*ಹೀಗೊಂದು ಕರೆ ಕೇಳಿಸುತ್ತಲೇ ಇದೆ*
*ಎಲ್ಲಿಯೂ ನಿಲ್ಲದಿರು...* ಅನಿಕೇತನದಲಿ ಕುವೆಂಪು ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ ನಾ ಕೇಳಿಸಿಕೊಂಡದ್ದು ತಪ್ಪಾಯಿತು.
*ಎಲ್ಲಿಗೋ ಪಯಣ ಯಾವುದೋ ದಾರಿ ಏಕಾಂಗಿ* ಎಂಬಂತೆ ತಿರುಗಿದ್ದೆ ತಿರಿಗಿದ್ದು.
ಲೆಕ್ಕ ಇಟ್ಟರೆ ಗಾಬರಿಯಾಗುವಷ್ಟು ಅಲೆದಾಡಿದ ಅಲೆಮಾರಿ.
ಓದು-ಬರಹ ಚುರುಕಾಗಿ ಚೇತರಿಸಿಕೊಂಡಿರುವ ಕಾಲವಿದು.
ಪಯಣದ ತುಡಿತ ಆರಂಭವಾಗಿರುವ ಮೂರನೇ ಹಂತ. ಹಿಂದಿನ ಎರಡು ವಿಫಲತೆ ಕಲಿಸಿದ ಅನುಭವ ಸಣ್ಣದಲ್ಲ. *ಬಿಡುವ ಉಸಿರು, ಇಡುವ ಹೆಜ್ಜೆಯಲ್ಲಿ ಸಾವಿರದ ಲೆಕ್ಕಾಚಾರ*.
ಬಂದು ಹೋದವರು ಕೊಂದು ಹಾಕಿದವರ ದಂಡೇ ಇದೆ.
ಮೇಲೇಳಲಾರದ ಹಾಗೆ ಹೊಡೆತ ಕೊಟ್ಟವರೂ ಎದೆ ಮೇಲೆ ನಿಂತು ಕಾಯುತ್ತಲೇ ಇದ್ದಾರೆ.
ನಾನೆಂದೂ ಮೇಲೇಳದೇ ಅವರ ಮನೆ ಮುಂದೆ ನಿಲ್ಲಬಹುದೆಂಬ ಕನಸು ಕಂಡವರು, ಬೆನ್ನಲ್ಲಿ ಇರಿದರೂ ಸಿಕ್ಕಾಗ ನಗುಮೊಗದ ಮುಖವಾಡದವರು ನಗುತ್ತಲೇ ಇದ್ದಾರೆ.
'ಅಯ್ಯೋ ನಮ್ಮ ಕೈಯಲ್ಲಿ ಏನಿದೆ *ಅವನು* ಕಾಯಬೇಕು ಅಷ್ಟೇ' ಎಂದು ಮುಗಿಲು ತೋರಿಸಿ ವ್ಯಂಗ್ಯವಾಡಿದವರೂ ಆಗಾಗ ನೆನಪಾಗಿ ಕಾಡುತ್ತಾರೆ.
ಇತಿಹಾಸ ಕಲಿಸಿದ ಪಾಠ ಮರೆಯದೇ ಹೊಸ ಹೆಜ್ಜೆ ಹಾಕುವ ಸಂಧಿಕಾಲವೋ, ಸಂಕ್ರಮಣವೋ ನಾ ಕಾಣೆ.
ಆದರೂ ಅಭ್ಯಾಸಬಲ ಮನಸು ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತದೆಯಾದ್ದರಿಂದ ಏನೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜಾಗರೂಕತೆ ಇರಲೇಬೇಕು.
ಆ ಕಟ್ಟೆಚ್ಚರ ಇಟ್ಟುಕೊಂಡೇ ಹೊಸ ಆಲೋಚನೆಗೆ ಕೈ ಹಾಕಿದ್ದೇನೆ.
ಆಗಾಗ ಕಾಡುವ ಬುದ್ಧ, ಅಲ್ಲಮ ಹಾಗೂ ಸಂತರು ಕರೆದಂತಾಗುತ್ತದೆ. ಆಧ್ಯಾತ್ಮಿಕ ತಲ್ಲಣಗಳು ಒಮ್ಮೊಮ್ಮೆ ಭ್ರಾಂತು ಅನಿಸಿಬಿಡುತ್ತೆ.
ಆದರೆ ಒಮ್ಮೆ ಪರಿಪೂರ್ಣ ಅರಿವು ಮೂಡುವವರೆಗೆ ಗೊಂದಲ ನಿಲ್ಲುವುದಿಲ್ಲ.
ಆಧಿಕಾರ ಲಾಲಸೆ, ಧನದಾಹ, ವ್ಯಾಮೋಹ ನಿಲ್ಲುವತನಕ ಈ ಹೊಯ್ದಾಟ ಸಹಜ.
ನೆಲೆಗೊಳ್ಳುವ ಬಯಕೆ ಇಮ್ಮಡಿಯಾದ ಹೊತ್ತಿದು.
ಏನು, ಎತ್ತ ಅಗತ್ಯ ಬಿದ್ದಾಗ ತಿಳಿಸುವೆ.
No comments:
Post a Comment