Friday, April 20, 2018

ಅಕ್ಕ-ಅಲ್ಲಮ ನೀನಾ ಮಹಾಮಾಯೆ

*ಅಕ್ಕ-ಅಲ್ಲಮ ನೀನಾ ಮಹಾಮಾಯೆ*

ಆಕಾಶಕೆ ಭೂಮಿ ಭೂಮಿಗೆ
ಆಕಾಶ ಹೆಣ್ಣಿಗೆ ಗಂಡು ಗಂಡಿಗೆ
ಹೆಣ್ಣು ಮಹಾಮಾಯೆ ಎನ್ನಲಾದೀತೇ?

ನಿರ್ಮೋಹಿ ಅಕ್ಕನಿಗೆ ಕಾಡುವ ಚನ್ನ
ಮಲ್ಲಿಕಾರ್ಜುನ ವಿರಾಗಿ ಅಲ್ಲಮಂಗೆ
ಗುಹೇಶ್ವರನ ಗುಂಗೆಂಬ ಮಾಯೆ

ಹಿಡಿದುದ ಬಿಡಲು ಮತ್ತೇನೋ ಹಿಡಿಯುವ
ತುಡಿತ ಬಿಡುವೆ ಬಿಟ್ಟೆನೆಂಬ ಅಹಮಿಕೆಯ
ಮಾಯೆಗೆ ಸೋಲದಿರಲಾದೀತೆ?

ದಟ್ಟಡವಿಯಲಿ ಅಲೆಯುತ ಮೃಗಗಳ
ಲೆಕ್ಕಿಸದ ಅಕ್ಕನಿಗೆ ಒಲಿಯದ ಗಂಡನ
ಒಲಿಸುವ ಪರಿ ಪರಿಯ ನಿವೇದನೆಯ
ಮಹಾಮಾಯೆ

ಛೀ ಹೋಗಾಚೆ , ತೊಲಗೆಂದು ದೂಡಿದ
ಅಹಮಿಕೆಯಲಿ ಗೆದ್ದ ಬಿಗುಮಾನ ಸೋತವಳಲ್ಲ
ಮಾಯೆ ಗೆಲ್ಲಲಿಲ್ಲ ಇಲ್ಲಿ ಅಲ್ಲಮ‌

ಕಣ್ಣೋಟದಿ ಕೆರಳಿಸಿ ಕರಗಿದ
ಮನಸನರಿಯದೆ ಮೈಮನಗಳ
ಪುಳಕಗೊಳಿಸಿ ಬೆಂಬಿಡದೇ ಶಬ್ದ
ಮಾಲೆ ಪೋಣಿಸಿ ಹಾಡಿ ನಲಿದು
ಎದೆ ಗೂಡ ಸೇರ ಬಯಸುವಾಗ
ದೂರ ದೂಡಿ
ನಾ
ಸಂತನೆಂಬುದ್ಯಾವ ನ್ಯಾಯ?

ಕರಗಿ ನಿರಾಗಿ ನಂಬಿ ಕಳೆದು ಹೋಗುವ
ಹೆಣ್ಣ ನೋಯಿಸುವದ್ಯಾವ ಪುರುಷಾರ್ಥ?

ಕರಗುವ ಕರಗಿಸುವ ಪರಿಯಲಿ
ಕಳೆದವರ ವಿಳಾಸವಿಲ್ಲ‌ ಇಬ್ಬರೂ
ಒಬ್ಬರಿಗೊಬ್ಬರು ಪಡೆದು ಮೈಮರೆತು

ಅರಳಿ ಕೆರಳಿ ಅಂಗೈಯಲಿ ನಲುಗುವ
ತಮ್ಮತನವ ಅಲುಗಾಡಿಸಿ ರಸಾನುಭೂತಿಯ
ಚಿಮ್ಮಿಸಿ ಉಕ್ಕಿ ಹರಿದಾಗ ಎಲ್ಲವೂ
ಹಗುರ ನಿರಾತಂಕ

ಮೈತುಂಬ ಹರಿಯುವ ಬೆವರ ಸೆಲೆಯಲಿ
ಬೆರೆತ ಮಾಯೆಯಲಿ ಸೋಲು ಗೆಲುವಿನ
ಸೊಲ್ಲಿಲ್ಲ

ನನಗೆ ನೀ
ನಿನಗ ನಾ
ಮಹಾ
ಮಾಯೆ.

---ಸಿದ್ದು ಯಾಪಲಪರವಿ.

No comments:

Post a Comment