*ಲವ್ ಕಾಲ*
*ಪುಟ್ಟ ಮನೆಯ ದೊಡ್ಡ ಮನಸು*
'ಈಗ ಅನಿಸುತ್ತೆ ಅಷ್ಟೊಂದು ಪುಟ್ಟ ಮನೆಯಲ್ಲಿ ಇರಲು ಸಾಧ್ಯಾನಾ ?'
ಆದರೂ ಇದ್ದೆವಲ್ಲ, ಅದೂ ತುಂಬ ಖುಷಿಯಿಂದ.
ನಾನೊಬ್ಬ so called professor ನೆಲದ ಮೇಲೆ ಕುಳಿತುಕೊಳ್ಳಬಾರದೆಂಬ ಭ್ರಮೆಯಿಂದ ಒಂದು ಕುರ್ಚಿ ತಗೊಂಡಿದ್ದೆ.
ಆಗೀಗ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ ದೊಡ್ಡಮನೆಯ ಹುಡುಗಿಯರು ಯಾಕೆ ಪಿಸುಪಿಸು ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು ಎಂಬುದು ಈಗ ಅರ್ಥವಾಗಿದೆ.
ಹೊಸದಾಗಿ ಮದುವೆಯಾದ ನಮಗೆ ಬೆಡ್ ರೂಮ್ ಇಲ್ಲ ಎಂಬ ಕೊರಗು ಅವರದು.
ಇಡೀ ಮನೆಯ ಅಳತೆ 10/15 ಅದರಲ್ಲಿನ ಗೋಡೆಯ ಆಚೆ ಅಡುಗೆಮನೆ, ಬಚ್ಚಲು, ಮೂಲೆಯಲಿ ದೇವರು.
ಬಾಗಿಲು ತಗೆದ ಕೂಡಲೇ ಹಗಲು ಹಾಲ್ ,ರಾತ್ರಿ ಮಲಗಿದ ಮೇಲೆ ಅದೇ ಬೆಡ್ ರೂಮ್.
ನಮಗದು ಏನೂ ಅನಿಸಲೇ ಇಲ್ಲ. ಅದೇ ಮನೆಗೆ ಬರುತ್ತಿದ್ದ ಸಂಬಂಧಿಕರು, ಸ್ವಾಮಿಗಳು, ಸಾಹಿತಿಗಳು ಪುಟ್ಟ ಅಶೋಕ ಸ್ಟೋವ್ ಮೇಲೆ ಮಾಡುತ್ತಿದ್ದ ಊಟ ಸವಿದು ಹರಸುತ್ತಿದ್ದರು.
ರಾಮಕೃಷ್ಣ ಮಠದ ಪೂಜ್ಯ ನಿರ್ಭಯಾನಂದ ಶ್ರೀಗಳು ಒಮ್ಮೆ 'ಊಟಕ್ಕೆ ಬರುವೆ' ಎಂದಾಗ ಹೇಗಾಗಿರಬೇಡ. ಬಂದದ್ದು ಒಟ್ಟು ನಾಲ್ಕು ಜನ.
ಇರುವ ಒಂದೇ ಸ್ಟೋವ್. ಗ್ಯಾಸ್ ಸಿಲೆಂಡರ್ ಊಹೆಗೂ ಮೀರಿದ ಕಾಲವದು. ಆದರೂ ಚಪಾತಿ, ಪಲ್ಯ ಅರ್ಧ ಗಂಟೆಯಲಿ ರೆಡಿ. ಯಾಕೆ ತಡವಾಯಿತು ಎಂದು ಸ್ವಾಮಿಗಳಿಗೆ ನಂತರ ತಿಳಿಯಿತು.
ಈಗವರು ದೊಡ್ಡ ಆಶ್ರಮವಾಸಿಗಳು. ನಾನೂ ಅಷ್ಠೇ ಅದರೂ ನಾ ಆ ಪುಟ್ಟ ಸ್ವರ್ಗ ಮರೆತಿಲ್ಲ. ಮರೆಯುವದೂ ಇಲ್ಲ.
ಮದುವೆಯಾದ ಹೊಸದರಲ್ಲಿ ಮಲಗಲು ಹಾಸಿಗೆ ಬೇಕೆಂದು ಅನಿಸಲೇ ಇಲ್ಲ ಅದರೂ ಒಳಗಿದ್ದ ಒಲವಧಾರೆಯಿಂದಾಗಿ, ಜೀವನ ಸುಖಮಯ
ಅನಿಸಿದ್ದರಿಂದಲೇ ಮಗಳು ಹುಟ್ಟಿದಳು.
ಅದೇ ಮನೆಯಲ್ಲಿ ನಮ್ಮನ್ನು ಕಂಡವರು ಈಗ ದೊಡ್ಡಮನೆ ನೋಡಿದಾಗ ಖುಷಿ ಪಡುತ್ತಾರೆ.
ಆದರೆ ನನಗೆ ಮತ್ತೆ ಮತ್ತೆ ಆ ಖುಷಿ ಬೇಕೆನಿಸುತ್ತದೆ.
*ಈ ದೊಡ್ಡ ಮನೆಯ ಮೂಲೆ ಮೂಲೆಯಲ್ಲೂ ಒಲವ ವರತೆ ಹುಡುಕುತ್ತಲೇ ಇದ್ದೇನೆ*
----ಸಿದ್ದು ಯಾಪಲಪರವಿ.
No comments:
Post a Comment