Tuesday, April 24, 2018

ಮುಗಿಯದ ಒಲವಪಯಣ

*ಮುಗಿಯದ ಒಲವಪಯಣ*

ಸಾವಿರದ ಸರಸದಿ ವಿರಸದ
ಮಾತೇಕೆ ದೇವನೊಲಿದ ಮೇಲೆ
ಈ ಲೋಕದ ಹಂಗೇಕೆ

ಅನುಮಾನ ಇರಲಿ ಒಲವ ಬೆಸುಗೆ
ಬಿಗಿಯಾಗಿ ಬಂಧನ‌ ಬಲಿಯಲು

ಏಕಾಂತದ ಬಾಗಿಲು ತೆರೆಯಲು
ನೆನಪಿನಲೆಗಳ ಅಬ್ಬರದೇರಿಳಿತ ನಾ
ಒಂಟಿಯಾದರೆ ಸಾಕು ಬರೀ ಒಲವ
ದಾಹ ತೀರದ ಬಯಕೆಗಳ ರಿಂಗಣ

ನನ್ನ ಎದೆಗೂಡಲಿ ಸಾವಿರದ ಚಿತ್ತಾರ
ನಗು ಖುಷಿ ಕೇಕೆಯ ಕಲರವ ಪಿಸು
ಮಾತುಗಳ‌ ತಲ್ಲಣ ಒಲವ ಗೀತೆಯ
ರಿಂಗಣ

ಪದಗಳು ಮುಗಿದರೂ ಮಾತಿಗಿಲ್ಲ ಕೊನೆ
ಮತ್ತದೇ ಬತ್ತದ ಒಲವ ಸುತ್ತ
ಮುತ್ತ ಅಲೆದಾಟ ಮತ್ತಿನಾಟ

ರಾಗ‌ ಅದೇ ಶಬ್ದ ಬೇರೆ ಭಾವ ಒಂದೇ
ಒಲವ ತಿರುಳ ಅರಿತು ಒಂಟಿತನ
ಅಳಿಸಲು

ಬಾ ಎನ್ನಲಾಗದೇ ಸುಮ್ಮನೇ ಇರದೇ
ಇನ್ನಿಲ್ಲದ ಕ್ಯಾತೆ ಕಾಲು ಕೆದರಿ
ಸಣ್ಣ ಮಕ್ಕಳ ಜಗಳ
ರಮಿಸುವ ಭರದಲಿ ಅಳು
ನಗುವಿನ ಹುಚ್ಚಾಟದಾಟ

ವಯಸು ಮನಸು ಮಾಗಿದ
ಸಂಧ್ಯಾಕಾಲದಲೂ ಮುಗಿಯದ ತಲ್ಲಣ
ಹುಚ್ಚು ಹುಡುಗಾಟ ಜೀವ ಚೈತನ್ಯದ
ಹುಡುಕಾಟ

ಕಳೆದು ಕೊಳ್ಳಲಾಗದ ಯಾರೂ ಕಸಿಯ
ಲಾಗದ ಎಂದಿಗೂ ಕುಸಿಯದ
ಕಾವ್ಯಲೋಕದ ಸ್ವಪ್ನ ಸೌಧದ
ಮುದ್ದು ಮಕ್ಕಳಿಗೆ ಇಲ್ಲಿ ಈಗ
ಅವನ ಅಜ್ಜಗಾವಲು

ನಿರ್ಭಯದಿ ಜೊತೆಯಾಗಿ ಹಾಡಿ
ನಲಿಯಲು ಕೂಡಿ ಆಡಲು

ನನಗೆ ನೀ
ನಿನಗೆ ನಾ
ಬೇಕೇ
ಬೇಕು.

-----ಸಿದ್ದು ಯಾಪಲಪರವಿ.

No comments:

Post a Comment