Monday, January 27, 2014

ನಾನು ಮತ್ತು ಪಾಲೀಸು ಹುಡುಗ


ಅಂಗಲಾಚಿದ ರಸ್ತೆ ಬದಿಯಲಿ
ಹುಡುಗ,ಬೂಟು ಪಾಲೀಸು
ಮಾಡಿಸೆಂದು
ಚೌಕಾಶಿ ಶುರು ಆಯ್ತು
ನಾಕಾಣೆ, ಎಂಟಾಣೆಯಿಂದ ರೂಪಾಯಿಗೆ
ಥಳ-ಥಳ ಹೊಳೆದರೂ ಬೂಟು
ಕೊಟ್ಟು ಹನ್ನೆರಡಾಣೆ,
ಚೆನ್ನಾಗಿಲ್ಲ ನಿನ್ನ ಪಾಲೀಸೆಂದೆ.
ಮಾತು ಕೊಟ್ಟ ಹಣಕ್ಕಾಗಿ ಹುಡುಗ ಬೇಡಿದರೆ
ಮುಂದೆ ಹೋಗೆಂದೆ
ಹೊಳೆಯುವ ಬೂಟು ಅಣಕಿಸಿದ ನಡಿಗೆಯಲಿ
ಛಲ ಹೊತ್ತ ಹುಡುಗನಿಗಾಗಿ
ಕರುಳು ಮಿಡಿಯಲಿಲ್ಲ
ನಾಚಿಕೆ ಎನಿಸಲಿಲ್ಲ.
ಬಂದೆ ಮುಂದೆ ಗಣೇಶಗುಡಿಗೆ
ಕಂಡೆ ಎಲ್ಲದಕೂ
ಚೌಕಾಶಿಯಿಲ್ಲದ ರೇಟಿನ ಬೋರ್ಡು
ಕಾಯಿ-ಕರ್ಪೂರಕೆ
ಅಡ್ಡ ಉದ್ದ ಬೀಳಲಿಕೆ
ರೇಟೇ ರೇಟು ಉಕ್ಕಿತು ಭಕ್ತಿ ಉಬ್ಬಿದ
ಪೂಜಾರಿಯ ಹೊಟ್ಟೆ ಕಂಡು
ಧನ್ಯನಾದೆ ಹಣ ಹಾಕಿ
ಉರಿಯುವ ತಟ್ಟೆಗೆ
ಭಕ್ತಿಭಾವದಿ ತೃಪ್ತಿಯಾಗಲಿಲ್ಲ
ಆಶೀರ್ವಾದವನು ತೋರಲಿಲ್ಲ,
ದುರಾಸೆ ಪೂಜಾರಿಗೆ ಸಾಕೆನಿಸದ
ಚಿಲ್ಲರೆ ಕಂಡು
ರಸ್ತೆಗೆ ಬಂದೆ,
ಪಾಲೀಸು ಡಬ್ಬ ಹಿಡಿದ ಪ್ರಾಮಾಣಿಕ ಹುಡುಗ,
ಉರಿಯುವ ತಟ್ಟೆ ಹಿಡಿದ ಪೂಜಾರಿ
ಅಣಕಿಸಿದಂತೆ ಭ್ರಮಿಸಿ

No comments:

Post a Comment