*ಆತ್ಮೀಯರ ಅಂತರಂಗ ಕೇಳಿಸಲಿ*
ಅನೇಕ ಬಾರಿ ಹೇಳಿಕೊಂಡಂತೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಅಬ್ಬಬ್ಬಾ ಅಂದರೆ ನಾಲ್ಕೇ ಜನ ಆತ್ಮೀಯರಿರುತ್ತಾರೆ. ಅದನ್ನೇ ಇನ್ನರ್ ಸರ್ಕಲ್ ಅಂತಾರೆ.
ಬದುಕಿನ ಕೊನೆ ಪುಟಗಳಲಿ ಅವರೂ ಕರಗಿ ವ್ಯಕ್ತಿ ಒಂಟಿಯಾದಂತೆ ಭಾಸವಾಗುತ್ತದೆ.
ಅವನು ಒಂಟಿ ಅಲ್ಲದಿದ್ದರೂ ವಯೋಮಾನಕನುಗುಣವಾಗಿ ಆತ್ಮೀಯರು ಮಾನಸಿಕವಾಗಿ ದೂರಾದಾಗ ಇನ್ನಿಲ್ಲದ ಹಳವಂಡ.
*ಅನಾರೋಗ್ಯ-ಮುಪ್ಪು-ಸಾವು* ಬುದ್ಧ ಹೇಳಿದ ತ್ರಿಸೂತ್ರಗಳು ವಯಸ್ಸಾದ ಮೇಲೆ ನೆನಪಾಗುವುದು ಹೆಚ್ಚು ಅಪಾಯಕಾರಿ.
ಹರೆಯದಲ್ಲಿ ಬಿಂದಾಸ್ ಆಗಿ ಕಾಲ ಕಳೆಯುವ ಮನಸಿಗೆ ಮುಪ್ಪು, ಅನಾರೋಗ್ಯ ನೆನಪಿಸಿಕೊಳ್ಳುವ ಮನಸಾಗುವುದಿಲ್ಲ.
ಆದರೆ ನಾವ್ಯಾರು ಇದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.
ನಮ್ಮ ಅನಾರೋಗ್ಯಕ್ಕಿಂತಲೂ ಆತ್ಮೀಯರ ಅನಾರೋಗ್ಯ, ಅಗಲಿಕೆ ನಮ್ಮನ್ನು ಕಂಗಾಲಾಗಿಸುವುದು ಸಹಜ.
ಒಂಟಿತನವನ್ನು ಏಕಾಂತವಾಗಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಸಂಗೀತ,ಓದು,ಬರಹ ಹಾಗೂ ಏಕಾಂಗಿ ಅಲೆದಾಟ ನಮ್ಮ ಹವ್ಯಾಸವಾಗಬೇಕು.
ಆತ್ಮೀಯರು ಪದೇ ಪದೇ ಭೇಟಿಯಾಗಿ ಹರಟೆ ಹೊಡೆದು ನಮ್ಮೊಂದಿಗೆ ಕಾಲಹರಣ ಮಾಡಲಿ ಎಂಬ ಆಸೆ ಕೈಬಿಡಬೇಕು.
ಮಕ್ಕಳು ಅಷ್ಟೇ ತಮಗೆ ಸರಿ ಕಂಡಂತೆ ಬದುಕು ರೂಪಿಸಿಕೊಳ್ಳುತ್ತಾರೆ.
ಈಗ ಐವತ್ತರ ಗಡಿ ದಾಟಿದವರು ಸ್ವಯಂ ಘೋಷಿತ ಸೀನಿಯರ್ ಸಿಟಿಜನ್ ಆದವರಂತೆ ವರ್ತಿಸುತ್ತಾರೆ.
ನಾನೂ ಆಗಾಗ ನನ್ನ ಇನ್ನರ್ ಸರ್ಕಲ್ ನಲ್ಲಿ ಯಾರಿದ್ದಾರೆ ಎಂದು ಅಡಿಟ್ ಮಾಡಿಕೊಳ್ಳುತ್ತೇನೆ. ಹೆಚ್ಚಿಗೆ ಬೇರೆಯವರ‌್ಯಾರೂ ಸೇರಿಕೊಂಡಿರುವುದಿಲ್ಲ, ಇದ್ದವರೇ ಕಳಚಿಕೊಂಡಿರುತ್ತಾರೆ. ಹಾಗೆ ಕಳಚಿಕೊಳ್ಳವುದಕ್ಕೆ ಅವರದೇ ಕಾರಣಗಳೂ ಇರುತ್ತವೆ ಅನ್ನಿ.
ಅಂತಹ ಅನಾಥಪ್ರಜ್ಞೆ, ಒಂಟಿತನ ಕಾಡುವ ಗೆಳೆಯರ ಮಾತಿಗೆ ಆಗಾಗ ಮನಸಾರೆ ಕೇಳುವ ಕಿವಿಯಾಗುತ್ತೇನೆ. ಅವರ ಅನುಭವಗಳು ನನ್ನನ್ನು ಎಚ್ಚರಿಸಿದಂತಾಗುತ್ತದೆ.
*ಹೀಗೆಯೇ ಕೆಲವು ಸಕಾರಣಗಳ ಗುರುತಿಸಬಹುದು*.
ನಮ್ಮ ಜೀವನಶೈಲಿ ಹಾಗೂ ಸಿದ್ಧಾಂತಗಳನ್ನು ಅವರೂ ಅನುಕರಿಸಲಿ ಎಂಬ ಆಸೆಯೂ ದುಃಖಕ್ಕೆ ಮೂಲ.
ಈ Generation Gap ಅರ್ಥಮಾಡಿಕೊಂಡು ಸಿಡಿಮಿಡಿ ನಿಲ್ಲಿಸಬೇಕು.
ಅನಾರೋಗ್ಯ ಹಾಗೂ ವಯೋಮಾನ ಸಹಜ ಆತಂಕಗಳನ್ನು ನಿರ್ಭಯವಾಗಿ ಸ್ವೀಕರಿಸಿ, ನಿರೀಕ್ಷೆಗಳನ್ನು ನಿರಾಕರಿಸಿ ನಿರ್ಲಿಪ್ತವಾಗಿ ಖುಷಿಯಿಂದ ಕೇವಲ ನಮಗಾಗಿ ಬದುಕುವ ಸಣ್ಣ ಸ್ವಾರ್ಥ ಅನಿವಾರ್ಯ.
ಸ್ವಾರ್ಥ ಹಾಗೂ ಇಲ್ಲ ಎಂದು ಹೇಳುವ ನಿಷ್ಠುರತೆ ಇಳಿಗಾಲದಲ್ಲಿ ಅನಿವಾರ್ಯ. ನಮ್ಮ ಇನ್ನರ್ ಸರ್ಕಲ್ ನಿಂದ ಜನ ಕಳಚಿಕೊಂಡಾರು ಎಂಬ ತಲ್ಲಣ ಬೇಡ. *ಕಳಚಿಕೊಳ್ಳುತ್ತಾರೆ*, ಕಳಚಿ ಹೋಗುವುದು ಕಾಲನ ಅನಿವಾರ್ಯ ನಿಯಮ.
ಅದರಂತೆ ಅನಿರೀಕ್ಷಿತವಾಗಿ ಅಪ್ಪಳಿಸುವ ಅನಾರೋಗ್ಯ ಹಾಗೂ ಅಗಲುವಿಕೆಯನ್ನು ನಿರ್ಲಿಪ್ತವಾಗಿ ಸ್ವೀಕರಿಸಿ ಸಣ್ಣ ನಿಟ್ಟುಸಿರು ಬಿಟ್ಟು ಮುಂದೆ ಸಾಗೋಣ, *ನಮ್ಮ ಪಾಳೆ ಬರುವತನಕ*.
*ಸಿದ್ದು ಯಾಪಲಪರವಿ*
No comments:
Post a Comment