Read my thoughts on YourQuote app at https://yq.app.link/Z4WVBQDGRP
ಲವ್ ಕಾಲ
*ಹಿಡಿದು ಕಟ್ಟುವ ತವಕಕೀಗ ಮೂಗುದಾರ*
ಅಲ್ಲಿ ನೀ ಒಂಟಿ, ಏಕಾಂಗಿ ನನಗಾಗಿ ಎಲ್ಲವನೂ ತ್ಯಜಿಸಿಬಿಟ್ಟೆ. ನೋಡಲು ಬಂಗಾರದ ಪಂಜರದ ಥಳುಕು, ಒಳಗೆಲ್ಲ ಬರೀ ಹುಳುಕು ಎಂದು ಗೊತ್ತಾದ ಕೂಡಲೇ ಮನಸು ಕೆರಳಿತು.
ಬಿಡಿಸಿ ಹಾರಲು ತೂರಿ ಬಿಡುವ ಸಂಕಲ್ಪ.
ಹಗಲಿರುಳು ಅದೇ ಧ್ಯಾನ ಗೊತ್ತು ಗುರಿ ಇಲ್ಲದ ಅಡ್ಡಕಸಬಿಯ ಹಾಗೆ.
ಮೈತುಂಬ ಬಿಡಿಸಲಾಗದಷ್ಟು ಕೆಲಸಗಳು, ಅವುಗಳ ಮಧ್ಯೆ ಮೂರನೇ ಕಣ್ಣಿಂದ ಸಂರಕ್ಷಿಸುವ ಧಾವಂತ.
ತಾಯಿ ಮಗುವಿಗಾಗಿ ಹಲುಬಿದಂತೆ ಅದೇ ಹುಚ್ಚಾಟ.
ಒಂದಲ್ಲ ಎರಡಲ್ಲ ಸಾವಿರದ ಗಂಟೆಗಳ ಕಲರವ ಹಗಲಿರುಳು ಅದೇ ತೀವ್ರತೆ.
*ಆಡುವ ಮಾತಲಿ, ನೋಡುವ ನೋಟದಲಿ, ಕೂಡುವ ಕೂಟದಲಿ, ಬರೆಯುವ ಅಕ್ಕರದಲಿ, ಓದುವ ಪುಟದಲಿ, ಉಣ್ಣುವ ಅನ್ನದಲಿ, ಬಿಗಿದಪ್ಪುವ ಮಗಳ ಬಿಸುಪಲಿ, ಅಪ್ಪಳಿಸುವ ಕನಸಲೂ ಅದೇ ಅದೇ ಗುಂಗು*.
ಎಂದೂ ಮುಗಿಯದ ಹಾಡಿಗೆ ಹೊಸ ಹೊಸ ರಾಗಗಳ ಕಾವ್ಯಾಂಕುರ.
ಬೆವರು, ನೆತ್ತರು, ಅಣು ಕಣದಲಿ, ಒತ್ತರಿಸಿ ಚಿಮ್ಮುವ ಧಾತುವಲಿ ಇನ್ನಿಲ್ಲದ ಕಸುವು. ಅದೇನೋ ಪೊಗರು, ಆಕಳಾಗಿದ್ದ ಮನಕೀಗ ಗೂಳಿಯ ಖದರು.
ಕುದುರೆಯ ಓಟಕೀಗ ತಿರುಗಿದ ಹರೆಯ. ಬಿಗಿದಪ್ಪಿದರೆ ಗಾಳಿಗೂ ತೂರಲು ಜಾಗವಿಲ್ಲ.
ಅರಳುವ ಗುಲಾಬಿಗೆ ಕೆರಳಿದ ದುಂಬಿ. ಮಕರಂದವ ಹೀರಿ ಚಂದ್ರನ ಬೆಳಕಲಿ ಮೆಲ್ಲುಸಿರ ಕಂಪನ.
ಜಿನುಗುವ ಹನಿಯಲಿ ಮಿನುಗುವ ಕೆಂಗುಲಾಬಿ.
ಮಾವಿನ ತೋಪಲೂ ಮಿಂಚುವ ದ್ರಾಕ್ಷಿ.
ಹುಚ್ಚು ಹೆಚ್ಚಾದಾಗ ನನಗೇ ಇರಲೆಂಬ ದುರಾಸೆ. ಅಪರಿಮಿತ ವ್ಯಾಮೋಹದಲಿ ಕಟ್ಟಿ ಹಾಕಿ ಉಸಿರುಗಟ್ಟಿ ಚೀರಿದರೂ ಬಿಡದ ಕರಡಿಯ ಹಿಡಿತ.
ನಾ ನೀ ಆದಾಗ ನೀ ನಾನಾಗಲೀ ಎಂಬ ಅಟ್ಟಹಾಸ.
ಇನ್ನಿಲ್ಲದ ಸಿಟ್ಟು, ಸೆಡವು ಮೊಂಡಾಟ, ಹಟ, ಹಟ, ಹಟ ಬೇಕೇ ಬೇಕು ಈ ಮಡಿಲಲಿ ಹಗಲು ಇರುಳು, ಆಗ ಈಗ ಬೇಗ ಬೇಗ.
ಬಿಡಲಾರದ ತಲ್ಲಣದ ಮೂಗುದಾರಕೆ ಮೂಗುತಿಯ ಸಡಗರ.
ನೀನೋ ಸಿಗಬಾರದೆಂಬ ಜಾಣ ಹಿರಿಮೆ. ಹಿಂದಿನ ಬಂಧನದ ಮುಕ್ತಿಗೆ ಹೊಸ ಬಂಧ ಬೇಡೆಂಬ ನಿಲುವು.
ಇರಲಿ ನೋಡೋಣ, ಕೂಡಿಸಿದ ಅವನು ಕಳೆಯಲಾರ. ಕಳೆದರೆ ಹಿಡಿದು ಕಟ್ಟಿ, ಕೂಡಿ ಹಾಕಿ ಮೌನರಾಗದಲಿ ಹಾಡಿ ನಲಿವೆ ಚರಮ ಗೀತೆಯ.
ಬಿಡಲಾರೆ ಎಂದೆಂದೂ ಮುಂದೂ. ಮೂಗುತಿಯ ಮಿಂಚಲಿ, ಉಸಿರ ಲಯದಲಿ ಮೂಗಿನ ಹೊಳ್ಳಿಯಲಿ ಏದುಸಿರಾಟದ ಲಹರಿಯಲಿ ನಾನಿರುವೆ ಉಸಿರು ನಿಲ್ಲುವ ತನಕ. ಮಣ್ಣಲಿ ಮಣ್ಣಾಗುವ ಗರತಿಯ ಮೂಗುತಿಯ ಮುತ್ತಲಿ.
ಸಿದ್ದು ಯಾಪಲಪರವಿ
#kannada #kannadaquotes #lovequotes #love #LoveQuote #YQJogi #YQbaba #YQkannada
@YourQuote Jogi
No comments:
Post a Comment