ಲವ್ ಕಾಲ
*ಹೀಗೊಂದು ಜಂಬವೆಂಬ ನಾಟಕ*
' ನೀವು ಎಷ್ಟೇ ಲಾಗಾ ಹೊಡೆದರೂ ನಾ ಬದಲಾಗೋದಿಲ್ಲ, ಆದರೆ ನೋಡಿ ಖುಷಿ ಪಡುವೆ' ಈ ಹೇಳಿಕೆ ಸಾಕಲ್ಲ ನಾ ಮುಂದುವರೆಯಲು.
ಆದರೆ ನಾ ಹಾಗೆ ಮಾಡಲ್ಲ. ನನಗೂ ನನ್ನ ಘನತೆ ಗೊತ್ತಿದೆ. ಆದರೆ ಒಳಗೊಂದು, ಹೊರಗೊಂದು ಇರಬಾರದೆಂಬ ಕಾರಣಕ್ಕೆ ಸತ್ಯ ಹೇಳಿ ಹಗುರಾದೆ.
ಮನಸಿನಲ್ಲಿ ಉಂಟಾದ ಎಲ್ಲ ಭಾವನೆಗಳು ಶಾಶ್ವತವಾಗಿ ನೆಲೆಗೊಳುತ್ತವೆ ಎಂಬ ನಂಬಿಕೆ ಯಾವತ್ತೋ ಕಳೆದುಕೊಂಡಿದ್ದೇನೆ.
ಮನಸು ಮೋಡದ ಹಾಗೆ ಚಲಿಸುತ್ತಲೇ ಇರುತ್ತೆ.
ಆದರೆ ಆ ಚಲಿಸುವಿಕೆಯನ್ನು ನಾವೇ ಮೂರನೇ ವ್ಯಕ್ತಿಯಾಗಿ ಗಮನಿಸಬೇಕು. ನಿಲ್ಲಿಸಬಾರದು.
ನಿಲ್ಲಿಸಿದರೇ ಅಥವಾ ಗಮನಿಸದಿದ್ದರೂ ಮನಸು ವಿಕಾರವಾಗುತ್ತದೆ.
ಹರಿಯುವ ನದಿಗೆ ತಡೆಯೊಡ್ಡಬಾರದು. ತಡೆದಾಗ ಮಲಿನವಾಗುತ್ತೆ. ಮನಸೆಂಬ ನದಿ ಹರಿಯುತ್ತ ಹರಿಯುತ್ತ ಶುದ್ಧವಾಗಿ ಪರಿಶುದ್ಧವಾಗಬೇಕು.
ನಾನು ಪರಿಶುದ್ಧ ಎಂಬ ಜಂಬ ಬಿಟ್ಟ ಮೇಲೆ ನಿನ್ನ ಬಗ್ಗೆ ಉಂಟಾದ ಆಸೆ ಹೇಳಿಕೊಂಡಿದ್ದೇನೆ.
ಒಪ್ಪುವುದು, ಬಿಡುವುದು ನಿನಗೆ ಬಿಟ್ಟದ್ದು.
ಅಹಂಕಾರ, ಅನುಮಾಗಳಿದ್ದರೆ ಸತ್ಯ ಹೇಳುವ ಧೈರ್ಯ ಬರುವುದಿಲ್ಲ.
*ಪರಸ್ಪರ ಹೇರಿಕೊಳ್ಳುವ ದಿಗ್ಬಂಧನಗಳು ಅಷ್ಟೇ ಮಹತ್ವ ಪಡೆಯುತ್ತವೆ*. ಹಾಗೆ ಹೇರಿಕೊಳ್ಳಬೇಕು ಕೂಡಾ.
ಮನದಲಿ ಉಂಟಾಗುವ ತಲ್ಲಣಗಳನ್ನು ಹೇಳುತ್ತಲೇ ಇರುತ್ತೇನೆ. ನೀನು ಕೇಳುತ್ತಲೇ ಇರಬೇಕು. ಕೇಳಿಸಿಕೊಳ್ಳದ ಹಾಗೆ ನಟಿಸುತ್ತಲೇ.
ಕೇವಲ ದೇಹ ಸೌಂದರ್ಯ ನೋಡಿ ಮರುಳಾದೆ ಎಂಬ ದಿಮಾಕು ಇಟ್ಟುಕೊಳ್ಳಬೇಡ. ಹಾಗೆ ಅಂದುಕೊಂಡರೆ ನನ್ನಲ್ಲಿ ನಿನಗರಿವಿಲ್ಲದಂತೆ ಕಳೆದುಹೋಗುತ್ತೀ ಅಷ್ಟೇ.
ಸೌಂದರ್ಯ, ದೈಹಿಕ ತಾಕತ್ತು ಇಳಿದು ಹೋಗುತ್ತೆ ಆದರೆ ಮನಸಿನ ಚೈತನ್ಯ ಉಕ್ಕುತ್ತಲೇ ಇರುತ್ತೆ.
ದೇಹ ನಂಬಿ ಬಂದ ಬಂಧನಗಳು ಅಷ್ಟೇ ಬೇಗ ಕಳೆದುಹೋಗುತ್ತವೆ. ಎಣ್ಣೆ ತೀರಿದ ಮೇಲೆ ಬತ್ತಿಗೇನು ಕೆಲಸ.
ದೇಹ ಪ್ರೀತಿಯ ಅಭಿವ್ಯಕ್ತಿಯ ಸಂಕೇತ, ಎಲ್ಲವೂ ಅಲ್ಲ.
I will tie my bondage with souls not with body. ದೇಹವ ಕಾಯಬಹುದು ಆದರೆ ಮನಸನ್ನಲ್ಲ .
ಹಾಗೆ ಕಾಯುವುದು ಮುಠ್ಠಾಳತನ.
ನಂಬಿಗೆಯಿಂದ ನಿನ್ನ ಬಿಗಿ ಹಿಡಿದು ಬಿಗಿದಪ್ಪಿದ್ದೇನೆ.
ಆಚೀಚೆ ಅಲುಗದ ಹಾಗೆ.
ನನ್ನೊಳಗೆ ನೀನಿರುವಾಗ ನಿನ್ನೊಳಗೂ ನಾ ಇರಲೇಬೇಕು. ಜಂಬ, ಜಗಳ ಬರೀ ನಾಟಕ.
ಈ ನಾಟಕ ಒಮ್ಮೆ ಮುಗಿಯಲೇ ಬೇಕು...
ನಾವು ಮುಗಿಸುವ ಮುನ್ನ...
----ಸಿದ್ದು ಯಾಪಲಪರವಿ.
No comments:
Post a Comment