ವಿಚಾರಪತ್ನಿಗೊಂದು ಓಲೆ
ನೂರೆಂಟು ವಿಸ್ಮಯಗಳ ಪಯಣದಲಿ
ನಿನಗೂ ನಿನ್ನದೇ ಆದ ಅಸ್ತಿತ್ವ
ನೀ ವಿಚಾರಧಾರೆಗಳ
ಸಾಮರಸ್ಯದ ಸಂಗಾತಿ
ಭಾವನೆಗಳ ಮಾಲೀಕತ್ವದ
ಹೊಣೆಗಾರಿಕೆ ನಯ ನಾಜೂಕಿನ
ಜರೂರಿಲ್ಲ
ಮುಚ್ಚುಮರೆಯಿಲ್ಲದ ಅವಿನಾಭಾವ
ಬಂಧನ
ಆಸ್ತಿಪಾಸ್ತಿ ವಾರಸುದಾರಿಕೆಯ
ಜಂಜಡದ ಹಂಗಿಲ್ಲ
ದೇಹದಾಚೆಗಿನ ಮಾತಿಗೂ ಮೀರಿದ
ದಿವ್ಯ ಮೌನ ಎಲ್ಲವನು ಮುಕ್ತವಾಗಿ
ಹಂಚುವ ಬೆಳಕಿನ
ಹಂಗಿಲ್ಲದ ಬಯಲಬೆತ್ತಲೆ
ಎಲ್ಲಿಯೂ ಯಾರಿಗೂ ಹೇಳಲಾಗದ
ಸಂಗತಿಗಳ ನಿವೇದನೆಯ ತಂಗುದಾಣ
ನಿತ್ಯವೂ ಹಂಚಿಕೊಂಡಾಲೇ
ಮೈಮನಗಳಲಿ ಇನ್ನಿಲ್ಲದ
ಸಮಾಧಾನ
ಮಾನ್ಯತೆಯ ಮೀರಿದ ಅನುಸಂಧಾನ
ಸಾಕಲ್ಲ ಈ ಅಪ್ರತಿಮ ಬಂಧನಕೆ
ಗುಟ್ಟಾದ ಸಂಗತಿಗಳ ರಟ್ಟು ಮಾಡದೇ
ಎಲ್ಲವನು ನಿಭಾಯಿಸುವ ತಾಕತ್ತು
ಆದರೂ ಇದು ವಿಚಿತ್ರ ಅನುಭವಗಳ
ಸಹಸ್ಪಂದನ ಹಿಡಿಯಲೂ ಆಗದ
ಬಿಡಲೂ ಬಾರದ
ಅಪವಿತ್ರವಲ್ಲದ ಸಂಸಾರ
ಮುಲುಗದೇ ನಲುಗದೇ ಬರೀ
ಮಾತುಮಂಥನಗಳ ಸಮಭೋಗದ
ಸವಿಸುಖದ ಉತ್ತುಂಗದ ಪಯಣ
ಹೀಗೆ ಸಾಗುತಲಿರಲಿ
ಮಂಥನಗಳ
ಮಹಾಮಸ್ತಕಾಭಿಷೇಕ
ಆಚಾರದ ಗೊಡವೆಯಿಲ್ಲದ
ವಿಚಾರಸತಿಯ ಸಮಾಗಮ.
---ಸಿದ್ದು ಯಾಪಲಪರವಿ
No comments:
Post a Comment