*ಸಂಧಾಕಾಲಕೊಂದು ಒಲವಮಾಲೆ*
ಹಲೋ ರಾಣಿ,
*ನೆಲೆ ನಿಂತ ಹುಡುಕಾಟ-ಹುಡುಗಾಟ* ನಮ್ಮ ಬದುಕಿನ ಇಳಿಗಾಲದ ಸಂಧ್ಯಾ ಸಮಯದಲಿ ಇಡೀ ಬದುಕಿನ ಘಟನೆಗಳ ಮೆಲುಕು ಅನಿವಾರ್ಯ.
ದೇಹ ಕುಗ್ಗಿ ತನ್ನ ಕಸುವು ಕಳೆದುಕೊಂಡ ಅಸಹಾಯಕ ಹೊತ್ತು. ನೆನಪುಗಳ ಸವಿಗಾಳಿ.
ಬಂದು ಹೋಗುವ ಸಾವಿರಾರು ನೆನಪುಗಳು. ಸರಿ-ತಪ್ಪುಗಳ ವ್ಯರ್ಥ ಅನುಸಂಧಾನ.
ಗೊತ್ತಿದ್ದೋ,ಗೊತ್ತಾಗದೋ ಮಾಡಿದ ತಪ್ಪುಗಳಿಗೆ ಲೆಕ್ಕ ಕೊಡಲಾಗದು.
ಸಣ್ಣ ನಡುಕ ಕೊಂಚ ಪಾಪ ಪ್ರಜ್ಞೆ. ಗೊತ್ತಿದ್ದೂ ಮಾಡಿದ ತಪ್ಪುಗಳಿಗೆ ಸಣ್ಣ ಮುಗುಳುನಗೆ.
ಈಗೇನು? ಕೇವಲ ಸ್ಮರಣೆ ಎಲ್ಲ ಮಸುಕಾಗುವ ಮುನ್ನ.
ಅಂತಹ ನೂರೆಂಟು ನೆನಪುಗಳಲಿ You are most important. ಗೊತ್ತಿದ್ದರೂ ಮಾಡಿದ ಹಿತಕಾರಿ most wanted mistake but quite lovely. No regret.
ಈ ಭಾವುಕ ತಂಟೆಕೋರ,ಜಗಳಗಂಟ ತುಡುಗು ಮನಸಿಗೆ ಏನೆಲ್ಲಾ ಬೇಕು.
ಹೆಣ್ಣು-ಹೊನ್ನು-ಮಣ್ಣು ಎಂಬ ಮನದ ಮುಂದಣ ಆಸೆಯಲೂ ಒಂಥರಾ ಬಿಸುಪು.
ನಾನು ಅಷ್ಟೇ. ಇದಕ್ಕೆ ಹೊರತಾಗಿಲ್ಲ ಮನೋಚಪಲದ ಬಲಿಪಶು.
ಆದರೂ ನನ್ನ ಮಿತಿ ಗೊತ್ತಿದ್ದರೂ ತಡೆಯಲಾಗದ ಹಟ, ಅತೀ ಅನಿಸುವಷ್ಟು possessiveness.
ಕೇವಲ ಒಲಿಸಿಕೊಂಡು ಅನುಭವಿಸಿದರೂ ಸಾಲದ ಸಾಮಿಪ್ಯ ತೀವ್ರತೆ.
ಹಕ್ಕು ಚಲಾಯಿಸುವ ಮೊಂಡಾಟ. ಬೇಕು-ಬೇಡಗಳ ಗಡಿ ದಾಟಿ ವ್ಯಾಪಿಸಿಕೊಂಡ ಗಮ್ಮತ್ತಿನ ಪೊಗರು.
ಧ್ಯಾನಸ್ಥ ಸ್ಥಿತಿಯಲಿ ಆಳಕ್ಕಿಳಿದ ಅನುಭವಿಸಿದ ಉತ್ಕಟ ಮಿಲನಮಹೋತ್ಸವದ ಪರಾಕಾಷ್ಟೆ.
ನೀನೂ ಅಷ್ಟೇ ಅದಮ್ಯ ಉತ್ಸಾಹದ ಸಹಸ್ಪಂದನೆ. ಬಿಗಿಯಾದ ಬಂಧ ಬಾಂಧವ್ಯ.
ಈಗ ಯಾರೂ ಸಡಿಲಿಸಲಾಗದ ಅನುಬಂಧ. ಆದರಿದು ಸರಳವಾಗಿ ಒಲಿಯದು ಎಂದಾಗ ಆಕ್ರೋಶಗೊಂಡ ಮನದ ಬಿರುನುಡಿಗೆ ಕೊಂಚ ಬೆದರಿದ್ದೂ ನಿಜ.
ಈಗ, ಈಗ, ಈಗ ಎಲ್ಲವೂ ಶಾಂತ ನಿವಾಂತ ನಿತಾಂತ. ಮಾಗಿದ ದೇಹ-ಮನಸ ಕಂಡ ಮನಸೀಗ ಶಾಂತ ಪ್ರಶಾಂತ.
ಗೆದ್ದ ಹಮ್ಮು,ಪೊಗರು,ಅಹಂಕಾರ ದೇಹದಾಚೆಗಿನ ಸಂಕ್ರಮಣದ ಸಡಗರದ ಸವಿಗಾನ.
ನೀ ಅನುಪಮ. ಚರಿತ್ರೆ-ಚಾರಿತ್ಯ ಎಲ್ಲದರಲಿ. ಪರಿಪೂರ್ಣ.
ಸಮರ್ಪಣೆಯ ಧನ್ಯತೆ. ಮುಂದೇನು? ಹೇಗೆ? ಅದೆಲ್ಲ ನಗಣ್ಯ. ಸಂಧ್ಯಾಕಾಲದ ಸವಿನೆನಪು ಇಬ್ಬರಿಗೂ.
ಪಶ್ಚಾತ್ತಾಪದ ಮಾತೇ ಬೇಡ. ಇದು ಮಾಗಿದ ದೇಹಗಳ ಮಿಲನ. ಅಂಧಕಾರದ ಅನುರಾಗವಲ್ಲ.
ಎಂದೆಂದಿಗೂ ಮುರಿಯದ ಪ್ರಬುದ್ಧ ಸಂಗಮ. ಎಪ್ಪತ್ತರ ಗಡಿ ದಾಟಿ ಕಣ್ಣು ಮಂಜಾದರೂ ಒಳಗಣ್ಣ ಮಧುರ ನೋಟ. ನನಗೂ. ನಿನಗೂ.
ಈ ಜನುಮಕಿಷ್ಟೇ ಸಾಕು. ನಿಲ್ಲಲಿ ಹುಡುಕಾಟದ ಬೇಗುದಿ ಗೆಳತಿ. ನನ್ನನ್ನು ನಂಬಿದಷ್ಟೇ ನಿನ್ನನ್ನೂ ನಂಬಿದ್ದೇನೆ.
*ನಂಬಿದುದು ಸಂದೇಹಿಸದು ನೋಡಾ* ಎಂಬ ವಚನದ ನಿರ್ವಚನ.
ಬರೆಯೋಣ,ಬೆರೆಯೋಣ ಹದವರಿತು ನೂರು ಕಾಲ ವಿಶ್ವಾಸದ ಅಲೆಗಳಲಿ ತೇಲಿ ಹೋಗುತ ಇತಿಹಾಸದಲಿ ನಾವಳಿದರೂ ಉಳಿದುಬಿಡೋಣ.
ಸಾಮಿಪ್ಯ-ಸಾಂಗತ್ಯ-ಸಾಹಿತ್ಯ ಉಳಿದಿರಲಿ ಉಸಿರಿರುವ ತನಕ.
ಕಲ್ಮಶ ಕರ್ಕಶದ ಸುಳಿವಿರದೆ.
ನಮಗೆ ನಿತ್ಯ,ಪ್ರತಿನಿತ್ಯ ಪ್ರೇಮಿಸುವ ದಿನದ ಆತ್ಮಾನುಸಂಧಾನದ ಅನುಬಂಧ.
ಮುಗಿಯದಿರಲಿ ಈ ಒಲವಪಯಣ...
ನಿನ್ನನಾವರಿಸಿದ
*ಅರಿವು*
೧೪-೨-೨೦೧೮.
No comments:
Post a Comment