*ಲವ್ ಕಾಲಕೂ ಮುನ್ನ…*
ಭಾವ ಪ್ರಪಂಚದಲ್ಲಿ ತೇಲಾಡಿ ಸುಖ ಅನುಭವಿಸುದೊಂದು ಬಗೆಯ ಉನ್ಮಾದ. ಪ್ರೀತಿ-ಪ್ರೇಮ-ಪ್ರಣಯ ದೌರ್ಬಲ್ಯ ಏನೆಂದರೂ ಒಂದೇ. ಮುಂದೇ ಅದೇ ಪ್ರೀತಿ ವೈರಾಗ್ಯವಾಗಿ ಭಕ್ತಿಯ ಸ್ವರೂಪ ಪಡೆಯಬಹುದು.
*ಪ್ರೀತಿ ಕಣ್ಣು, ಕೈಕಾಲು ಏನೂ ಇಲ್ಲದೆ ಹರಿಯುವ ನದಿ…*
ಬಾಲ್ಯದಲ್ಲಿ ತಾಯಿ-ತಂದೆ, ಕೌಟುಂಬಿಕ ವಾತಾವರಣದ ಪ್ರೀತಿ ಯೌವನಕೆ ಕಾಲಿಟ್ಟ ಕೂಡಲೇ ಅನುರಾಗವಾಗಿಬಿಡುತ್ತೆ.
ಹರೆಯದಲ್ಲಿ ಕಚಗುಳಿ ಇಡುವ ಹುಡುಗಿ/ ಹುಡುಗಿಯರಿಗೆ ಲಿಂಗ, ವಯಸ್ಸು, ಜಾತಿ, ಧರ್ಮಗಳ ತರತಮವಿಲ್ಲ.
ನಂಬಿ ಆರಾಧಿಸಿ ನುಗ್ಗುವುದಷ್ಟೇ ಗೊತ್ತು.
ಲೈಲಾ-ಮಜ್ನು, ಸಲೀಮ್-ಅನಾರ್ಕಲಿ, ರೋಮಿಯೋ-ಜೂಲಿಯೆಟ್ ಮಾತ್ರ ನೆನಪಾಗುತ್ತಾರೆ. ಹಾಗಾದರೆ ಉಳಿದ ನೂರಾರು ಕೋಟಿ ಮನುಜರು ಪ್ರೇಮಿಗಳಲ್ಲವೆ?
ಪ್ರೀತಿಯನ್ನು ದಕ್ಕಿಸಿಕೊಂಡು ಗೆದ್ದವರು, ಸೋತು ರಾಜಿಯಾಗಿ ಹೊಸ ಬದುಕು ರೂಪಿಸಿಕೊಂಡ ಕೋಟಿಗಟ್ಟಲೆ ಮನುಜರು ಪ್ರೇಮಿಗಳಾಗುವುದು ಅಸಾಧ್ಯ.
ಅವರೆಲ್ಲ ಬರೀ ಮನುಷ್ಯರು ಅಷ್ಟೇ!
ಅವರಿಗೆ ಬೇರೆಯವರ ಪ್ರೇಮಲೋಕ ನೋಡುವ ಅಧಿಕಾರ ಮಾತ್ರ ಇದೆ ಆದರವರು ಪ್ರೇಮಿಗಳಲ್ಲ. ರಾಜಿಯಾಗಿ ಬದುಕಿನುದ್ದಕ್ಕೂ ಒದ್ದಾಡುವ ಸಾಮಾನ್ಯ ಪ್ರಾಣಿಗಳು ಈ ಪ್ರೇಮಿಗಳ ದೃಷ್ಟಿಯಲ್ಲಿ.
ಹರೆಯದಲ್ಲಿ ಪ್ರತಿಯೊಬ್ಬರೂ ಪ್ರೇಮಿಸುತ್ತಾರೆ, ಕೆಲವರು ಇನ್ನೇನು ಪ್ರೇಮಿಸಬೇಕು ಅನ್ನುವುದರೊಳಗೆ ಬಂಧನದಲ್ಲಿ ಕಳೆದು ಹೋಗಿ ಮರುಗುತ್ತ ಕೊನೆತನಕ ಪ್ರೀತಿಗಾಗಿ ಹಂಬಲಿಸುತ್ತ, ಹಂಬಲಿಸುತ್ತಾ ಬದುಕ ಪಯಣ ಮುಗಿಸಿ ಬಿಡುತ್ತಾರೆ.
ಮತ್ತೆ ಕೆಲವರು ಅಯ್ಯೋ ಬದುಕು ಇಷ್ಟೇ ಅಂದುಕೊಳ್ಳುತ್ತಿರುವಾಗ ಅನಿರೀಕ್ಷಿತವಾಗಿ ಪ್ರೇಮಲೋಕದಲಿ ಎಂಟ್ರಿ ಕೊಟ್ಟುಬಿಡುತ್ತಾರೆ. ಅದಕೆ ಈ ಪ್ರೇಮಕೆ ವಯಸಿನ ಹಂಗಿಲ್ಲ ಅಂದದ್ದು.
ಯಾವ ಪ್ರೀತಿಯೂ ಹಾದರ, ಅನೈತಿಕ ಅಲ್ಲ just imbalance happening ಆದರೆ ನಿಭಾಯಿಸವುದು ಹೆಚ್ಚು ಕಡಿಮೆ ಆದರೆ ಎಲ್ಲ ಬಟಾ ಬಯಲು. ಹಾಗಾಗಬಾರದೆಂಬ ಇರಾದೆ ಪ್ರೇಮಿಗಳಿಗೆ ಇರುತ್ತೆ…
ಸಮಯ ಸಂದರ್ಭ ಅವರನ್ನು ಸಿಗಿಸಿಬಿಟ್ಟಾಗ just helpless.
ಮುಂದೇನು ? ಏನೂ ಇಲ್ಲ, ಅನುಭವಿಸಿ ಎದುರಿಸಬೇಕು ಹೆದರದೇ…
ಹೆದರುವ ಮನಸ್ಥಿತಿ ಕಳೆದುಕೊಂಡ ಮನಸು ಬೇರೆ ಹಾದಿ ಹಿಡಿದು ಹೋಗುವುದು ಸಹಜ. ಈ ಬದುಕಿನಲ್ಲಿ ಯಾವುದೂ ಅಸಹಜವಲ್ಲ.
ಎಳೆ ಪ್ರಾಯದಲ್ಲಿ ಯುವಕರು ಪ್ರೀತಿ ಮಾಡಲಿ, ಆದರೆ ಅಸಹ್ಯ, ಅತಿರೇಕವೆನಿಸಿ ಜೀವ ತೆಗೆಯುವ ಅಥವಾ ಕಳೆಯುವ ಮನೋವಿಕಾರ ತಲುಪದೇ ಕೇವಲ ಮನದ ಲೆಕ್ಕಾಚಾರದಲ್ಲಿ ಕಾಲ ದೂಡಲಿ ಯಾರನ್ನೂ ದೂರಿ ದೂರ ದೂಡದೇ.
ಹಿಡಯದ, ಬಿಡಲಾಗದ, ಮಾಡದ, ಮಾಡಲಾಗದ, ಮಾಡದಂತಿರುವ ಮಾಟದೊಳು ತಾನಿದ್ದು ಇರದಂತಿರಬೇಕು.
ಸಹಜವಾಗಿ ದಕ್ಕಿದ್ದು ಸುಂದರ, ಅಸಹಜ ಸದಾ ವಿಕೃತವೆಂಬ ಅರಿವಿದ್ದರೆ ಸಾಕು.
ನಮ್ಮ ತಲ್ಲಣಗಳಿಂದ ಬೇರೆಯವರ ಜೀವ ಹಿಂಡಿ ಹಿಪ್ಪಿ ಮಾಡುವುದು ಬೇಡ.
ಅವ್ವ-ಅಪ್ಪ, ಬಂಧು-ಬಳಗ, ಸಮಾಜ-ಕುಟುಂಬ ವ್ಯವಸ್ಥೆಗೆ ಅಪಾಯಕಾರಿ ಹೊರೆಯಾಗದ ಎಚ್ಚರಿಕೆ, ವಿವೇಚನೆ ಪ್ರೇಮಿಗಳಾದವರಿಗೆ ಇರಲಿ.
ಸಂಯಮ, ಸಂವೇದನೆಗಳ ಪ್ರತಿಫಲವೇ ಪ್ರೀತಿ-ಪ್ರೇಮ-ಪ್ರಣಯ.
*ಅದರ ಜಾಡು ಹಿಡಿದ ಓದು-ಬರಹ, ಕತೆ-ಕವಿತೆ-ಕಾದಂಬರಿ, ಹಾಡು-ಸಂಗೀತ-ಭಾವಗೀತೆ*.
ಮನುಷ್ಯ ತನ್ನ ಖುಷಿಗಾಗಿ ಓದುತ್ತ, ಬರೆಯುತ್ತ, ಹಾಡುತ್ತ, ಕುಣಿಯುತ್ತ ಮನಸನು ರಂಜಿಸಿಕೊಳ್ಳುತ್ತಾನೆ. *ಯಾರು ಕಿವಿಮುಚ್ಚಿದರು ನನಗಿಲ್ಲ ಚಿಂತೆ*.
“ಹಾಡುವುದು ಅನಿವಾರ್ಯ ಕರ್ಮ ನನಗೆ” ಎಂದು ಹಾಡುತ್ತಲೇ ಇರುತ್ತಾನೆ.
ಈ ಪ್ರಪಂಚದಲ್ಲಿ ಬರೀ ವಾಸ್ತವವಾದಿಗಳು, ನಾಸ್ತಿಕರು ಇದ್ದರೆ ಬದುಕು ನೀರಸವಾಗುತ್ತಿತ್ತು.
ಅವಾಸ್ತವ ಎಂಬ ಪ್ರೀತಿಗೆ ಮೈಯಲ್ಲ ಕಾಲು.
ಎಂತಹ ಕ್ರೂರಿಯೂ ಈ ಜಾಲದಲಿ ತನಗರಿವಿಲ್ಲದಂತೆ ಕಳೆದು ಹೋದಾಗ ದಿಢೀರ್ ಅಂತ ತನ್ನ ನಿಲುವಿಗೆ ಮರುವ್ಯಾಖ್ಯಾನ ಮಾಡಿಕೊಂಡು ಬಿಡುತ್ತಾನೆ.
ದೇಹ-ಮನಸು ಬೇರೆ ಬೇರೆಯಾಗಿ ಇರುವುದಿಲ್ಲವಾದರೂ ಬೇರೆ ಬೇರೇಯೇ.
ದೇಹ ದಣಿದು ಮುಪ್ಪಾಗುತ್ತದೆ, ಮನಸಿಗೆ ಮುಪ್ಪು, ಸಾವು ಏನೂ ಗೊತ್ತಿಲ್ಲ. ಅಲೌಕಿಕರು ಇದಕೆ ಆತ್ಮವೆಂದರೆ, ಲೌಕಿಕರು ಮನಸು ಅನ್ನುತ್ತಾರೆ ಅಷ್ಟೇ…
ಇದೆಂದಿಗೂ ಮುಗಿಯದ, ಅರ್ಥವಾಗದ ಮೆಲ್ಲುಸಿರ ಸವಿಗಾನ, ಕ್ಷಿಪ್ರ ಕಲರವ, ಅರಿವಿನ ಅನುಸಂಧಾನ.
ಮುಪ್ಪಿನಲಿ ಹರೆಯದ ಒಲವು ನೆನಪಾದರೆ ಮನಸು ಅರಳುತ್ತದೆ. ಹರೆಯದಲ್ಲಿ ಬೆದರಿ ಕೆರಳುತ್ತದೆ, ಎರಡೂ ಒಂದೇ.
ಅರಳಿ ಕೆರಳುವ ತಾಕತ್ತು ಈ ಪ್ರೀತಿಗಿರುವುದೇ ಜೀವನೋತ್ಸಾಹದ ಧಿಮಾಕು.
ಕಾಮದಾಚೆಗಿನ ಆತ್ಮನಿವೇದನೆಗೆ ಒಲವ ವರತೆ ಉಕ್ಕಿ ಹರಿಯುತ ಸಾಗುವುದೇ ಜೀವನ.
ಇರುವುದ ಬಿಟ್ಟು ಇರದುದ ಹುಡುಕುವ ಹುಡುಗಾಟ ಮುಗಿಯುವುದಿಲ್ಲ. ಈ ರೀತಿಯ ಹುಡುಗಾಟದ ಹುಡುಕಾಟವ ನೋಡಿದ್ದೇನೆ, ಕೇಳಿದ್ದೇನೆ, ಅನುಭವಿಸಿದ್ದೇನೆ.
ಅಗಾಗ, ಈಗೀಗ ಬರೆದ ಮನದ ತಳಮಳಗಳ ಓದಿದಾಗ ಅದೇನೋ ಪುಳಕ.
ಬೆಳೆದು ನಿಂತ ಮಕ್ಕಳು, ವಿದ್ಯಾರ್ಥಿಗಳು, ವಾರಿಗೆಯವರು ಕೇಳುವ ಪ್ರಶ್ನೆಗಳಿಗೆ ಈ ಬರಹಗಳೇ ಉತ್ತರಿಸಲಿ.
ಇಲ್ಲಿ ನಾನೀ ಅಲ್ಲದೇ, ಅವನು-ಅವಳು, ಅವರು-ಇವರು ಎಲ್ಲರೂ ಇದ್ದಾರೆ. ನಮ್ಮನ್ನು ನಾವು ಹುಡುಕಿಕೊಂಡರೆ ಸಾಕು.
ಓದಿ ಖುಷಿ ಪಡಿ. ಎಲ್ಲರ ಪರವಾಗಿ ನಾ ಹಾಡಿ ಹಗುರಾಗಿದ್ದೇನೆ. ನೀವೂ ಹಗುರಾಗಿ…
ಸಿದ್ದು ಯಾಪಲಪರವಿ
No comments:
Post a Comment