Monday, September 10, 2018

ಮಾಡಿದೆನೆನಬೇಡ

ಮಾಡಿದೆನೆನಬೇಡ: ಅನಗತ್ಯ ಪೈಪೋಟಿಯ ಹಟವೂ ಬೇಡ

ಹೀಗೆ ಮನಸು ಹಟ ಮಾಡಿಬಿಡುತ್ತೆ, ವಿನಾಕಾರಣ ಅನಬಹುದು ಆದರೆ ವಿನಾಕಾರಣ ಅಲ್ಲ.‌‌
ಮನಸಿನ ಜಂಜಾಟಕೆ ನೂರಾರು ಕಾರಣಗಳು, ನೂರೆಂಟು ಆತಂಕಗಳು‌. ಕಾರಣ ಸ್ವಾರ್ಥ, ಮತ್ತೆ ಇನ್ನೂ ಏನೇನೋ !

ನಿಸ್ವಾರ್ಥ-ನಿರ್ಮಲ-ನಿರ್ಲಿಪ್ತರಾಗಿ ಆಲೋಚಿಸಿದಾಗ ಎಲ್ಲವೂ ಗೌಣ. ಇಂತಹ ಅನೇಕ ಪದಗಳೊಂದಿಗೆ ನಮ್ಮ ಮುಖಾಮುಖಿ ಅಗುತ್ತೆ ಆದರೆ ನೋವು ಅನುಭವ ಆಗದ ಹೊರತು ಆಳಕ್ಕಿಳಿಯುವುದಿಲ್ಲ.

ಒಂದೇ ವಿಷಯಕ್ಕೆ ಇಬ್ಬರು ಹಟ ಮಾಡಿದರೇ ಮುಗಿದೇ ಹೋಯಿತು.‌ ಯಾರಾದರು ಒಬ್ಬರು ಹಿಂದೆ ಸರಿಯಬೇಕು, ಸರಿಯದಿದ್ದರೆ ನಮ್ಮ ಬಾಂಡೇಜುಗಳ ಕತೆ ಮುಗಿದಂತೆ.

*ಮಾಡಿದೆನೆನ್ನಬೇಡ ಲಿಂಗಕ್ಕೆ, ಮಾಡಿದೆನೆನ್ನಬೇಡ ಜಂಗಮಕ್ಕೆ ಮಾಡಿದೆನೆಂಬುದು ಮನದಲಿ ಕಾಡಿದರೆ ಏಡಿಸಿ ಕಾಡಿತ್ತು ಶಿವನ ಡಂಗುರ* ಎಂಬ ಬಸವಣ್ಣನ ಸಾಲುಗಳ ಎಚ್ಚರಿಕೆ ನಮ್ಮನ್ನು ಕಾಡುತ್ತಿರಬೇಕು. ಇಲ್ಲದಿರೆ ಅನಗತ್ಯ ಅಹಂಕಾರದ ಶನಿ ಹೆಗಲೇರಿಬಿಡುತ್ತದೆ.

ನಮ್ಮ ಜೀವಪಯಣದಲಿ ಹತ್ತಾರು ಜನರಿಗೆ ಮಾರ್ಗದರ್ಶನ ಮಾಡುವ ಅವಕಾಶ ಸಿಕ್ಕಾಗ ಯಾವುದೇ ಅಳುಕು, ನಿರೀಕ್ಷೆ ಹಾಗೂ ಪ್ರತಿಫಲಾಪೇಕ್ಷೆ ಇಲ್ಲದೇ ದಾರಿ ತೋರಬೇಕು.
ಅಕಸ್ಮಾತ ಅವರು ಬಾನೆತ್ತರ ಬೆಳೆದರೆ ಅವರ ಗ್ರಹಿಕೆ ಮತ್ತು ಪರಿಶ್ರಮವೇ ಕಾರಣ ಹೊರತು ಸಂಪೂರ್ಣ ನಮ್ಮ ಮಾರ್ಗದರ್ಶನವಲ್ಲ ಎಂಬ ವಾಸ್ತವದ ವಿವೇಚನೆ ಇರಬೇಕು.‌

*ನಾನೇ ಕಾರಣ, ನನ್ನಿಂದಲೇ ಎಲ್ಲ* ಎಂದು ಬೀಗಬಾರದು.
ಬೀಗುವಿಕೆಗಿಂತ ಬಾಗುವಿಕೆಯಲಿ ಸುಖವಿದೆ.‌
‘ಏಣಿಯಂತೆ ಬಳಸಿ ಒದ್ದರು’ ಎಂಬ ನೆಗೆಟಿವ್, ಪುರಾತನ ಮಾತು ಈಗ ಅಪ್ರಸ್ತುತ.

ಮತ್ತೊಮ್ಮೆ ಸಹಕಾರ, ಸಲಹೆ ಕೇಳಿದವರಿಗೆ ಹಿಂದಿನ ಕಹಿ ಅರುಹದೇ ಉತ್ಸಾಹದಿಂದ ಪ್ರೋತ್ಸಾಹಿಸಬೇಕು.
ನಾವೂ ಹರಿವ ನದಿಯಂತೆ ಸಾಗುತಿರಲೇಬೇಕು.
ಮೈ ತೊಳೆದುಕೊಂಡವರು, ಬೊಗಸೆಯಲಿ ನೀರು ಹಿಡಿದವರು, ಕಾಲು ಅಲುಗಾಡಿಸಿ ಹಾಯ್ ಅಂದುಕೊಂಡವರು ಆ ಕ್ಣಣ ಖುಷಿ ಪಟ್ಟಿರುತ್ತಾರಲ್ಲ‌, ಆ ಖುಷಿಗೆ ಅಷ್ಟಾದರೂ ನಮ್ಮ ಕೊಡುಗೆ ಇದ್ದರೆ ಅದೇ ಬದುಕಿನ ಸಾರ್ಥಕತೆ.

ಇಂದು ಇವರು, ನಾಳೆ ಅವರು, ಮುಂದೆ ಇನ್ಯಾರೋ, ಆದರೂ ಬದುಕ ಬಂಡಿ ಖುಷಿ ಹಂಚುತ್ತ ಸಾಗುತ್ತಲೇ ಇರಬೇಕು. ಇಂದು ಈ ಊರು, ಮುಂದೆ ಆ ಊರು…

  ಸಿದ್ದು ಯಾಪಲಪರವಿ

No comments:

Post a Comment