#ಮಾನಸೋಲ್ಲಾಸ
*ಹಾರಿ ಹೋಗುವ ಜೀವಕೆ ಯಾಕೆ ತಲ್ಲಣ*
ಗೊತ್ತು ನಮಗೆಲ್ಲ ಇದು ಥಟ್ ಅಂತ ಹಾರಿ ಹೋಗುವ ಜೀವ. ಮಿತಿಮೀರಿದ ಅಹಮಿಕೆ, ಅಪಾರ ಸೋಗಲಾಡಿತನ, ಭಯಾನಕ ಮಹತ್ವಾಕಾಂಕ್ಷೆ, ಕಳೆದುಕೊಂಡರೆ ಹೇಗೆಂಬ ಅನುಮಾನ, ಬಿಡಲಾರೆನೆಂಬ ವ್ಯಾಮೋಹ, ಹಪಾಹಪಿ, ಚಡಪಡಿಕೆ, ಧಾವಂತ, ಅಸಹನೆ, ಮನೋವಿಕಾರ, ಚಪಲತೆ…
ಅಯ್ಯೋ ಬಿಡಿ ನೆಗೆಟಿವ್ ಭಾವಗಳ ಪಟ್ಟಿ ದೊಡ್ಡದಿದೆ. ಇದು ಆಗಾಗ ನನ್ನೊಳಗೆ ಕಾಡುವ, ಕೆಣಕುವ ವಿಕಾರಗಳು.
ನಿಜ ಆತ್ಮಾನುಸಂಧಾನಕೆ ಇಳಿಸುವ ಮನಸಿಗೆ ಪಾಠ ಕಲಿಸಲೆಂದೇ ಆಸ್ಪತ್ರೆ, ಸ್ಮಶಾನಗಳ ಭೇಟಿ, ಉಕ್ಕಿ ಹರಿಯುವ ಅನರ್ಥ ಸ್ಮಶಾನ ವೈರಾಗ್ಯ.
ನನಗಿರುವ ಭಯಾನಕ ವ್ಯಾಮೋಹವನ್ನು ಮೋಹಿಸುವ ಸಂಗಾತಿಗಳಿಗೆ ಪ್ರಾಮಾಣಿಕವಾಗಿ ಹೇಳಿ ತಪ್ಪನ್ನು ಒಪ್ಪಿಕೊಳ್ಳುವ ಸಜ್ಜನಿಕೆ. ನಿರ್ಮೋಹಿಯಾಗುವ ಇರಾದೆ ಮಾತ್ರ ನಿಲ್ಲುತ್ತಿಲ್ಲವೆಂಬುದೇ ಸದ್ಯದ ಸಮಾಧಾನ.
ಉಸಿರಾಟ ಕ್ರಿಯೆಯ ಒಳಹೊರಗಿನಾಟ ಇರುವತನಕ ಈ ಜೀವ ಇರುತ್ತದೆ. ಒಳಹೊರಗಿನ ಪ್ರಕ್ರಿಯೆ ನಿಂತ ಕೂಡಲೇ ನಮ್ಮ ಕತೆ ಮುಗಿಯಿತು.
ಈ ತಲ್ಲಣವೂ ಈ ಜನುಮಕೆ ಜೋಡು. ಸಂಗತಿ ಅರಿತಿರುವ ಸಂಗಾತಿಗಳು ಸಹಿಸಿಕೊಳ್ಳಲೆಂಬ ಬಯಕೆ ಬೇರೆ.
ನಮ್ಮ ಸಾಮಿಪ್ಯದ ಸಂಗಾತಿಗಳು ನಮ್ಮನ್ನು ಸದಾ ಮುದ್ದು ಮಾಡಲಿ ಆದರೆ ನಾ ಮಾಡಬಹುದು ಇಲ್ಲ ಬಿಡಬಹುದು.
ಇದ್ಯಾವ ನ್ಯಾಯ ಅಂತೀರಾ? ಹೌದು ಮನಸಿನ ಕುರುಡಿಗೆ ಏನೂ ಕಾಣಿಸುವುದೇ ಇಲ್ಲ.
ಜೋರಾಗಿ ಕೂಗಾಡಿ, ಮನಸ ನೋಯಿಸಿ, ಮತ್ತೆ ಮಗುವಿನ ಹಾಗೆ ಬಿಕ್ಕಿ ಬಿಕ್ಕಿ ಅತ್ತು ಸೊಕ್ಕ ಮರೆತಾಗ ಥೆಟ್ ಹುಚ್ಚು ಖೋಡಿ ಮನಸು.
ಹಟ, ದಿಮಾಕು, ಸೊಕ್ಕು ತುಂಬಿ ತುಳುಕಿ ಮುಖ ಗಂಟಿಕ್ಕಿ ಮಗುವಿನ ಹಾಗೆ ರಚ್ಚೆ ಹಿಡಿಯುವ ಮನಸ ರಮಿಸಲು ಸಾವಿರದ ನಿರ್ಮಲ ಕೈಗಳೇ ಬೇಕು.
ಉಸಿರ ಹಸಿರಲಿ ಅರಳಿ ಘಮಘಮಿಸುವ ಕಂಪಿನ ಇಂಪಲಿರುವ ಸಂಗಾತಿಗಳು ನಿಜಾರ್ಥದಲಿ ನಮ್ಮವರಾಗಿದ್ದಾರೆ ಈ ಹುಚ್ಚಾಟಗಳ ಸಹಿಸಿಕೊಂಡು ಎದೆಗವಚಿ ಕೆನ್ನೆಗೆ ನಾಲ್ಕು ಬಾರಿಸಿ ಬುದ್ಧಿ ಹೇಳುತ್ತಾರೆ *ಥೇಟ್ ಅವ್ವನ* ಹಾಗೆ.
ಸಹನೆ ಕಳೆದುಕೊಂಡವರು, ಯಾವುದೋ ಸ್ವಾರ್ಥಕೆ ಬೆನ್ನು ಬಿದ್ದವರು ನಡು ರಸ್ತೆಯಲಿ ಕೈಬಿಟ್ಟು ನಡೆದೇ ಬಿಡುತ್ತಾರೆ.
*ಸ್ವಾರ್ಥಿಗಳ ಕಂಡು ಹಿಡಿಯುವ ಗೊಂದಲದಲಿ ನಿಸ್ವಾರ್ಥ ಜೀವಗಳು ಘಾಸಿಗೊಳ್ಳುವುದು ಬೇಡ ಮಗಾ* ಎಂದು ಯಾರೋ ಕೂಗಿ ಹೇಳಿದಂತಾಗಿ ಥಟ್ಟನೇ ಎದ್ದು ಕುಳಿತೆ.
*ಬಳಿ ನೀನಿದ್ದೆ. ನಿನಗೋ ಬರೀ ನಿದ್ದೆ*.
*ಸಿದ್ದು ಯಾಪಲಪರವಿ*
No comments:
Post a Comment