*ಲವ್ ಕಾಲ*
*ಎಲ್ಲವೂ ನೀ ನಾ ಆದಾಗ ಮಾತು ಬೆಳೆಸುವದಾ!*
‘ಹೌದು ಇಷ್ಟೊಂದು ತಕಾರಾರು ಬೇಕಿತ್ತ, ಹೇಳುವುದನ್ನ ನೇರವಾಗಿ ಹೇಳಬೇಕಪ್ಪ.’
‘ನಿಜ ಆದರೆ ಹಾಗೆ ಹೇಳೋಕಾಗಲ್ಲ ಬಂಗಾರ,
ಅರ್ಥ ಮಾಡಿಕೊಳ್ಳಲಾಗದಿದ್ದರೂ ನನ್ನ ಮೇಲಿನ ನಂಬಿಕೆಯಿಂದ ಒಪ್ಪಿಕೊಂಡರೆ ನನಗೂ ಸಮಾಧಾನ’
‘ಇಷ್ಟು ದೂರ ಕ್ರಮಿಸಿದ ಮೇಲೆ ತಿರುಗಿ ಹೋಗಬಾರದು, ಹೋಗುವ ಆಲೋಚನೆ ಅನಾರೋಗ್ಯಕರ, ಇಡೀ ಮನುಷ್ಯ ಸಂಬಂಧಗಳ ಮೇಲೆ ನಂಬಿಕೆ ಹಾಳಾಗುತ್ತೆ.’
‘ಇರುವಷ್ಟು ದಿನ ಪರಸ್ಪರ ವಿಶ್ವಾಸ, ನಂಬಿಕೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ವಿನಾಕಾರಣ ಏನೋ ನೆಪ ಮಾಡಿಕೊಂಡು ಮನಸು ಕೆಡಿಸಿಕೊಳ್ಳುವದರಲಿ ಯಾವ ಪುರುಷಾರ್ಥವಿದೆ.’
*ನೀನು ಗಂಟೆಗಟ್ಟಲೇ ಹೇಳಿದ್ದನ್ನು ಕೇಳಿಸಿಕೊಳ್ಳುವ ಅನಿವಾರ್ಯತೆ.*
ನಾನು ನನ್ನದೇ ಹಾದಿಯಲ್ಲಿ ನಿನ್ನ ನಿಷ್ಕಾಮವಾಗಿಯೇ ಸ್ವೀಕರಿಸಿದ್ದೆ. ಮಿಲನ ಆಕಸ್ಮಿಕ, ಅದೇ ಎಲ್ಲ ಅಲ್ಲವೇ ಅಲ್ಲ.
ವಯೋಮಾನಕೆ ತಕ್ಕಂತೆ ಮಾತ್ರ ವರ್ತಿಸುವಷ್ಟು ದೇಹ ಸಹಕರಿಸುತ್ತದೆ. ಅತಿಯಾಗಿ ಎಲ್ಲ ದಕ್ಕುವುದಿಲ್ಲ.
ದಕ್ಕಿದ್ದನ್ನು ಸಮರ್ಪಕವಾಗಿ ವಿವಾದವಿಲ್ಲದೆ ಅನುಭವಿಸಬೇಕು.
ಅನುಮಾನ, ಅವಮಾನ, ಹಟಮಾರಿತನದ ಮಾತೇ ಬರಬಾರದು.
ಆದರೂ ಬರುತ್ತೆ, ಮಾತು-ಮಂಥನಗಳ ಮೂಲಕ ಕುದಿಯಬೇಕು, ಭಾವನೆಗಳು ಬೇಯಬೇಕು ಅಂದಾಗ ಬಾಂಡೇಜ್ ಗಟ್ಟಿಗೊಳ್ಳುತ್ತೆ.
ಅರ್ಧಕ್ಕೆ ಬಿಟ್ಟು ಓಡಿ ಹೋಗುವುದು ಅಮಾನವೀಯ, ಅಸಹ್ಯ.
ಕಾಮದಾಸೆಗೆ ಕೂಡಿದರೆ ಹಾದರವಾಗುತ್ತೆ. ಅನೈತಿಕವಾಗುತ್ತೆ. ನಮ್ಮ ಬಾಂಧವ್ಯ ಹಾಗಲ್ಲ. ಅದರಾಚೆಗೆ ಅನೇಕ ಸಂಗತಿಗಳಿವೆ.
ಓದು-ಬರಹ-ಸಂಸ್ಕೃತಿಯ ಹೊಳಪಿದೆ.
ಆಧ್ಯಾತ್ಮಿಕ ಚಿಂತನೆಗಳಿವೆ, ಇವೇ ಹಾದಿಯಲಿ ಕೊನೆ ದಿನಗಳು ಗಟ್ಟಿಯಾಗಿ ಉಳಿದುಕೊಳ್ಳಬೇಕು.
ದೇಹ ಯಾವಾಗ ದುರ್ಬಲವಾಗುತ್ತೋ ಗೊತ್ತಿಲ್ಲ. ಆರೋಗ್ಯ ಕೈ ಕೊಟ್ಟರೆ ಏನೂ ಬೇಕಾಗಲ್ಲ.
ಆರೋಗ್ಯ ಕೆಟ್ಟು ಮುಪ್ಪು ಆವರಿಸಿದರೂ ಬಾಂಧವ್ಯ ಉಳಿಯಬೇಕಾದರೆ ಕಾಮದ ವಾಸನೆ ಹೊಡೆಯಬಾರದು.
ದೇಹ ಸಾಮಿಪ್ಯವಿಲ್ಲದೆ ಪರಮಸುಖ ಅನುಭವಿಸುವ ತಾಕತ್ತು ಆಧ್ಯಾತ್ಮಿಕ ಬದುಕಿಗಿದೆ.
ಹೇಳುವುದು ಹೇಳಿಯಾದ ಮೇಲೆ ಮತ್ತೆ ಮತ್ತೆ ಹೇಳಿದ್ದನ್ನು ಹೇಳುವ ಉದ್ದೇಶ ಇಷ್ಟೇ, ಅದು ಮನದಲ್ಲಿ ದಾಖಲಾಗಿ ಉಳಿಯಲೆಂಬ ಆಶಾವಾದ.
ರೋಸಿಕೊಳ್ಳುವುದರಿಂದ ಏನೂ ಪಡೆಯಲಾಗದು, ಕಳೆದುಕೊಂಡು ಹುಚ್ಚರಾಗುತ್ತೇವೆ.
ಎಲ್ಲಾ ತಿಳಿದು ಹುಚ್ಚರಾಗುವಷ್ಟು ನಾವು ದಡ್ಡರಲ್ಲ.
ಮಾತು, ಜಗಳ, ವಾದ, ವಿವಾದಗಳೂ ನಮ್ಮನ್ನು ಮುನ್ನಡೆಸಲಿ.
ಸಿಕ್ಕಾಗ ಸಿಗುವ ಸಾಮಿಪ್ಯ ಸುಖದ ಹಂಬಲದಲಿ, ಮೈಮನಗಳ ಪುಳಕದಿಂದ ಕಾಯುತ್ತಲಿರೋಣ.
*ಸಿದ್ದು ಯಾಪಲಪರವಿ*
No comments:
Post a Comment