Monday, July 16, 2018

ಗುಲಾಬಿ ನಗರ

ಇಂದು ಈ ರಾತ್ರಿ ತತ್ತರಿಸಿದೆ ಗುಲಾಬಿನಗರ

ಸದಾ ನಳನಳಿಸುವ ಕೆಂಗುಲಾಬಿಗಳು
ಇಂದು ಈ ರಾತ್ರಿ ತತ್ತರಿಸಿ ಮುಳ್ಳುಗಳ
ಮೇಲೆ ವಾಲಿ ತತ್ತರಿಸಿವೆ.

ಕಾಲು ಹಿಡಿದು ಬೇಡುವವರ ಆರ್ತನಾದವ
ತಲೆ ಹಿಡಿದು ಕುಳಿತಿರುವವರು ಕೇಳಿಸಿಕೊಳ್ಳುತ್ತಿಲ್ಲ.
ನಿಧಾನ ಸೌಧದ ಸುತ್ತಲೂ ಅಸಹನೆಯ ಪಹರೆ
ಒಳಗೆ ನುಸುಳಲು ಜಾಗವೆಲ್ಲಿ ಮಾನವತೆಗೆ ?

ಎಲ್ಲರೂ ಗಂಟುಗಳ್ಳುರು ಸಾವಿನ ಮನೆಯಲ್ಲಿ
ಸೂತಕದ ಭೋಜನ ಸವಿಯಲು ಸನ್ನದ್ಧರಾಗಿದ್ದರಾರೆ
ಸಾವಿನ ಕೊರಳಿಗೆ ಉರುಲು ಬಿಗಿದು ವಿಲಿ ವಿಲಿ
ಒದ್ದಾಡುವುದ ಕಂಡು ಕೇಕೆ ಹಾಕುತ್ತಾರೆ.

ಎಲ್ಲದಕೂ ಸಿದ್ಧರಾದವರಿಗೆ ಸಂತೆಯಲೂ ಸುಖನಿದ್ರೆ
ಸಂತೆಯಲಿ ಮನೆಯ ಮಾಡಿ ನಡುಬೀದಿಯಲಿ ನಿಂತು
ಬಟ್ಟೆ ಬಿಚ್ಚಿ ಬೆತ್ತಲಾಗಿ ತಕ ತಕ ಕುಣಿಯುತ್ತ
' ಅಯ್ಯೋ ಮಾನ ಹೋಯ್ತು '
ಎಂದರಚುವ ಮಾನಗೇಡಿಗಳ
ಮಹಾ ಕೂಟ.

ಯಾರು ಹೋದರೇನು ? ಯಾರು ಬಂದರೇನು ?
ತುತ್ತು ಕೂಳಿಗೆ ಕೈ ಚಾಚುವುದು ತಪ್ಪಲಿಲ್ಲ .

ಅಂದದೂರು ಚಂದದೂರಿನಲಿ ಬರೀ ಲಾಬಿಗಳದೇ
ಕಾರು-ಬಾರು , ಸಂಜೆಯಾದರೆ ಸಾಕು ಇಲ್ಲಿ ರಂಗೇ
ರಂಗು.

ಪಂಚೆಯುಟ್ಟವರು ಕಿತ್ತು ಬಿಸಾಕಿ ಜೀನ್ಸಗಳಲಿ
ಕಾಲ ಹಾಕುತ್ತಾರೆ....

ದೂರದೂರಿಂದ ಬಂದು ನೆಲ ಹಿಡಿದು ನೆಲೆ 
ನಿಂತವರು ಕನ್ನಡಕೆ ಕನ್ನ ಹಾಕಿದ್ದಾರೆ.

ಈ ಗುಲಾಬಿ ನಗರದಲಿ ಈಗ ಬರೀ ಕತ್ತಲು
ಬೆಟ್ಟಕೆ ಛಳಿಯಾದರೆ ಹೊಚ್ಚುವವರು ಯಾರು ?
ಕಂದೀಲ ಬೆಳಕಲಿ ಕೈ ಹಿಡಿದು ದಡ
ದಾಟಿಸುವವರು ಎಲ್ಲಿಹರು ?

ಇಂದು
ಈ ರಾತ್ರಿ
ತತ್ತರಿಸಿದೆ
ಗುಲಾಬಿನಗರ.

     ಸಿದ್ದು ಯಾಪಲಪರವಿ

No comments:

Post a Comment