ ಮದ್ದು ಬಾಂಬುಗಳ ಮಾಲೆ
ಹಾಕಿ ಮೆರೆಸಿದರು.
ಕರುಳು ತುಂಬಿಸುವ ಕೂಳು;
ಕೈಗೆ ಸಿಕ್ಕ ಗನ್ನು ಹಿಮದ ಮನೆಯಲಿ
ಬೆಚ್ಚಗಿನ ಧರ್ಮಯುದ್ಧ ಬೋಧನೆ
ನಿತ್ಯ ಹರಿಸುತ್ತೇನೆ ರಕ್ತ ಕಾಲುವೆ
ಕಂಡವರ ಕರುಳು ಬಗೆಯಲು
ಕಾರಣ ಏಕೆ ಬೇಕು?
ಆಕಾಶ ನೋಡಿ ಕೇಕೆ ಹಾಕುತ್ತೇನೆ
"ಓ ದೇವರೆ ನಿನಗೆ ಪ್ರಿಯ
ಕೆಲಸ ಮುಕ್ತಿ ಕೊಡು"
ವೈರಿಗಳ ರುಂಡ ಚಂಡಾಡಿದರೆ ಅದು
ಪಾಪವಲ್ಲ
ಅದು ಧರ್ಮಯುದ್ಧ
ದೇವರೆ ಹೇಳಿದ್ದಾನಂತೆ,
ನಮ್ಮ ಗುರುವಿನ ಗುರುವಿಗೆ.
ಅದಕೆ
ನೀರು ಸೂರಿಲ್ಲದ ನನಗಿದು ಮಕ್ಕಳಾಟ
ಆಕಾಶಕ್ಕೆ ಕೈಮಾಡಿ ಅಹಂಕಾರದಿ
ಎದೆ ಉಬ್ಬಿಸಿ ಬೆಂಕಿ ಉಗುಳುವ
ರಾಕ್ಷಸರ ಯುದ್ಧಸೌಧ ನುಚ್ಚುನೂರಾಗಿದೆ
ನನ್ನ ತಮ್ಮಂದಿರ ಕೈಗೆ ಸಿಕ್ಕು.
ಮಕ್ಕಳು ನಿದ್ದೆಯನಪ್ಪಿದಾಗ
ಅಧರ್ಮಿಯರು ಬೆಂಕಿ ಸಿಡಿಸಿದ್ದಾರೆ.
ಕರಕಲಾದ ಮಕ್ಕಳ ದೇಹ
ನನಗೆ ಪಾಠ ಕಲಿಸುವದು ಬೇಡ
ನನಗೇನು ಗೊತ್ತಿಲ್ಲ!
ಧರ್ಮಯುದ್ಧವನೊಂದು ಬಿಟ್ಟು
ಕತ್ತಲೆಯಲಿ ಕೇಕೆ
ಹಾಕುತ್ತ ಮರೆಯಾದ
ಧ್ಯಾನಾಸಕ್ತ ಬುದ್ಧ
ಚೂರುಚೂರು ವಿಗ್ರಹಗಳ ತುಣುಕಿನಲ್ಲಿ
ನಸುನಗುತ್ತಿದ್ದ
"ದೇವರೇ ಇವರಿಗೆ ಬುದ್ಧಿಕೊಡು"
No comments:
Post a Comment