ಲವ್ ಕಾಲ
*ಅಸ್ಪಷ್ಟ ಕಾರಣ ಮತ್ತು ನಾನು*
ಮತ್ತದೇ ರಗಳೆ. ಹೋಗಬೇಡ ಎನ್ನುವುದನ್ನು ಒಪ್ಪಿಕೊಳ್ಳಲು ನಿನಗೆ ಸ್ಪಷ್ಟ ಕಾರಣ ಬೇಕು.
ಆದರೆ ನನಗದು ಅಸಾಧ್ಯ.
ನೀ ಎಷ್ಟೇ ಒತ್ತಾಯಿಸಿದರೂ ಕೆಲವು ರಹಸ್ಯಗಳನ್ನು ಬಿಟ್ಟು ಕೊಡಬಾರದು. ಕೊಡಲಾಗದು ಕೂಡ.
ಇಂತಹ bondage ನಿಂತಿರುವುದೇ ತೀವ್ರತೆ ಮತ್ತು ನಂಬಿಕೆಗಳ ಆಧಾರದ ಮೇಲೆ.
ಆ ತೀವ್ರತೆ ಮತ್ತು ನಂಬಿಕೆ ಇದ್ದ ಮೇಲೆ ದಯವಿಟ್ಟು ಕಾರಣ ಕೇಳದೇ ಹೇಳಿದ್ದನ್ನು ಒಪ್ಪಿಕೋ.
ಪ್ರೀತಿಗೆ ತನ್ನದೇ ಆದ ಸಾತ್ವಿಕ ಹಟ ಇರುತ್ತದೆ. ದಕ್ಕಿಸಿಕೊಳ್ಳುವುದು ಸುಲಭ ಆದರೆ ಉಳಿಸಿಕೊಳ್ಳುವುದು ಕಷ್ಟ ಎಂದು ಗೊತ್ತಿರುತ್ತೆ.
ಏನೇ ಆಗಲಿ ಈ ಬಾಂಧವ್ಯ ಉಳಿಯಲೇಬೇಕೆಂಬ ಕಾರಣದಿಂದ ಕೆಲವು ಸ್ವಯಂಘೋಷಿತ ನಿರ್ಣಯಗಳನ್ನು ಪಾಲಿಸಬೇಕಾಗುತ್ತೆ.
ನಮ್ಮ ಆಸೆ ಹಾಗೂ ಪ್ರೀತಿಯನ್ನು ಅಳೆದು ತೂಗಿದಾಗ ಆಸೆಗಿಂತ ಪ್ರೀತಿ ದೊಡ್ಡದಾಗುತ್ತದೆ.
ಸಣ್ಣ ಆಸೆಗಳನ್ನು ದೂರ ದೂಡಿ ಒಲವ ಹಣತೆ ಬೆಳಗಿಸಬೇಕು.
ಸಣ್ಣ ಪುಟ್ಟ ತ್ಯಾಗಗಳು ದೊಡ್ಡ ಖುಷಿ ನೀಡುತ್ತವೆ.
ಆರಂಭದಲ್ಲಿ ಇದು ಕೊಂಚ ಕಿರಿಕಿರಿ ಎನಿಸಿದರೂ, *ಇಗೋ* ಬದಿಗಿರಿಸಿ ಆಲೋಚಿಸಿದಾಗ ಮನಸು ನಲಿದು ಪ್ರೀತಿಗೆ ಒಲಿಯುತ್ತದೆ.
ಬಿಗಿಗೊಂಡ ಬಂಧನಗಳು ಸಡಿಲವಾಗುವದು ನಮ್ಮ ಅಜ್ಞಾನ ಹಾಗೂ ಅಹಂಕಾರದಿಂದ.
ಅವುಗಳಿಗೆ ಬಲಿಯಾಗದಂತೆ ಮನಸನು ಹುರಿದುಂಬಿಸಬೇಕು.
ಅನುಮಾನವೆಂಬ ವಿಷ ಕುಡಿದು ನರಳಿ, ನಲುಗಬಾರದು.
ಪ್ರೀತಿ ಹೂ ಬಾಡದಂತೆ ಒಲವ ಜಲ ಹರಿಸಿ ನಸುನಗುತ ಖುಷಿಯಾಗಿರೋಣ.
-----ಸಿದ್ದು ಯಾಪಲಪರವಿ.
No comments:
Post a Comment