*ಜಗದ ಹಂಗ ಹರಿದು*
ಈ ಜಗದ ಹಂಗ ಹರಿದು ಬೆರೆಯುವ
ಸಂಗದಿ ಮೈಮರೆಯದೇ ಮೆರೆಯೋಣ
ನಾವು ಕೇವಲ ನಮಗಾಗಿ
ಯಾರದೋ ಹಂಗು ಯಾವುದೋ ಗುಂಗು
ಇನ್ನೇತಕೆ ಅವರಿವರ ಹಂಗು ನಮ್ಮ
ಪಾಡಿಗೆ ನಾವಿರೋಣ
ಒಡಲ ಕಿಚ್ಚ ತಣಿಸಲು ಮನದ ಬಿಸಿಯಲಿ
ಬೇಯುತ ಆಚೀಚೆ ಅಲುಗದೆ ಟೀಕೆಗೆ
ನಲುಗದೆ ನಮ್ಮ ಭಾವನೆಗಳ ರಮಿಸೋಣ
ಅತ್ತರೂ ನಕ್ಕರೂ ಸುಖಿಸಿ ದುಃಖಿಸಿದರೂ
ನಮಗೆ ನಾವೇ ರಮಿಸಿ ವಿರಮಿಸಬೇಕು
ಯಾರೂ ಇಲ್ಲ ನಮ್ಮ ಬೆನ್ನು ತಟ್ಟಿ
ಅಹುದೆನಲು ಇದು ಅವನ ಮಹಿಮೆಯ
ಲೀಲಾವಿನೋದ
ಕಳೆದುಹೋದರೆ ಪರಮ
ಮೂರ್ಖರು ನಾವು ಈ ಸೋಗಲಾಡಿ
ಸ್ವಾರ್ಥಿಗಳ ಜಗದಲಿ
ಕಾಯತಲಿವೆ ಸಾವಿರ ಕುಹಕ
ಕಣ್ಣುಗಳು ಕಣ್ಣಾಮುಚ್ಚಾಲೆಯಾಡುತ
ನಮ್ಮ ಕಣ್ಣು ಮುಚ್ಚಿ ಕರಳು
ಬಗೆದು ಗಾಳಿಗೆ ತೂರಿ ಮಾನ
ಹರಾಜಿಗಿಡಲು ಕೈಗೆ ಸಿಕ್ಕರೆ ಸಾಕು
ಕಲ್ಲು ತೂರಾಟ ಚಾರಿತ್ರ್ಯದ ಹುಯಿಲು
ಬರೀ ಗುಮಾನಿ ಹೊಸ ಚರಿತೆಗೆ
ಆಹಾರ ನಾವು ನೀಚ ಹೊಟ್ಟೆಗೆ
ನಿದ್ದೆಯಲು ಎಚ್ಚರಿದ್ದು ಮಲಗದೇ
ದಣಿವಾರಿಸಿ ಉಣ್ಣದೇ ಹೊಟ್ಟೆ
ತುಂಬಿಸಿಕೊಳುವ ಹೊಸ ಇತಿಹಾಸದ
ರೂವಾರಿಗಳು ನಾವು ಬದುಕಬೇಕು
ಕೇವಲ ನಮಗಾಗಿ ನಮ್ಮ ಅಸ್ಮಿತೆಗಾಗಿ.
*ಸಿದ್ದು ಯಾಪಲಪರವಿ*
No comments:
Post a Comment