Wednesday, September 26, 2018

ಸಾಗಿರಲಿ ಮೌನ ಮೆರವಣಿಗೆ

*ಸಾಗಿರಲಿ ಮೌನ ಮೆರವಣಿಗೆ*

ಯಾಕೋ ಕಾಣೆ ಈ ವ್ಯಾಮೋಹ
ಬಂಧನದ ಗೊಂದಲದ ಭ್ರಮಾಲೋಕ

ಕಳೆಯುವುದಿಲ್ಲ‌ ಯಾರೂ ಒಮ್ಮೆ ಕೂಡಿ
ಆಡಿ ನಲಿದ ಮೇಲೆ ಅಲ್ಲ ಇಲ್ಲಿ‌ ಯಾರೂ
ಮೇಲೆ ಕೆಳಗೆ ನೆಲೆ ಒಂದೇ ಒಲವ ಬೆಲೆಗೆ

ನೀ
ನಾ

ಆದ ಮೇಲು ಸಣ್ಣ ಅಳುಕು ನನಗಾಗಿಯೇ
ಇದು ಎಂಬ ಕಳವಳ ಕಸಿವಿಸಿಯ ಹುಸಿ
ಮುನಿಸು

ಬಂದು ಬಿಗಿದಪ್ಪಿ ಮುತ್ತಿನ ಮಳೆಯಲಿ
ತೊಯ್ದು ತೊಪ್ಪೆಯಾದಾಗ ಬರೀ ಶೂನ್ಯ
ಬೇರೇನೂ ಬೇಡವೇ ಬೇಡೆಂಬ ಗುನುಗುವಿಕೆ

ಅಗಲಿದರೆ ಸಾಕು ಮೈಮನ ಹಗುರಾದ
ಮೇಲೆ ಮತ್ತದೇ ರಾಗ ಅದೇ ಹಾಡು

ಯಾಕೆ ಹೀಗೆಂಬ ಅರಳಿ ಕೆರಳುವಿಕೆಯ
ತವಕಕಿಲ್ಲ‌ ಆದಿ ಅಂತ್ಯ

ಚಿನ್ನಾಟವಾಡಿ ನಲಿಯುವ ಬೆಕ್ಕಿಗೂ
ಹಾಲಿನ ಚಿಂತೆ ನೆಲುವಿಗೆ ಹಾರುವ
ಧಾವಂತ

ಅದು ಇದು ಅವರು ಇವರು ಅಲ್ಲಿ
ಇಲ್ಲಿ ನಾನಿರದಿರೆ ಹೇಗೆಂಬ ವ್ಯರ್ಥ
ಪ್ರಶ್ನೆಗಿಲ್ಲ ಇಲ್ಲಿ ಉತ್ತರ

ಯಾರಿಗೆ ಯಾರೂ ಅಲ್ಲ ಅನಿವಾರ್ಯ
ಬರೀ ಮನದ ತವಕಕೆ ಅನಿವಾರ್ಯತೆಯ
ಸೋಂಕು

ಹಿಡಿದರೆ ಜೀವಂತ ಹಿಸುಕಿದರೆ ಅಂತ್ಯ
ಸತ್ಯದ ಒರೆಗಲ್ಲಿಗಿದು ಅಲ್ಲ ಸಕಾಲ

ಕೇಳಿದರೆ ಸಾಕು ನಾನೀ ತತ್ತರ
ಏನಾದರಾಗಲಿ ಉಳಿದಿರಲಿ ಕಸುವು
ಒಲವ ಹಸುವು

ನಾನೀ ಬಿದ್ದು
ಹೋಗುವತನಕ ಸಾಗಿಯೇ ಇರಲಿ
ಬರೀ ಸದ್ದು ಮಾಡದ
ನಿಶಬ್ದ ಮಾತುಗಳ ಮೌನ ಮೆರವಣಿಗೆ.

  *ಸಿದ್ದು ಯಾಪಲಪರವಿ*

No comments:

Post a Comment