*ನಾಗಮ್ಮನವರ ಬರೀ ನೆನಪಲ್ಲ*
ಕರ್ನಾಟಕ ಕಾಲೇಜಿನ ಸಂಗಾತಿಗಳೇ ಹಾಗೆ, ಆಯಸ್ಕಾಂತೀಯ ಸೆಳೆತ. ನನ್ನ ಸೀನಿಯರ್ ಮೋಹನ್ ಸೊಗಸಾದ ಮಾತುಗಾರ, ತುಂಬಾ ಜಾಣ ಆದರೂ ಪ್ರ್ಯಾಕ್ಟಿಕಲ್ ಪರೀಕ್ಷೆಗಳಲಿ ಪಾಸಾಗದಷ್ಟು ಜಗಳ ಆಡಿಬಿಟ್ಟಿದ್ದ.
ಪದವಿ ಪಾಸಾಗದಿದ್ರೂ ಬದುಕ ನದಿಗೆ ಈಸಿ ಬಿಟ್ಟಿದ್ದ.
ಹೋರಾಟಗಳ ಮೂಲಕ ಧಾರವಾಡ ನೆಲ ಹಿಡಿದುಬಿಟ್ಟ. ವಿದ್ಯಾವರ್ಧಕ ಸಂಘದ ಚಟುವಟಿಕೆಗಳ ಮೂಲಕ ನೆಲೆ ಕಂಡುಕೊಂಡ.
ಹಳ್ಳಿಯಿಂದ ಬಂದ ನನ್ನಂತ ಸಾವಿರಾರು ಹುಡುಗರ ಹೀರೊ ಆದ.
ಓದುವ, ಬರೆಯುವ,ಮಾತನಾಡುವ ಕಲೆ ಕಲಿಸಿಕೊಟ್ಟ ಗುರುವಾದ.
ನಿಸ್ವಾರ್ಥ ಸೇವೆ ಮೂಲಕ ಜನಾನುರಾಗಿಯೂ ಆದ. ಏನಾದರು ನೌಕರಿ ಮಾಡಬೇಕು ಅನಿಸದಷ್ಟು ಸಂತೃಪ್ತ ಭಾವ ಬೆಳೆಸಿಕೊಂಡ.
ಲಂಕೇಶ್ ಪತ್ರಿಕೆಯ ವಿಶಿಷ್ಟ ಬರಹಗಳ ಮೂಲಕ ನಾಡಿನ ಗಮನ ಸೆಳೆದು ಪತ್ರಿಕೋದ್ಯಮದ ಸೆಳೆತ ಹಚ್ಚಿಕೊಂಡು ನಿರಂತರ ಬರೆಯಲಾರಂಭಿಸಿ ಊಹಿಸದ ಎತ್ತರಕ್ಕೆ ಬೆಳೆದು ನಮ್ಮ ಪಾಲಿನ ಹೀರೊ ಆಗಿಬಿಟ್ಟ.
ಧಾರವಾಡಕ್ಕೆ ಹೋದಾಗಲೆಲ್ಲ ಭೇಟಿಯಾದಾಗ ಅದೇ ಹಳೆಯ ಗೆಳೆತನದ ವಾತ್ಸಲ್ಯದ ಹೊನಲು.
ಸಂಘದ ಚುನಾವಣೆಯಲ್ಲಿ ಸ್ವಂತ ಬಲದಿಂದ ಗೆಲ್ಲುವ ಸಾಮರ್ಥ್ಯ. ಅಚ್ಚುಕಟ್ಟಾಗಿ ಕಾರ್ಯಕ್ರಮಗಳ ಆಯೋಜಿಸುವ ಕುಶಲತೆ, ಸಂಘಟನಾ ಸಾಮರ್ಥ್ಯ.
ಹಿರಿಯರೊಂದಿಗೆ ನವಿರು ಸಂಬಂಧ, ಕಿರಿಯರೊಡನೆ ಆತ್ಮೀಯತೆ, ರಾಜಕಾರಣಿಗಳ ಜೊತೆ ಅಗತ್ಯಕ್ಕೆ ಬೇಕಾದಷ್ಟು ಒಡನಾಟಗಳ ಮೂಲಕ ಎಲ್ಲ ಗಳಿಸುತ್ತ ಹೋದ ಹಣ *ಹೊರತು ಪಡಿಸಿ*.
ಸರಕಾರದ ವಿವಿಧ ಸಮಿತಿಗಳು, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಚಟುವಟಿಕೆಗಳಿಗೆ ಜೀವ ತುಂಬಿದ.
ಅತಿಯಾದ ಕೂಗಾಟ,ಹಾರಾಟ ಇರದ ತಣ್ಣನೆಯ ಚಳುವಳಿಗಳಿಗೆ ಹೊಸ ಆಯಾಮ ಕೊಟ್ಟ ಹೆಗ್ಗಳಿಕೆ ಮೋಹನ್ ನಾಗಮ್ಮನವರ ಅವರಿಗೆ ಸಲ್ಲುತ್ತದೆ.
ನಾನೂ ಧಾರವಾಡಕ್ಕೆ ಬರಲಿ ಎಂಬ ಆಸೆಯೂ ಇತ್ತು. ಗದುಗಿನ ಪರಿಸರ ನನಗೆ ಸಾಲದು ಎಂದು ತಿವಿಯುತ್ತಿದ್ದ.
ಸರಕಾರಿ ಉದ್ಯೋಗ, ತೋಂಟದಾರ್ಯ ಮಠದ ಸೆಳೆತದಿಂದಾಗಿ ಗದಗ ಬಿಡುವ ಮನಸಾಗಲಿಲ್ಲ.
ಆಹ್ವಾನಿಸಿದ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರು, ನಾನೂ ಅಷ್ಟೇ ಕರೆದರೆ ಓಡಿ ಹೋಗುತ್ತಿದ್ದೆ. ಹತ್ತಾರು ಬೈಟಕ್ಕುಗಳು, ಕಳೆದ ಮಧುರ ಕ್ಷಣಗಳು ಒತ್ತರಿಸುತ್ತಲೇ ಇವೆ.
*ವೈಯಕ್ತಿಕ ಬದುಕಿನ ಖಾಸಗಿ ಸಂಗತಿಗಳಿಗೆ ಮೌನ ಸಾಕ್ಷಿಯಾದೆ*. ಹಲವು ಘಟನೆಗಳಿಗೆ ಇಬ್ಬರೂ ಅಸಹಾಯಕರು.
ರಾಜಕಾರಣದ ಹುಚ್ಚಿತ್ತಾದರೂ ಅದರ ಮಿತಿ ಮತ್ತು ಅಪಾಯ ಗೊತ್ತಿತ್ತು. ಹೀಗಾಗಿ ಸೂಜಿಗೆ ಕೊಟ್ಟ ಮುತ್ತಾಯಿತು.
ಹಿರಿಯ ತಲೆಮಾರಿನ ಸಾಹಿತಿಗಳಿಗೆ ನಾಗಮ್ಮನವರ ಊರುಗೋಲಾದ. ಧಾರವಾಡದ ಕಲ್ಯಾಣನಗರ *Pensioners Paradise* ನಂತಾಗಿತ್ತು, ಅಲ್ಲಿ ನೆಲೆಸಿರುವ ಸಾಹಿತಿಗಳ ಮಕ್ಕಳೆಲ್ಲ ಈಗ ಅನಿವಾಸಿ ಭಾರತೀಯರು. ಹಿರಿಯರ ಒಂಟಿತನ ದೂರ ಮಾಡಲು ಮೋಹನ್ ಮಗನಂತೆ ನೆರವಾದ.
ಅತಿಯಾದ ಓಡಾಟ, ಸಂಜೆಯ ಬೈಟಕ್ಕುಗಳು ಆರೋಗ್ಯ ಹಾಳಾಗಲು ಒಂದು ನೆಪವಿರಬಹುದು, ಆದರೂ ಇದು ಅರ್ಧಸತ್ಯ.
ಕೊನೆ ದಿನಗಳಲ್ಲಿ ತುಂಬ ಹಿಂಸೆ ಅನುಭವಿಸಿದ, ಡೈಲೆಸಿಸ್ ಅನಿವಾರ್ಯ ಆದಾಗ ಬದುಕು ಕಠಿಣ ಅನಿಸಿತು.
ಅನಾರೋಗ್ಯ-ಮುಪ್ಪು-ಸಾವು ಬದುಕಿನಲ್ಲಿ ಅನಿವಾರ್ಯ ಆದರೆ ಬೇಗ ಬರಬಾರದಲ್ಲ. ಅದೂ ಇಷ್ಟೊಂದು ಪಾದರಸದಂತೆ ಓಡಾಡುವ ಜೀವಗಳಿಗೆ. ಅದಕೆ ನೋವು, ತಲ್ಲಣ, ಹತಾಷೆ, ಹಳಹಳಿ, ಹೇಳಲಾಗದ ದುಃಖ.
ಈ ಹಿಂದೆ ಕುಲಕರ್ಣಿ ವೀಣಾ ಅಕಾಲಿಕವಾಗಿ ಹೋದಾಗ ಅಷ್ಟೇ ಒದ್ದಾಡಿದ್ದೆ, ಈಗ ಮೋಹನ್.
ಛೇ ! ಈ ಸಾವು ನ್ಯಾಯವಲ್ಲ ಖರೆ ಆದರೂ…
*ಸಿದ್ದು ಯಾಪಲಪರವಿ*
No comments:
Post a Comment