Wednesday, January 24, 2018

ಹೀಗೊಂದು ಸಹಸ್ಪಂದನೆ

*ಹೀಗೊಂದು ಸಹಸ್ಪಂದನೆ*

*ಪರಮ ಗುರುವಿನೊಂದಿಗೆ ಜುಗಲ್ ಬಂದಿ*

ಗುರು-ಶಿಷ್ಯ ಪರಂಪರೆ ಸಂಗೀತ ಕ್ಷೇತ್ರದಲ್ಲಿ ತನ್ನ ದಿವ್ಯತೆಯನ್ನು ಕಾಪಾಡಿಕೊಂಡಿದೆ.

ಅದೇ ಪರಂಪರೆ ಕಾವ್ಯಲೋಕದಲ್ಲೂ ಸಾಧ್ಯ ಎಂದು ನಿರೂಪಿಸಲು ನನ್ನಿಂದ ಕಾವ್ಯ ಜುಗಲ್ ಬಂದಿ ಬರೆಯಲು ಪ್ರೇರೇಪಿಸಿದ ಸೃಜನಶೀಲ ಬರಹಗಾರ, ಸಹೃದಯಿ ಮನಸ್ಸುಳ್ಳ ಪ್ರೊ.ಸಿದ್ದು ಯಾಪಲಪರವಿ ಅವರಿಗೆ ಅಭಿವಂದಿಸುವೆ.

*ಪಿಸುಮಾತುಗಳ ಜುಗಲ್* ಅವರ ಕನಸಿನ ಕೂಸು.
ಕಾವ್ಯ ಲೋಕದ ಎಲ್ಲ ಸಾಧ್ಯತೆಗಳನ್ನು ದೂರವಿದ್ದೂ ಕಲಿಸಿದ *ಅಪ್ಪಟ ಗುರು*

ನಮ್ಮ ಕನಸನ್ನು ನನಸಾಗುವ ಬಗೆಯಲ್ಲಿ ವಿನ್ಯಾಸಗೊಳಿಸಿ, ಗೆರೆಗಳಿಗೆ ಭಾವ ತುಂಬಿ ವಿನೂತನವೆನಿಸುವ ಸಂಕಲನ ಪ್ರಕಟಿಸಿದ ಲೇಖಕ, ಕಲಾವಿದ,ಒನ್ ವ್ಹೀಲರ್ ಪ್ರಕಾಶನದ  ವಿ.ಎಂ.ಮಂಜುನಾಥ ಅವರ ಆಸ್ಥೆಗೆ ಶರಣು.

ಇಂತಹ ವಿನೂತನ ಪ್ರಯೋಗವನ್ನು ಪ್ರಬುದ್ಧ ಕನ್ನಡಿಗರು ಒಲವಿನಿಂದ ಸ್ವೀಕರಿಸುತ್ತಾರೆ ಎಂಬ ಭರವಸೆಯೂ ಇದೆ.

ದಯವಿಟ್ಟು ಓದಿ ಅಭಿಪ್ರಾಯ ತಿಳಿಸಿರಿ.

---ಸಿಕಾ

*ಸಾಹಿತ್ಯಸಂಗಾತಿಗಳಾದರೆ ಸಾಕು*

ನನ್ನೊಂದಿಗೆ ಜುಗಲ್ ಬರೆದ ಹುಮ್ಮಸ್ಸಿನಲ್ಲಿ ಗುರು ಎಂಬ ಭಾರ ಹೊರಿಸಿದ್ದೀರಿ.

*ಗುರು* ತುಂಬಾ ಭಾರವಾದ ಸ್ಥಾನ.

ಆಧ್ಯಾತ್ಮ ಹಾಗೂ ಸಂಗೀತ ರಂಗಗಳಲ್ಲಿ ಮಾತ್ರ ಗುರು ಅನಿವಾರ್ಯ.

ಸಾಹಿತ್ಯದಲ್ಲಿ ಅಲ್ಲವಾದರೂ ಮಾತಿನ ಕೃತಜ್ಞತೆಗಾಗಿ ಹೇಳುವ ಸೌಜನ್ಯ.

ಈ ಕುರಿತು ನಿಷ್ಠುರವಾದ ಅನಿಸಿಕೆ ಹಂಚಿಕೊಳ್ಳುವೆ.

ನನ್ನ ಉಪನ್ಯಾಸಕ ವೃತ್ತಿಗೀಗ ಮೂವತ್ತರ ಹರೆಯ.

ಸಾವಿರಾರು ವಿದ್ಯಾರ್ಥಿಗಳು ಬಂದು ಹೋಗಿದ್ದಾರೆ, ಹೋಗುತ್ತಲೇ ಇದ್ದಾರೆ.

ಈ ವೃತ್ತಿಗೆ ಹಣ ತೆಗೆದುಕೊಳ್ಳುವ ಕಾರಣದಿಂದಲೋ ಏನೋ ಕೇವಲ ಅವರು ವಿದ್ಯಾರ್ಥಿಗಳಾಗುತ್ತಾರೆ ಶಿಷ್ಯರಾಗುವ ಪ್ರಮೇಯ ಬರುವುದಿಲ್ಲ.

ನಾವೂ ಅಷ್ಟೇ ಇಡೀ ಅವರ ಬದುಕು ಪರಿವರ್ತನೆ ಮಾಡುವ ತಾಕತ್ತನ್ನೂ ಹೊಂದಿರುವುದಿಲ್ಲ.

ಆದರೆ ಆಧ್ಯಾತ್ಮ-ಸಂಗೀತ ಲೋಕದಲ್ಲಿ ತುಂಬಾ ಭಿನ್ನ.

*ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ* ಎಂಬುದು ಸರ್ವಕಾಲಿಕ.

*ಧ್ಯಾನ-ರಾಗ* ಒಲಿಯಲು *ಭಕ್ತಿ-ಸಮರ್ಪಣೆ* ಅತ್ಯಗತ್ಯ.

ಬರಹದಲ್ಲಿ ವೈಯಕ್ತಿಕ ಶ್ರದ್ಧೆ ಸಾಕು. ಬೇರೆಯವರನ್ನು ದ್ರೋಣರನ್ನಾಗಿಟ್ಟುಕೊಂಡು ಬೆಳೆಯಬಹುದು.

ಆದ್ದರಿಂದ ದಯವಿಟ್ಟು ನನಗೆ ನಿರಾಯಾಸವಾಗಿ ಗುರುವಾಗುವ ಯೋಗ್ಯತೆಯಾಗಲಿ ಮನಸ್ಥಿತಿಯಾಗಲೀ ಇಲ್ಲ.

ಗಂಡು-ಹೆಣ್ಣಿನ ಸಂಬಂಧಗಳಲ್ಲಿ ನಾವೆಷ್ಟು ಸಣ್ಣವರು ಎಂಬ ಎಚ್ಚರಿಕೆಯಿಂದ ಒಮ್ಮೊಮ್ಮೆ ನಮ್ಮ ಸಂಬಂಧಗಳ declare ಮಾಡುವುದು ಅನಿವಾರ್ಯವೆನಿಸಿ ಏನೋ ಸಂಬಂಧ ಟ್ಯಾಗಿಸುತ್ತೇವೆ.

ಅಪರಿಚಿತ ಹಣ್ಮಕ್ಕಳನ್ನ *ಅಕ್ಕಾ ಅವರೇ*
ಎಂದು ಕರೆದು ಸುಂದರವಾಗಿದ್ದರೆ ಒಳಗೊಳಗೆ ಜೊಲ್ಲು ಸುರಿಸಿ ಸಂಭ್ರಮಿಸುವ ಪರಿ ತಮಾಷೆ ಅಲ್ದೇ ಇನ್ನೇನೂ?

ಇಷ್ಟೊಂದು ಮುಂದುವರೆದರೂ ಹೆಣ್ಗಂಡಿನ ವಿಷಯದಲ್ಲಿ ವೈಶಾಲ್ಯತೆ,ಸಹನೆ ಕಷ್ಟ.
ಸಿಗಲಿಲ್ಲ ಎಂದ ಕೂಡಲೇ ಚಾರಿತ್ಯಕ್ಕೆ ಕೈ ಹಾಕುವ ಮನಸ್ಥಿತಿ.

ಆದ್ದರಿಂದ ನಾನು ಆ ಸಣ್ಣ ಎಚ್ಚರಿಕೆ ಇಟ್ಟುಕೊಂಡು ವ್ಯವಹರಿಸಿದರೂ ಮೋಸ ಹೋಗಿದ್ದೇನೆ.

ಮುಖವಾಡ, ಬಳಸುವ ಪದಗಳು ನನ್ನನ್ನು ದಿಕ್ಕು ತಪ್ಪಸಿವೆ. ಹಾಗೆ ದಿಕ್ಕು ತಪ್ಪಿಸಿ ಯಾಮಾರಿಸಿಕೊಳ್ಳುವುದಕ್ಕೆ ಲಿಂಗ ಭೇದ-ಭಾವ ಇಲ್ಲ.

ಮಾತಿಗೆ ಮರುಳಾಗುವ *ಅಯೋಗ್ಯತೆ* ಸಾಕು.

ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಬದುಕಿನಲ್ಲಿ ಹೇರಳ ಮುಖವಾಡಗಳು.

ನಿಮ್ಮನ್ನು ವೃತ್ತಿಯಿಂದ *ಗೃಹಿಣಿ* ಎಂದು ಯಾರೋ ಪರಿಚಯಿಸಿದ್ದರಿಂದ ಇಷ್ಟೆಲ್ಲ‌ ಹೇಳಿದೇ ಅಂದುಕೋಬೇಡಿ.

ಬರಹದ ಶ್ರದ್ಧೆಯಲ್ಲಿ ನೀವು ಅಪ್ಪಟ ಅಕ್ಯಡೆಮಿಶಿಯನ್ ಎಂಬುದನ್ನು ಜುಗಲ್ ಬರೆಯುವಾಗ ಕಂಡುಕೊಂಡಿದ್ದೇನೆ.

ಅರ್ಹತೆಗೆ ಹುದ್ದೆ ಹಾಗೂ ಶಿಕ್ಷಣ ಮಾನದಂಡವಲ್ಲ. ಗುಣಸ್ವಭಾವ ಮುಖ್ಯ I mean *attitude*.

ನಮ್ಮಿಬ್ಬರ ಮಧ್ಯೆ ಭಕ್ತಿ-ಸಮರ್ಪಣೆಗಳ ಅಗತ್ಯವಿಲ್ಲವಾದ್ದರಿಂದ ಕೇವಲ ಒಳ್ಳೆಯ ಸಾಹಿತ್ಯ ಸಂಗಾತಿಗಳಾಗಬಹುದು.

ಫೇಸ್ಬುಕ್ಕಿನ ಗೆಳೆಯರನೇಕರು ನಿಮ್ಮ ಜುಗಲ್ ಪಯಣವನ್ನು ಅಭಿನಂದಿಸಲು *ಗುರುತ್ವಾಕರ್ಷಣೆ* ಕಾರಣವಾಗಿರಬಹುದು.

ಗುರುಸ್ಥಾನದ ಒಜ್ಜವನ್ನು ಕೆಳಗಿಳಿಸಿ ನಮ್ಮನ್ನು ನಾವೂ ಗೆಳೆಯರಂತೆ ಪರಸ್ಪರ ಅಭಿವಂದಿಸೋಣ.

ಏಕೆಂದರೆ *ಪಿಸುಮಾತುಗಳ ಜುಗಲ್* ನಲ್ಲಿನ ಪಾತ್ರಧಾರಿಗಳು ನಾವು.

---ಸಿದ್ದು ಯಾಪಲಪರವಿ.

No comments:

Post a Comment