*ನಾನೊಬ್ಬ ನೀಚ*
ತುಂಬಾ ವರ್ಷಗಳ ನಂತರ ಭೇಟಿ. ಅವಳು ಬಹಳ ನೊಂದಿದ್ದಳು. ಸಾಂತ್ವನದ ಮಾತುಗಳೂ ವ್ಯರ್ಥ ಅನಿಸಿದ ಪ್ರಸಂಗ. ' ಹೋಗಲಿ ಬಿಡು ಆದದ್ದು ಆಗಿ ಹೋಗಿದೆ, ಈಗ ಹೇಗಿದ್ದರೂ ಸರಕಾರಿ ಹುದ್ದೆ ಇದೆ. ಮಗ ಬೆಳೆಯುತ್ತ ಇದ್ದಾನೆ ಖುಷಿಯಾಗಿ ಕಾಲ ಕಳೆ ' ನನ್ನ ಮಾತಿನ ವರಸೆ ಅವಳಿಗೆ ಇಷ್ಟವಾಗಿರಲಿಲ್ಲ ಎಂಬುದು ಇತ್ತೀಚೆಗೆ ಅರ್ಥವಾಗಿದೆ.
ಕವಿಗೋಷ್ಟಿ ಮುಗಿದ ಮೇಲೆ ಲಕ್ಕುಂಡಿಯ ಪ್ರಸಿದ್ಧ ಸೂರ್ಯ ದೇವಾಲಯಕ್ಕೆ ಹೋದಾಗ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡು ತಮಾಷೆ ಮಾಡಿ ನಗಿಸಿದೆ. ಅವಳು ಮೊದಲ ಬಾರಿಗೆ ನಕ್ಕವಳಂತೆ ನಕ್ಕಳು. ' ಬೆಂಗಳೂರಿಗೆ ಬಾ ಮಗನನ್ನು ಕರೆದುಕೊಂಡು ಎಲ್ಲಿಗಾದರೂ ಸಣ್ಣ ಟೂರ್ ಹೋಗೋಣ ಅವನಿಗೂ ಚೈಂಜ್ ಅನಿಸುತ್ತೆ' ಹೂಂ ಗುಟ್ಟಿದೆ.
ಒಂದೆರಡು ತಿಂಗಳ ನಂತರ ಬೆಂಗಳೂರಿಗೆ ಹೋಗಿ ಫೋನಾಯಿಸಿದಾಗ ಅವಳೇ ಟೂರ್ ವ್ಯವಸ್ಥೆ ಮಾಡಿದ್ದಳು. ಗಂಡನ ಸಹವಾಸ ಮತ್ತವನ ಕ್ರೌರ್ಯ ವಿವರಿಸಿ ಕಣ್ಣೀರಿಟ್ಟಳು. ' ನೋಡು ನಾನವನನ್ನ ತುಂಬ ಪ್ರೀತಿಸಿ ಮದುವೆಯಾದೆ, ಅವನು ಸರಿಯಿಲ್ಲ ಎಂಬ ನಿನ್ನ ಸಲಹೆಯನ್ನು ಲೆಕ್ಕಿಸಲಿಲ್ಲ. ಅದೇ ಸಿಟ್ಟಲ್ಲಿ ನೀ ನಮ್ಮ ಮದುವೆಗೂ ಬರಲಿಲ್ಲ, ನೀನೊಬ್ಬ ಇಡಿಯಟ್ ಅಂದುಕೊಂಡು ಸುಮ್ಮನಾದೆ. ಮಗ ಹುಟ್ಟಿದ ಮೇಲೆ ಅಸಹನೀಯವೆನಿಸಿ ಡೈವರ್ಸ್ ಸುಡುಗಾಡು ಏನೂ ಬೇಡವೆನಿಸಿ ಮನೆ ಸೇರಿದೆ.
ಮಗನ ಬೆಳವಣಿಗೆ ಸರಕಾರಿ ಕೆಲಸದೊಂದಿಗೆ ಕವಿತೆ ಬರೆದು ಕಾಲಕಳೆಯುತ್ತ ಇದ್ದೇನೆ.' 'ಈಗ ನಿನ್ನ ಭೇಟಿ, ಸಾಂತ್ವನದ ಮಾತುಗಳು ಕೊಂಚ ಖುಷಿ ತಂದಿದೆ ಮಾರಾಯ' ಒಂದೆರಡು ದಿನ ಎಡೆಯೂರು, ಶಿವನಸಮುದ್ರ ಸುತ್ತಾಡಿದೆವು. ಒಬ್ಬ ಗೆಳೆಯನಾಗಿ , ಗೆಳೆಯನ ಹೆಂಡತಿಗೆ ತೋರುವ ಔದಾರ್ಯ, ಅನುಕಂಪ, ಸೌಜನ್ಯ ಹಾಗೂ ನಿರ್ಮಲ ಪ್ರೇಮ ತೋರಿದೆ.
ನನ್ನ ವರ್ತನೆ ಹಾಗೂ ಸಹನೆಯ ಬಗ್ಗೆ ನನಗೆ ಅಭಿಮಾನವೆನಿಸಿತು. ಇಬ್ನರೂ ಇಂಗ್ಲಿಷ್ ಸಾಹಿತ್ಯ ಓದಿದವರು, ಬದುಕನ್ನು ತುಂಬಾ ವಾಸ್ತವಿಕ ನೆಲೆಯಲ್ಲಿ ನೋಡಿದ್ದರೂ ಸಂಯಮ ಕಳೆದುಕೊಳ್ಳದಿರುವದೇನು ಹೆಗ್ಗಳಿಕೆ ಎನಿಸಲಿಲ್ಲ. ಎಡೆಯೂರಲ್ಲಿ ಕೊರಳಲಿ ಹಾಕುವ ಜಪಮಾಲೆ ಕೊಡಿಸಿದ್ದೆ. ನನ್ನ ಮುಗ್ಧತೆಗಾಗಿ ಅಭಿಮಾನ ಪಟ್ಟು ಊರು ಸೇರಿದ್ದೆ.
***
ಊರು ಸೇರಿದ ಒಂದು ವಾರದ ನಂತರ ಕೋರಿಯರ್ ತಲುಪಿದಾಗ ಆಘಾತವಾಯಿತು. ನಾನು ಕೊಡಿಸಿದ ಜಪಮಾಲೆಯೊಂದಿಗೆ ಸಣ್ಣ ಒಕ್ಕಣೆ ಇತ್ತು. ' ನೀನು ಇಷ್ಟೊಂದು ಜಂಟ್ಲಮನ್ ತರಹ ವರ್ತಿಸಲಿ ಎಂದು ನಾ ನಿನ್ನನ್ನು ಶಿವನಸಮುದ್ರಕ್ಕೆ ಕರೆದುಕೊಂಡು ಹೋಗಿರಲಿಲ್ಲ, ನನ್ನ ಭಾವನೆಗಳನ್ನು ಅರ್ಥಮಾಡಿಕೊಂಡು ಖುಷಿ ಕೊಡುತ್ತೀ ಎಂಬ ಭರವಸೆ ಇಟ್ಟುಕೊಂಡಿದ್ದೆ. ಆದರೆ ನೀನೊಬ್ಬ ಅಸೂಕ್ಷ್ಮ , outdated ನೀಚ ಅನಿಸಿಬಿಟ್ಟೆ. I never meet you again'
---ಸಿದ್ದು ಯಾಪಲಪರವಿ.
No comments:
Post a Comment