ಪ್ರತಿ ಸಂಚಿಕೆಯಲೂ ಹೊಸತನ...
ಅಂದು ಸಂಕ್ರಮಣ ಮೊನ್ನೆ ಸಮಾಹಿತ ಇಂದು ಸಂಗಾತ
ಕೆಲ ತಿಂಗಳುಗಳ ಹಿಂದೆ ನಮ್ಮೂರು ಕಾರಟಗಿಯಲ್ಲಿ ಕವಿ ಪೀರ್ ಬಾಶಾ ಹಾಗೂ ಟಿ.ಎಸ್. ಗೊರವರ ಸಿಕ್ಕು ತುಂಬ ಮಾತನಾಡಿದರು.
ಮಾತಿನ ಮಧ್ಯೆ ಗೊರವರ ‘ಕೆಲಸ ಬಿಟ್ಟೆ’ ಅಂದಾಗ ಆತಂಕವಾಯಿತು.
ನೌಕರಿಯ ಹಂಗಿನ ಗುಂಗಿನಲಿ ಬದುಕುವ, ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುವ ನನ್ನಂತವರಿಗೆ ಹೊಟ್ಟೆಗೇನು ಎಂಬ ಆತಂಕ-ಕಾಳಜಿ ಸಹಜ.
ಹರೆಯದ ಗೊರವರ ಸಂಗಾತ ಪತ್ರಿಕೆಯ ಕನಸು ಹಂಚಿಕೊಳ್ಳುವಾಗ ಮಂಡಾಳ ಒಗ್ಗರಣಿ, ಮಿರ್ಚಿ ತಿಂದಿದ್ದೆವು. ಆತ್ಮವಿಶ್ವಾಸ ಎಲ್ಲಕಿಂತ ದೊಡ್ಡದು. ಒಳ್ಳೆಯದಾಗಲಿ ಎಂದು ಹಾರೈಸಿದೆ.
‘ಹಾಗಾದರೆ ಚಂದಾ ಕೊಡಿ’ ಎಂದ ಪೀರಬಾಷಾ ಮಾತಿಗೆ ಹೂಂಗುಟ್ಟೆ.
ಊರಲ್ಲಿದ್ದಾಗಲೇ ಮೊದಲ ಸಂಚಿಕೆಯ ಪಾರ್ಸಲ್ ತಮ್ಮನ ವಿ.ಅರ್.ಎಲ್. ತಲುಪಿತ್ತು.
ಮನೆಗೆ ಬಂದು ಗಡಿಬಿಡಿಯಲ್ಲಿ ಸಂಚಿಕೆ ಕೈಗಿತ್ತು ಮಾಯವಾದ ನೆನಪು ಹಸಿರಾಗಿಯೇ ಇದೆ.
ಮುಂದೆ ಅದೇ ವೇಗದಲ್ಲಿ ಸಂಗಾತ ಇಡೀ ನಾಡು ತಲುಪಿದ್ದು ಇತಿಹಾಸ.
ಪತ್ರಿಕೆಯಲ್ಲಿ ಕೆಲಸ ಮಾಡಿದ ಗೊರವರ ಅವರಿಗೆ ಕ್ಬಾಲಿಟಿ ಗೊತ್ತು, ಅದೇ ಉನ್ನತ ಗುಣಮಟ್ಟದ ಪ್ರೊಡಕ್ಷನ್.
ಈಗ ಏನೋ ಹೊಸ ಸಾಹಸ ಆರಂಭವಾದರೆ ಬೆಂಗಳೂರು ಕೇಂದ್ರೀಯವಾಗಿದ್ದಾರೆ ಚಂದ ಎಂದು ನಂಬಿದ್ದಾರೆ. ರೀಚ್ ಹಾಗೂ ಪ್ರಚಾರ ಬೇಗ ದೊರಕಬಹುದೆಂಬ ನಂಬಿಕೆಯೋ ಭ್ರಮೆಯೋ ಇದೆ.
ಆದರೆ ಗೊರವರ ಆಯ್ಕೆ ಮಾಡಿಕೊಂಡ ವಿಳಾಸ ಗದಗ ಜಿಲ್ಲೆಯ ಒಂದು ಮೂಲೆಯ ರೊಟ್ಟಿ ಮುಟಗಿಯ ಹಳ್ಳಿ ರಾಜೂರು.
ಬೆಂಗಳೂರು ಕೇಂದ್ರಿತ ಬಯಕೆಯಿಂದ ಹೊರಬಂದು ನಾಡಿನ ಯುವ ಲೈಕ್ ಮೈಂಡೆಡ್ ಸಂಗಾತಿಗಳ ನೆರವಿನೊಂದಿಗೆ, ಹಿರಿಯರ ಮಾರ್ಗದರ್ಶನದಲ್ಲಿ ಸಂಗಾತ ಭರ್ಜರಿ ಸಾಗಿದೆ.
ಇದೊಂದು ಪತ್ರಿಕೆಯಲ್ಲ ಸಾಹಿತ್ಯದ ಕೃತಿ. ಎಲ್ಲ ಪ್ರಕಾರಗಳ ಒಳನೋಟ. ಬರೆಯುವ ಎಲ್ಲರೂ ಅನನ್ಯ ತುಡಿತದ ಸಂವೇದನಾಶೀಲ ಬರಹಗಾರರು.
ತುಂಬಾ ಬೆಲೆಬಾಳುವ ಹೊರಹೊದಿಕೆಯಷ್ಟೇ ಒಳ ಹೂರಣವೂ ಅಷ್ಟೇ ರುಚಿ.
ಕನ್ನಡದ ಓದುಗರಿಗೆ ಅಭಿರುಚಿ ಇದೆ. ಲಂಕೇಶ್ ಪತ್ರಿಕೆ ಆ ಅಭಿರುಚಿಯನ್ನು ಹುಟ್ಟು ಹಾಕಿದೆ.
ಬೇಡವೆನಿಸಿದರೆ ಕಿತ್ತಿ ಬಿಸಾಕುತ್ತಾರೆ ಕೂಡ.
ಗೊರವರ ನಿಮ್ಮ ಹಾದಿ ಸುಂದರವೂ, ಸುಗಮವೂ ಆಗಿದೆ.
ಗುಂಪುಗಾರಿಕೆ ಹಾಗೂ ಪಂಥಗಳಿಂದ ರೋಸಿ ಹೋದ ಮನಸುಗಳಿಗೆ ಬದಲಾವಣೆಯ ಭರವಸೆ ಬೇಕಿದ್ದ ಕಾಲದಲ್ಲಿ ಸಂಗಾತ ಬಂದಿದೆ.
ಕಟ್ಟುನಿಟ್ಟಾದ ವ್ಯವಹಾರ ಚತುರತೆ ಇಟ್ಟುಕೊಂಡೇ ಬೆಳೆಯಿರಿ, ಬೆಳೆಸಿರಿ. ನೀವು ತೆಗೆದುಕೊಂಡ ರಿಸ್ಕ್ ಗೆ ನಿಜವಾದ ಬೆಲೆ. ಸಿಗಲಿ.
ಎಲ್ಲಾ ಪಂಥಗಳ ವಿಚಾರಧಾರೆಗೂ ಮನ್ನಣೆ ನೀಡಿ.
ಎಡಬಲಗಳ ಹೊಡೆತದಿಂದ ಪಾರಾಗುವ ಅಗತ್ಯವಿದೆ.
ಮೌಲಿಕವೂ, ಸುದೀರ್ಘವೂ ಆದ ಅಕಾಡೆಮಿಕ್ ಬರಹಗಳ ವಿಶಾಲತೆ ಸಂಗಾತದ ಹೆಚ್ಚುಗಾರಿಕೆ.
ಸಾಹಿತ್ಯಾಸಕ್ತರೂ ಓದಲೇಬೇಕಾದ ಸಂಗಾತ.
ಶುಭವಾಗಲಿ ಗೊರವರ…
ಸಿದ್ದು ಯಾಪಲಪರವಿ.
No comments:
Post a Comment