*ಕಳೆದು ಹೋದ ವರ್ಷ* -ಒಂದು ನೋಟ ( 2017 )
ಹೊಸ ವರ್ಷ ಅಂದ್ರೆ ಯಾವುದು ಅಂತ ವಿಚಾರ ಮಾಡಬಾರದು. ಇಂಗ್ಲಿಷ್ ಕ್ಯಾಲೆಂಡರ್ ನಂಬಿಕೊಂಡು ಬಂದು ಒಪ್ಪಿಕೊಂಡಿದ್ದೇವೆ. ಅದನ್ನೇ ಒಪ್ಪಿಕೊಳ್ಳಬೇಕು ಅಷ್ಟೇ!
ಹೊತ್ತು ಹೋದದ್ದು ಗೊತ್ತಾಗುವುದಿಲ್ಲ ನೋಡಿ. ಕಾಲನ ವೇಗ ತಡೆಯಲಾಗದು.
ಒಮ್ಮೆ ನಡೆದದ್ದು ಮೆಲುಕು ಹಾಕಿ, ಸಣ್ಣ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು, ಮುಂದಿನ ಕ್ಷಣ ಏನಾಗುತ್ತೆ ಎಂದು ಗೊತ್ತೆ ಇಲ್ಲ ಆದರೂ...
ನಾನೂ ತಪ್ಪು ಮಾಡುತ್ತೇನೆ ಆದರೆ ಅದು ಬೇರೆಯವರ ಬದುಕಿಗೆ ಕೊಳ್ಳಿಯಾಗದಿರಲಿ.
*ಹೆಣ್ಣು-ಹೊನ್ನು-ಮಣ್ಣು ಸಿಗುವುದಾದರೆ ನಾಲಿಗೆ-ಮನಸು ನಿಯಂತ್ರಣ ಕಳೆದುಕೊಳ್ಳಬಾರದು* ಎಂದು ನಿರಂತರ ಬೇಡಿಕೊಳ್ಳುವೆ.
ಆದರೂ ಜೋಲಿ ಹೋದರೆ ನಾನೇ ಸಂಭಾಳಿಸಿಕೊಳ್ಳಬೇಕು ಇದು ಮನಸಿನ ಮಾತು.
***
ವರ್ಷದ ಆರಂಭದಲ್ಲಿ ಎರಡು ಮಹತ್ವದ ಘಟನೆಗಳು. ಕನಕದಾಸ ಶಿಕ್ಷಣ ಸಮಿತಿಯ ಸುವರ್ಣ ಸಂಭ್ರಮ. ಕೊನೇ ಗಳಿಗೆಯಲ್ಲಿ ಪ್ರವೇಶ. ಹುಬ್ಬಳ್ಳಿಯ ಪ್ರಾಚಾರ್ಯ ಸಂದೀಪ ಬೂದಿಹಾಳ ಮನಸ್ಸು ಮಾಡಿ ಹೊಸ ಹುಮ್ಮಸ್ಸು ತುಂಬಿದರು.
ಚೇರಮನ್ ಡಾ.ಬಿ.ಎಫ್.ದಂಡಿನ ಸರ್, ಪದಾಧಿಕಾರಿಗಳಾದ ರವಿ ದಂಡಿನ ಹಾಗೂ ಡಾ.ಪುನೀತಕುಮಾರ ಅವರು ಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ಯಾವುದನ್ನೂ ಲೆಕ್ಕಿಸದೇ ನಿರ್ವಂಚನೆಯಿಂದ ಪೂರೈಸಿದೆ.
ಖ್ಯಾತ ನಿರ್ದೇಶಕ ಕಾಲೇಜ್ ಕುಮಾರ್ ಫೇಮಿನ ಸಂತು-ಸಂತೋಷ್ ನನ್ನ ಸಾಹಿತ್ಯ ಹಾಗೂ ಧ್ವನಿ ಬಳಸಿಕೊಂಡದ್ದು ನನ್ನ ಸೌಭಾಗ್ಯ.
*ಬರುವುದ ಬೇಡ ಎನಬಾರದು, ಬಾರದಿರುವುದರ ಬೆನ್ನು ಬೀಳಬಾರದು*. ಏನಾದರೂ ದಕ್ಕಲಿ ಎಂಬ ಹಪಾಹಪಿ ಬಿಟ್ಟು ಈಗ ಸುಖವಾಗಿದ್ದೇನೆ.
ಈಗ ಸಂಸ್ಥೆ ನೀಡಿದ ಇತರ ಜವಾಬ್ದಾರಿಗಳನ್ನು ಮುಂದುವರೆಸಲು ಸೇತುವೆ.
ನನ್ನ ಹಿತೈಷಿಗಳು, ಮಾರ್ಗದರ್ಶಕರು ಹಾಗೂ ಅಕ್ಯಾಡೆಮಶಿಯನ್ ಪ್ರೊಫೆಸರ್ ಡಾ.ಆರ್.ಎಂ.ರಂಗನಾಥ್ ಅವರ ನೆರವಿಗೆ ಥ್ಯಾಂಕ್ಸ್ ಹೇಳುವದು ತುಂಬಾ ಕೃತಕ.
ನೂರಾರು ತಾಸುಗಳಿಗಿಂತ ಹೆಚ್ಚು ಮಾತನಾಡಿದ್ದು,ಈ ವರ್ಷದ ಮಹಾನವಮಿ, ಉಗಾದಿ, ದೀಪಾವಳಿ... ಎಲ್ಲವೂ ಹೌದು.
ಆ ಕೆಲಸ ಸಕಾರಾತ್ಮಕವಾಗಿ ಮುಂದುವರೆದೇ ಇದೆ. ಅವರ ಸಾಮರ್ಥ್ಯವನ್ನು ಗ್ರಹಿಸಿದ ಎಲ್ಲರಿಗೂ ಚಿರಋಣಿ. *ಮೌಲ್ಯದ ಹೊಳಪಿಗೆ ಸಾವಿಲ್ಲ*.
ದೂರದರ್ಶನ ದಂಡಿನ ಸರ್ ಅವರ ಸಂದರ್ಶನ ಪ್ರಸಾರ ಮಾಡಿತು. ನಿರ್ಮಲ ಎಲಿಗಾರ ನಂತರ ನನ್ನ ಬರಹದ ಮೇಲೆ ಹೊಸ ಬೆಳಕನ್ನು *ಬೆಳಗು* ಮೂಲಕ ಎರಡು ಬಾರಿ ಬಿತ್ತರಿಸಿದರು.
ಮುಖ್ಯಮಂತ್ರಿಗಳ ಕಾರ್ಯಕ್ರಮ ಮಹತ್ವದ ತಿರುವು ನೀಡಿತು.
***
ಪ್ರೀತಿ-ಪ್ರೇಮ-ಪ್ರಣಯ-ಮಾನ-ಅವಮಾನ--ಹಿಂಸೆ-ಸಮಸ್ಯೆ-ಕಿರುಕಳ ಎಲ್ಲವನೂ ಸಮಾನವಾಗಿ ಅನುಭವಿಸಿ ಸ್ವೀಕರಿದ್ದೇನೆ.
ಅತೀ ಹೆಚ್ಚು ಬರೆದ ದಾಖಲೆ. ಕಾವ್ಯ ಪ್ರಧಾನ. ನಿಲ್ಲದ ಮನದ ಮಾತುಗಳು. ಪುಟ್ಟ ಪುಟ್ಟ ಸಕಾಲಿಕ ಬರಹಗಳು.
ಸಾಮಾಜಿಕ ಜಾಲತಾಣಗಳ ಸಮರ್ಥ ಬಳಕೆ. ಓದಲಿ ಬಿಡಲಿ ಬರೆದು ತಲುಪಿಸುವ ವೇದಿಕೆ.
***
ಜನ ಎಲ್ಲದನ್ನೂ, ಎಲ್ಲರನ್ನೂ ಟೀಕೆ-ಟಿಪ್ಪಣೆ ಮಾಡುತ್ತಾರೆ. ಅವುಗಳನ್ನು ಲೆಕ್ಕಿಸದೇ, ಕೆಲವನ್ನು ಸ್ವೀಕರಿಸಿ ನಂಬಬೇಕು.
ಹಾಗೆ ನಂಬಿದ ಆಧ್ಯಾತ್ಮಿಕ ಕೇಂದ್ರ ಬಂಗಾರಮಕ್ಕಿಯ ಪೂಜ್ಯ ಮಾರುತಿ ಗುರೂಜಿ ಹಾಗೂ ಅವರ ಸಮಾಜೋಸಾಂಸ್ಕೃತಿಕ ಕಾರ್ಯಕ್ರಮಗಳು.
ಮಲೆನಾಡು ಉತ್ಸವ ಹಾಗೂ ದರ್ಶನ ನನ್ನ ಖಾಸಗಿ ಸಂಗತಿಗಳು ಅವುಗಳಿಗೆ ತಾರ್ಕಿಕ ಹಾಗೂ ಪ್ರಗತಿಪರ ಮಾನದಂಡ ಬೇಡ.
ಅದು ನನ್ನ ನಂಬಿಕೆ. ತಾನುಂಬುವ ಊಟ, ತನ್ನಾಸೆಯ ರತಿಸುಖದಂತೆ ವೈಯಕ್ತಿಕ ಆಚರಣೆಗಳಿಗೆ ಸ್ಪೇಸ್ ಇಟ್ಟುಕೊಳ್ಳಬೇಕು ಯಾರೂ ಕೊಡುವುದಿಲ್ಲ.
*ಧ್ಯಾನ-ಬರಹ-ಕಾಮ-ಊಟ ನನ್ನ ಆಯ್ಕೆ*. ಸಾರ್ವತ್ರಿಕ ಚರ್ಚೆ ಸಲ್ಲದು.
***
ಸಾಹಿತ್ಯ ಸಂಭ್ರಮ ಖುಷಿ ಕೊಟ್ಟ ಕಾರ್ಯಕ್ರಮ. ಸಮ್ಮೇಳನಕ್ಕೆ ಹೋಗಲಿಲ್ಲ. ಕರೆಯಲೂ ಇಲ್ಲ. ಪ್ರೊ.ಚಂಪಾ ಅವರಿಗೆ ಸಂದ ಗೌರವ. ನಂತರದ ವಿವಾದ ಕೂಡ ಇಂಟರೆಸ್ಟಿಂಗ್.
ಈ ವರ್ಷ ಅತೀ ಹೆಚ್ಚು ವಿವಾದಗಳು. ವಿಷಾದಗಳು.
ಒಂದರ ಚರ್ಚೆ ಮುಗಿಯುವದರೊಳಗೆ ಮತ್ತೊಂದು ಅದನ್ನು ಮರೆಸುವಂತಹದು.
ಆಗಿದ್ದು ಆಗಿ ಹೋಗುತ್ತೆ ಬಲಿಯಾದವರು ಬಲಿಯಾಗಿ ನಾಲ್ಕು ದಿನಗಳ ಸುದ್ದಿಯಾಗಿ ಮರೆಯಾಗಿ ಮಾಯವಾಗುತ್ತಾರೆ. ಯಾವುದೇ ಇತಿಹಾಸ ನಿರ್ಮಿಸದೆ.
ಆದರೆ ಇದ್ದವರು ದುರಾಸೆಗೆ ಬಿದ್ದು ಒಂದಿಷ್ಟು ಬಾಚಿಕೊಳ್ಳುತ್ತಾರೆ.
***
ಮರೆಯಾದ ಗೌರಿ, ದಾನಮ್ಮ ಇನ್ನೂ ನೂರಾರು ಜೀವಗಳು... ಒಮ್ಮೊಮ್ಮೆ ನಾವು-ನೀವೂ!
ಸಿದ್ಧಾಂತಗಳ ಕೂಗು ಕರ್ಕಶವಾಗಿ ಕೇಳುತ್ತಲಿದೆ, ಹೇಸಿಗೆ ಎನಿಸುವಷ್ಟು. ಎರಡರಲ್ಲೂ ಅತಿರೇಕದ ಅನಾಗರಿಕತೆ. ಆರೋಗ್ಯಪೂರ್ಣ ಚರ್ಚೆ ಬೇಡಾಗಿದೆ. ಬರೀ ಕತ್ತರಿಸೋ ಕೆಲಸ.
ವೀರಶೈವ-ಲಿಂಗಾಯತ ಒಂದು ತಾರ್ಕಿಕ ನಿಲುವು ಸಾಧ್ಯವಾಗಿದೆ. ಲಾಭ ಆಗಲಿ ಬಿಡಲಿ. ಬಣ್ಣ ಬಯಲಾಗಿದೆ. ಇನ್ನೂ ನಡೆದೇ ಇದೆ. ನಡೆಯಲಿ.
ಈಗ ಎಲ್ಲದರಲ್ಲೂ ರಾಜಕಾರಣದ ಲೆಕ್ಕ-ಆಚಾರ-ವಿಚಾರ.
ಎಲ್ಲ ಕಡೆ ಎಡ-ಬಲ. ಎರಡೂ ಅಲ್ಲದವರ ದಿವ್ಯ ಮೌನ.
ಅವರ ಸಂಖ್ಯೆಯೇ ಹೆಚ್ಚು. ಕಾಯ್ದು ನೋಡುವ ತಂತ್ರ.
*ಹಿಂಸೆ ವೈಭವೀಕರಿಸಿ ನೆತ್ತರು ಹರಿಯುವುದು ಬೇಡ*. ಸಿದ್ಧಾಂತಗಳ ಹೆಸರಿನಲ್ಲಿ.
ರಾತ್ರೋ ರಾತ್ರಿ ಬೆಳಕಿಗೆ ಬರುವ ಅಬ್ಬರದಿ ನಾವೇ ಕಳೆದುಹೋಗುವುದು ಗೊತ್ತಾಗುತ್ತಿಲ್ಲ.
ನಾಲಿಗೆ ಮನಸು ನಿಯಂತ್ರಣ ಕಳೆದುಕೊಂಡು ಹಾರಾಟ ನಡೆಸಿವೆ.
ನಮ್ಮ ಪಾಡಿಗೆ ನಾವು ಇರೋದು ಯಾರೀಗೂ ಬೇಡ. *ಏನಾದರೂ ಸದ್ದು-ಸುದ್ದಿ ಮಾಡಿ ಬದುಕಿದ್ದೇವೆ ಎಂದು ನಿರೂಪಿಸದಿದ್ದರೆ ನಮ್ಮ ಸಾವಿನ ಘೋಷಣೆ*.
***
ಎರಡು ಪುಸ್ತಕಗಳನ್ನು ಗೆಳೆಯರು, ಒಂದನ್ನು ನಾನು ತರುತ್ತಿರುವೆ.
ಬೆಂಗಳೂರಿನ ನಟ, ಕಲಾವಿದ, ಬರಹಗಾರ ಒನ್ ವ್ಹೀಲರ್ ಪ್ರಕಾಶನದ ಮಂಜುನಾಥ.ವಿ.ಎಂ. *ಪಿಸುಮಾತುಗಳ ಜುಗಲ್* ಅಂದವಾಗಿ ವಿನ್ಯಾಸಗೊಳಿಸಿ ಖುಷಿ, ಸಂತೃಪ್ತಿಗೆ ಕಾರಣರಾಗಿದ್ದಾರೆ.
ಲಂಕೇಶ್ ಪ್ರಭಾವವನ್ನೂ ಇನ್ನೂ ಕಾಪಿಟ್ಟುಕೊಂಡು ಬರೆಯುವ ಮಂಜುನಾಥ ಅವರ ಪುಸ್ತಕಪ್ರೀತಿ ಬೆರಗನ್ನುಂಟು ಮಾಡಿದೆ.
ಯುವ ಮಿತ್ರ ಆನಂದ ಕುಂಚನೂರ ನನ್ನ ಕನಸು ನನಸಾಗಲು ಜೊತೆಯಾದರು.
ಇಂತಹ ಒಂದು ಪ್ರಯತ್ನಕ್ಕೆ ಅಷ್ಟೇನು ಪರಿಚಿತರಲ್ಲದ ಹಿರಿಯ ಕಥೆಗಾರರಾದ ಕಲಬುರ್ಗಿಯ ಶ್ರೀಮತಿ ಕಾವ್ಯಶ್ರೀ ಮಹಾಗಾಂವಕರ್ ಉತ್ಸಾಹ ಹಾಗೂ ವಿಶ್ವಾಸದಿಂದ ಸಹಸ್ಪಂದಿಸಿ ಬರೆದದ್ದು ಒಂದು ಸುಂದರ ಕೃತಿ ಮೂಡಿ ಬರಲು ಕಾರಣವಾಯಿತು.
ಮಾನವೀಯ ಸಂಬಂಧಗಳು ತುಂಬ ಗೊಂದಲದಲ್ಲಿರುವಾಗ ಹೊಸ ಪ್ರಯೋಗಗಳು ಕಷ್ಟ ಆದರೂ ಸಕಾರಾತ್ಮ ಉದ್ದೇಶ ಇದ್ದರೆ ನಮ್ಮ ಆಸೆಗಳು ಈಡೇರುತ್ತವೆ. ಉದ್ದೇಶ ಸರಿ ಇರದಿದ್ದರೆ ಏನೂ ಆಗಲ್ಲ.
ಮೈಸೂರಿನ ಕವಿಮಿತ್ರ ಮಂಜುನಾಥ ಲತಾ ರೂಪ ಪ್ರಕಾಶನದ ಮೂಲಕ ಲೇಖನದ ಸಂಕಲನ
*ಅಸಂಗತ ಬರಹಗಳು* ---- ಓದಿ ಯಾರಿಗೂ ಹೇಳಬೇಡಿ ಮುದ್ರಣದಲ್ಲಿದೆ.
ಮರುಬರಹ, ಮರುಮುದ್ರಣ ಹೊಸ ರೂಪ ಪಡೆದು ಇಂಗ್ಲೆಂಡ್ ಪ್ರವಾಸ ಕಥನ
*ಕಲ್ಯಾಣದಿಂದ ಕೇಂಬ್ರಿಜ್ಜಿಗೆ* ---- ಮಗಲಾಯಿ ಹುಡುಗನ ಪಾರೆನ್ ಟೂರು. ಜಾಯಫುಲ್ ಲಿವಿಂಗ್ ಫೌಡೇಶನ್ ಮೂಲಕ ಹೊರ ಬರುತ್ತೆ.
*ಮೂರು ಪುಸ್ತಕಗಳು ನಿಮ್ಮ ಕೈಗೆ. ಖಂಡಿತವಾಗಿ*
ಇದಿಷ್ಟು ಅತ್ಯಂತ ಖುಷಿ ಕೊಟ್ಟ ಪುಸ್ತಕ ಸಂಭ್ರಮ.
***
ಸಹಕಾರ, ಶಿಕ್ಷಣ, ಸೌಹಾರ್ದ, ಸಾಹಿತ್ಯ ಪರಿಷತ್ತು, ರಿಜನಲ್ ಇನ್ಸಟೂಟ್ ಫಾರ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಆಯೋಜಿಸಿದ್ದ ನೂರಾರು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಾಯಫುಲ್ ಲಿವಿಂಗ್ ಇನ್ ಪರ್ಸನಲ್ ಐಂಡ್ ಪ್ರೊಫೆಶನಲ್ ಲೈಫ್ ಕುರಿತು ದಣಿವರಿಯದೆ ಬೆರೆತಿದ್ದೇನೆ.
ಆದರೆ 'ಈ ಸಾಮರ್ಥ್ಯವನ್ನು ಎನ್ ಕ್ಯಾಶ್ ಮಾಡಿಕೋ' ಅಂತಾರೆ ಆದರೆ ಬೇಡ ಅನಿಸಿದೆ.
ತುಂಬಾ ತನ್ಮಯನಾಗಿ ತರಬೇತಿ ನೀಡಿ ಕೇಳುಗರನ್ನು ಮೋಡಿ ಮಾಡುವ ಭರದಲ್ಲಿ ಒಳಗೊಳಗೆ ಕಳೆದುಹೋಗಿ ನಾನಾಗಿರುವುದೇ ಇಲ್ಲ.
ಬರೆಯುವಾಗ ಯಾವುದೇ *ಅವ್ಯಕ್ತ ಶಕ್ತಿ* ಕೈಹಿಡಿದು ಬರೆಸುತ್ತದೆ. ಮಾತಾಡುವಾಗ ಏನೋ ಪ್ರೇರಣೆ ಆದರೆ ಆವೇಶದಿಂದ ಮೈಮರೆತು ಮಾತನಾಡಿ ಹೈರಾಣಾಗಿರುತ್ತೇನೆ.
ಎಲ್ಲವನ್ನೂ ನಿಷ್ಟೆಯಿಂದ ಪೂರೈಸುವ ತುಡಿತ ತಾನಾಗಿ ಫಲ ನೀಡುವವರೆಗೆ ಕಾಯುವೆ.
***
ಒಂಬತ್ತು ತಿಂಗಳ ಹಿಂದೆ ಅನಿರೀಕ್ಷಿತವಾಗಿ ಕರಾವಳಿ ನಂಟು. ತರಬೇತಿಯೊಂದರಲ್ಲಿ ಭೇಟಿ ಆದ ಭಾಸ್ಕರ ದೇವಸ್ಯ ಮಂಗಳೂರು ಬಂಧನಕ್ಕೆ ನಾಂದಿ.
ಸುಪ್ತಮನಸಿನ ಹಲವು ಆಲೋಚನೆಗಳು ಗಟ್ಟಿಯಾಗಿರಬೇಕು, ಸುಪ್ತಮನಸು ಪ್ರಾಂಜಲವಾಗಿರಬೇಕು. ಆಸೆಗಳು ಈಡೇರುವುದರಲ್ಲಿ ಅನುಮಾನ ಬೇಡ.
ಹೊಸ ಸವಾಲುಗಳನ್ನು ಹುಂಬತನದಿಂದ ಸ್ವೀಕರಿಸಿ ಒದ್ದಾಡುವುದು ನನ್ನ ಜಾಯಮಾನ. ಆದರೆ ಶಕ್ತಿ ಮೀರಿ ಪ್ರಯತ್ನಿಸಿದಾಗ ಪ್ರಯಾಸದಿಂದ ಗುರಿ ತಲುಪುತ್ತೇನೆ.
ಮಂಗಳೂರು-ಕಟೀಲು-ನಿಡ್ಡೋಡಿ-ಕಾಂತಾವರ = ಜ್ಞಾನರತ್ನ ಅನಿಸಿದೆ ನೋಡೋಣ.
*ಎಲ್ಲದೂ ಅವನ ಮಹಿಮೆ*.
ಗ್ರಾಮೋತ್ಸವ ಅರ್ಥಪೂರ್ಣ.
ಭಾಸ್ಕರಗೌಡ ದೇವಸ್ಯ ಅವರ ಒಳ್ಳೆಯತನಕ್ಕೆ ಒಳ್ಳೆಯದಾಗಲಿ.
ಕಡೀ ದಿನ ಆನಂದ ಕುಂಚನೂರ ಕತೆಗಳ ಅನಾವರಣ. *ಮಹತ್ವದ ವ್ಯಕ್ತಿಗಳ ಮಿಲನ*.
***
*ಸಂಕಲ್ಪ*
Joyful living ಸರಿಯಾಗಿ ಅರಿತಿದ್ದೇನೆ... ಆದರೆ ಪಾಲನೆ ?
Self evaluation ಬೇಕಲ್ಲ !
ಮುಖ್ಯವಾಗಿ ಬದುಕನ್ನು ಅಲುಗಾಡಿಸುವ *ಅರ್ಥವ್ಯವಸ್ಥೆ* ಸರಿದಾರಿಗೆ ಬಂದಾಗ ಅರ್ಧ ಗೆದ್ದಂತೆ.
ಕೆಲವು ಸಂಬಂಧಗಳನು ಎಚ್ಚರಿಕೆಯಿಂದ ನಿಭಾಯಿಸಬೇಕು.
ಬೇಕಾದವರನ್ನು ಬೇಕಾದ ರೀತಿಯಲ್ಲಿ ಪಡೆದುಕೊಳ್ಳುತ್ತೇವೆ ಆದರೆ ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ.
ನಾನು ಹೆಚ್ಚು ಭಾವುಕನಾಗದೆ ಸಂಯಮದಿ ನಡೆದುಕೊಂಡು ಕಾಪಾಡುವ ಸೂಕ್ಷ್ಮ ಜವಾಬ್ದಾರಿ ಹೊರಬೇಕು.
*ಜಗ್ಗಾಟದಲಿ ಹರಿಯಬಾರದು*.
*ಕಾಲ, ಉತ್ತಮರ ಪ್ರೀತಿ ಕಳೆದ ಮೇಲೆ ಸಿಗುವುದೇ ಇಲ್ಲ*.
ಆರೋಗ್ಯದ ಕುರಿತು awareness ಇನ್ನೂ ಹೆಚ್ಚಾಗಬೇಕು.
*ತಿರುಗಾಟ-ಮಾತು-ಉಸಾಬರಿ ಕಡಿಮೆ ಆಗಿ
ಓದು-ಬರಹ-ಧ್ಯಾನ ಹೆಚ್ಚಾಗಬೇಕು*.
*ಆನೆ ಬಲ*
ಆರೋಗ್ಯ-ನೆಮ್ಮದಿಗಾಗಿ ಮಾತ್ರ ಪ್ರಾರ್ಥಿಸಬೇಕು.
ಎಲ್ಲರೂ ಹೆಚ್ಚು ಖುಷಿಯಾಗಿರಲಿ ಎಂದು ಬಯಸಿದಾಗ ಖುಷಿ ತಾನಾಗಿಯೇ ಸಿಗುತ್ತದೆ.
*ಶ್ರೀ.ಎಂ*. ಹಾಗೂ ಅವರು ದಯಪಾಲಿಸಿದ ಕರುಣೆಯನ್ನು ನಿರಾಯಾಸವಾಗಿ ಕಾಪಾಡಬೇಕು.
ಐದು ವರ್ಷಗಳಿಂದ ಹೊಸ ವರ್ಷವನ್ನು ನಶೆಯಿಲ್ಲದೆ ಸ್ವಾಗತಿಸಿದ್ದೇನೆ. ಸಣ್ಣಪುಟ್ಟ ಬದ್ಧತೆಗಳು ಕೂಡ ದೊಡ್ಡ ಖುಷಿ ನೀಡುತ್ತವೆ.
ಗುರು-ಹಿರಿಯರು-ಜನ್ಮದಾತರ ಕೃಪೆಯೊಂದಿಗೆ ನಿಮ್ಮ ಹಾರೈಕೆಯೂ ಇರಲಿ.
Wish you Happy New Year.
---ಸಿದ್ದು ಯಾಪಲಪರವಿ.
ಹೋದ ವರ್ಷ ಬರೆದದ್ದು....
No comments:
Post a Comment